ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ನರ್ಸಿಂಗ್ ಶುಲ್ಕ ಭರಿಸಲು ಕೂಲಿ ಕೆಲಸ

ಬಾಗಲಕೋಟೆಯಿಂದ ಉಡುಪಿಗೆ ಬಂದು ಗಾರೆ ಕೆಲಸ ಮಾಡುತ್ತಿರುವ ಬುಡ್ಡನಗೌಡ ಚಂದಪ್ಪ ಅಕರಗಲ್‌
Last Updated 27 ಅಕ್ಟೋಬರ್ 2020, 13:42 IST
ಅಕ್ಷರ ಗಾತ್ರ

ಉಡುಪಿ: ಬಡತನದ ಬೇಗೆಗೆ ಸಿಲುಕಿ ಶಿಕ್ಷಣ ಮೊಟಕುಗೊಳಿಸಿರುವ ಉತ್ತರ ಕರ್ನಾಟಕ ಭಾಗದ ಹಲವು ಕೂಲಿ ಕಾರ್ಮಿಕರು ಜಿಲ್ಲೆಯಲ್ಲಿದ್ದಾರೆ. ಇವರ ಪೈಕಿ ಬಾಗಲಕೋಟೆ ಜಿಲ್ಲೆ ಬದಾಮಿ ತಾಲ್ಲೂಕಿನ ನಾಗರಾಳ್‌ನ ಬುಡ್ಡನಗೌಡ ಚಂದಪ್ಪ ಅಕರಗಲ್‌ (ಶಶಿಕುಮಾರ್) ವಿಶೇಷ ಕಾರಣಕ್ಕೆ ಗಮನ ಸೆಳೆಯುತ್ತಾರೆ. ಶಶಿಕುಮಾರ್ ಇಲ್ಲಿ ಕೂಲಿ ಮಾಡುತ್ತಿರುವುದು ಶಿಕ್ಷಣ ವಂಚಿತನಾಗಿ ಅಲ್ಲ; ಬದಲಾಗಿ ಶಿಕ್ಷಣ ಪಡೆಯಲು ಎಂಬುದು ವಿಶೇಷ.

ಬಾಗಲಕೋಟೆಯ ಹಾನಗಲ್‌ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಿಎಸ್‌ಸಿ ಪ್ರಥಮ ವರ್ಷದ ನರ್ಸಿಂಗ್‌ ಪ್ರವೇಶಾತಿ ಪಡೆಯಲು ಬೇಕಿರುವ ₹ 60,000 ಶುಲ್ಕಕ್ಕಾಗಿ ಬುಡ್ಡನಗೌಡ ಒಂದೂವರೆ ತಿಂಗಳಿನಿಂದ ಉಡುಪಿಯಲ್ಲಿ ಸಹಾಯಕ ಗಾರೆ ಕೆಲಸಗಾರನಾಗಿ ದುಡಿಯುತ್ತಿದ್ದಾರೆ. ಸದ್ಯ ₹ 20,000ದಷ್ಟು ಹಣ ಒಟ್ಟು ಮಾಡಿರುವ ಅವರು ಕಾಲೇಜು ಆರಂಭವಾಗುವ ಹೊತ್ತಿಗೆ ಇನ್ನು ₹ 10,000 ದುಡಿಯುವ ಹುಮ್ಮಸ್ಸಿನಲ್ಲಿದ್ದಾರೆ.

ಕಾಲೇಜಿಗೆ ರಜೆ ಇದ್ದಾಗ ಸಮಯ ವ್ಯರ್ಥ ಮಾಡದೆ ಉಡುಪಿಗೆ ಕೂಲಿ ಕೆಲಸ ಅರಸಿ ಬರುವ ಬುಡ್ಡನಗೌಡ, ವಿದ್ಯಾಭ್ಯಾಸಕ್ಕೆ ಅಗತ್ಯವಿರುವಷ್ಟು ಹಣವನ್ನು ದುಡಿದು ಮರಳಿ ಊರು ಸೇರುತ್ತಾರೆ. ಎಸ್ಸೆಸ್ಸೆಲ್ಸಿ ಮುಗಿಸಿದ ಬಳಿಕ ಪಿಯುಸಿ ಪ್ರವೇಶ ಶುಲ್ಕವನ್ನು ಕೂಲಿ ಮಾಡಿದ ಹಣದಿಂದಲೇ ಭರಿಸಿದ್ದು ಎನ್ನುತ್ತಾರೆ ಬುಡ್ಡನಗೌಡ.

ವೈದ್ಯನಾಗಬೇಕು ಎಂಬ ಕನಸಿತ್ತು. ಆದರೆ, ಕೋವಿಡ್‌ ಕಾರಣದಿಂದ ನೀಟ್‌ ಪರೀಕ್ಷೆಗೆ ಉಚಿತವಾಗಿ ತರಬೇತಿ ಸಿಗದ ಪರಿಣಾಮ ಬಹಳ ಕಡಿಮೆ ಅಂಕಗಳು ಬಂದವು. ಹಾಗಾಗಿ, ವೈದ್ಯ ವೃತ್ತಿಯ ಆಸೆ ಬಿಟ್ಟು, ನರ್ಸಿಂಗ್ ಮಾಡಲು ನಿರ್ಧರಿಸಿದ್ದೇನೆ. ಕಾಲೇಜಿನ ಶುಲ್ಕ, ಹಾಸ್ಟೆಲ್‌ ಖರ್ಚು, ಪುಸ್ತಕಗಳ ಖರೀದಿಗೆ ಸಾಕಷ್ಟು ಹಣದ ಅಗತ್ಯತೆ ಇರುವುದರಿಂದ ಗಾರೆ ಕೆಲಸ ಮಾಡುತ್ತಿದ್ದೇನೆ ಎಂದರು.

ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಪೋಷಕರು ನಿತ್ಯ ಕೂಲಿಗಾಗಿ ಸಿಟಿ ಬಸ್‌ ನಿಲ್ದಾಣದಲ್ಲಿ ನಿಲ್ಲುತ್ತಾರೆ. ನನ್ನ ವಿದ್ಯಾಭ್ಯಾಸಕ್ಕೆ ಕೈಲಾದಷ್ಟು ನೆರವು ನೀಡುವುದಾಗಿ ತಿಳಿಸಿದ್ದಾರೆ. ಕಾಲೇಜು ಆರಂಭವಾಗಲು ಇನ್ನೂ 20 ದಿನ ಕಾಲಾವಕಾಶವಿದ್ದು, ಅಷ್ಟರಲ್ಲಿ ಸಾದ್ಯವಾದಷ್ಟು ದುಡಿದುಕೊಂಡು ಹೋಗುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದರು ಬುಡ್ಡನಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT