ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಜಿಲ್ಲೆಯ ಐತಿಹಾಸಿಕ ತಾಣಗಳಿಗಿಲ್ಲ ಸಂರಕ್ಷಣೆ

ಇಂದು ವಿಶ್ವ ಪ್ರವಾಸೋದ್ಯಮ ದಿನ: ಕೇವಲ ಐದು ತಾಣಗಳಿಗಷ್ಟೇ ಎಎಸ್‌ಐ ಸಂರಕ್ಷಣೆ
Published : 27 ಸೆಪ್ಟೆಂಬರ್ 2024, 5:59 IST
Last Updated : 27 ಸೆಪ್ಟೆಂಬರ್ 2024, 5:59 IST
ಫಾಲೋ ಮಾಡಿ
Comments

ಉಡುಪಿ: ಜಿಲ್ಲೆಯಲ್ಲಿ ಗತ ಇತಿಹಾಸದ ಕುರುಹುಗಳಾಗಿ ಇಂದಿಗೂ ನೆಲೆನಿಂತಿರುವ ಹಲವು ಐತಿಹಾಸಿಕ ತಾಣಗಳು ಸೂಕ್ತ ಸಂರಕ್ಷಣೆ ಇಲ್ಲದೆ ಅಳಿವಿನಂಚಿಗೆ ತಲುಪಿವೆ.

ಕೇವಲ ಐದು ಐತಿಹಾಸಿಗಳ ತಾಣಗಳಷ್ಟೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅಧೀನದಲ್ಲಿವೆ. ಆದರೆ ಇನ್ನೂ ಹಲವು ಅಮೂಲ್ಯವಾದ ಐತಿಹಾಸಿಕ, ಪ್ರಾಗೈತಿಹಾಸಿಕ ತಾಣಗಳು ತೀವ್ರ ನಿರ್ಲಕ್ಷ್ಯಕ್ಕೊಳಗಾಗಿವೆ.

ಇಂತಹ ಐತಿಹಾಸಿಕ ತಾಣಗಳನ್ನು ಸಂರಕ್ಷಿಸಿ, ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಿದರೆ ಇನ್ನಷ್ಟು ಪ್ರವಾಸಿಗರು, ಇತಿಹಾಸ ಪ್ರೇಮಿಗಳು ಜಿಲ್ಲೆಗೆ ಭೇಟಿ ನೀಡಬಹುದು.

ಬಾರ್ಕೂರಿನ ಕತ್ತಲೆ ಬಸದಿ, ಕಾರ್ಕಳದ ಗೊಮ್ಮಟೇಶ್ವರ ಪ್ರತಿಮೆ, ಚತುರ್ಮುಖ ಬಸದಿ, ಅನಂತಪದ್ಮನಾಭ ದೇವಾಲಯ ಮತ್ತು ಹಿರಿಯಂಗಡಿಯ ಮಾನಸ್ಥಂಭವು ಎಎಸ್‌ಐ ಅಧೀನದಲ್ಲಿವೆ.

12ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು ಎಂದು ಅಂದಾಜಿಸಲಾದ ಬಾರ್ಕೂರಿನ ಕತ್ತಲೆ ಬಸದಿ ಸುಸ್ಥಿತಿಯಲ್ಲಿದ್ದರೂ ಇದರ ಸಮೀಪದ ಕಲ್ಲಿನ ಚಪ್ಪರದ ಕೆಲವು ಭಾಗಗಳು ಹಲವು ವರ್ಷಗಳ ಹಿಂದೆಯೇ ಕುಸಿದಿವೆ. ಈ ಬಸದಿಯಲ್ಲಿದ್ದ ಜೈನ ಮೂರ್ತಿಗಳು ಕೂಡ ನಾಪತ್ತೆಯಾಗಿ ಎಷ್ಟೋ ವರ್ಷಗಳು ಕಳೆದಿವೆ.

ತುಳುನಾಡಿನ ರಾಜಧಾನಿ ಎಂದು ತಿಳಿಯಲಾದ ಬಾರ್ಕೂರಿನ ಕೋಟೆಯ ಅವಶೇಷಗಳು ಸೂಕ್ತ ರಕ್ಷಣೆ ಇಲ್ಲದೆ ಕಣ್ಮರೆಯಾಗುತ್ತಿವೆ.

ಜಿಲ್ಲೆಯಲ್ಲಿ ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಿಸಿದ ಆದಿಮ ಕಲೆಗಳಿರುವ ಅಮೂಲ್ಯ ತಾಣಗಳನ್ನು ಕೇಳುವವರೇ ಇಲ್ಲದೆ ನಾಶದಂಚಿಗೆ ತಲುಪಿವೆ.

ಕುಂದಾಪುರ ತಾಲ್ಲೂಕಿನ ಬುದ್ಧನ ಜೆಡ್ಡು, ಬೈಂದೂರು ತಾಲ್ಲೂಕಿನ ಅವಲಕ್ಕಿ ಪಾರೆಯಲ್ಲಿರುವ ಪ್ರಾಗೈತಿಹಾಸಿಕ ತಾಣಗಳು, ಕಾರ್ಕಳ ತಾಲ್ಲೂಕಿನ ಪಳ್ಳಿಯಲ್ಲಿರುವ ಬೃಹತ್ ಶಿಲಾಯುಗ ಕಾಲದ ಕಲ್ಮನೆ ಸಮಾಧಿ, ಕಾರ್ಕಳದಿಂದ ರೆಂಜಾಳಕ್ಕೆ ತೆರಳುವ ದಾರಿಯಲ್ಲಿ ಬರುವ ಬೋರ್ಕಟ್ಟೆಯಲ್ಲಿರುವ ಕಲ್ಮನೆ ಸಮಾಧಿಗಳು ಯಾವುದೇ ರಕ್ಷಣೆ ಇಲ್ಲದೆ ಸೊರಗುತ್ತಿವೆ.

ಕಲ್ಲು ಗಣಿಗಾರಿಕೆ, ಕೈಗಾರಿಕಾ ಪ್ರದೇಶಗಳ ವಿಸ್ತರಣೆಯಿಂದಾಗಿಯೂ ಜಿಲ್ಲೆಯ ಹಲವು ಐತಿಹಾಸಿಕ ತಾಣಗಳು ಅವಸಾನದಂಚಿಗೆ ತಲುಪಿವೆ.

ಹೊಸದಾಗಿ ಯಾವುದೇ ಐತಿಹಾಸಿಕ ತಾಣಗಳನ್ನು ಎಎಸ್‌ಐ ಅಧೀನಕ್ಕೆ ತರುವ ಪ್ರಸ್ತಾವವಿಲ್ಲ. ಯಾವುದಾದರೂ ಒಂದು ತಾಣವನ್ನು ಎಎಸ್‌ಐ ಸಂರಕ್ಷಿಸಬೇಕಾದರೆ ಅದನ್ನು ಸರ್ಕಾರ ಅಥವಾ ದೇವಸ್ಥಾನ ಮಂಡಳಿಯವರು ಶಿಫಾರಸು ಮಾಡಬೇಕಾಗುತ್ತದೆ ಎನ್ನುತ್ತವೆ ಎಎಸ್‌ಐ ಮೂಲಗಳು.

ಒಂದು ಐತಿಹಾಸಿಕ ತಾಣವನ್ನು ಎಎಸ್‌ಐ ಅಧೀನಕ್ಕೆ ತೆಗೆದುಕೊಂಡರೆ, ಅದರ ಸುತ್ತಮುತ್ತಲಿನ ಪ್ರದೇಶಗಳು ಕೆಲವು ನಿರ್ಬಂಧಕ್ಕೆ ಒಳಗಾಗುತ್ತವೆ. ಈ ಕಾರಣಕ್ಕೆ ಸ್ಥಳೀಯರು ಇಂತಹ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ತಿಳಿಸಿವೆ.

ಬೈಂದೂರಿನ ಸೇನೇಶ್ವರ ದೇವಾಲಯವನ್ನು ಕರಾವಳಿ ಕರ್ನಾಟಕದ ಬೇಲೂರು, ಹಳೆಬೀಡು ಎನ್ನಬಹುದು. ಈ ದೇವಾಲಯವು ಮುಜರಾಯಿ ಇಲಾಖೆಯ ಅಧೀನದಲ್ಲಿದೆ. ಅಪೂರ್ವ ಶಿಲ್ಪಕಲೆ ಇರುವ ಇಂತಹ ದೇಗುಲಗಳನ್ನು ಎಎಸ್ಐ ಅಧೀನಕ್ಕೆ ನೀಡಬೇಕು ಎನ್ನುತ್ತಾರೆ ಪುರಾತತ್ವ ಶಾಸ್ತ್ರಜ್ಞ ಮುರುಗೇಶಿ ಟಿ. ತುರುವೇಕೆರೆ.

ಪಡುಬಿದ್ರಿಯ ನಿನ್ನಿಕಲ್ಲು ಪಾದೆಯಲ್ಲಿ 16ನೇ ಶತಮಾನಕ್ಕೆ ಸೇರಿದ ಅಪೂರ್ವ ಶಿಲ್ಪಗಳಿವೆ ಇದರ ಸಂರಕ್ಷಣೆ ಅತ್ಯಗತ್ಯವಾಗಿದೆ. ಉದ್ಯಾವರದಲ್ಲಿ ಆಳುಪ ರಾಜಧಾನಿ ಇದ್ದ ಪ್ರದೇಶದಲ್ಲಿ 35ಕ್ಕೂ ಹೆಚ್ಚು ಶಾಸನಗಳು ನಿರ್ಲಕ್ಷ್ಯಕ್ಕೊಳಗಾಗಿವೆ ಎನ್ನುತ್ತಾರೆ ಅವರು.

 ಬುದ್ಧನ ಜೆಡ್ಡುವಿನಲ್ಲಿ ಬಂಡೆ ಮೇಲೆ ಕೊರೆದ ಚಿತ್ರ
 ಬುದ್ಧನ ಜೆಡ್ಡುವಿನಲ್ಲಿ ಬಂಡೆ ಮೇಲೆ ಕೊರೆದ ಚಿತ್ರ
ಅವಲಕ್ಕಿ ಪಾರೆಯಲ್ಲಿ ಬಂಡೆಯಲ್ಲಿ ಕೊರೆದಿರುವ ಚಿತ್ರ
ಅವಲಕ್ಕಿ ಪಾರೆಯಲ್ಲಿ ಬಂಡೆಯಲ್ಲಿ ಕೊರೆದಿರುವ ಚಿತ್ರ
ಜಿಲ್ಲೆಯಲ್ಲಿ ಐತಿಹಾಸಿಕ ಮಹತ್ವವಿರುವ ದೇಗುಲಗಳಿಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಬೀಚ್‌ ಹಿನ್ನೀರು ಪ್ರದೇಶಗಳಲ್ಲಿ ಜಲಸಾಹಸ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ
ಕುಮಾರ್‌ ಸಿ.ಯು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ಕುಂದಾಪುರ ಬೈಂದೂರು ಮತ್ತು ಕಾರ್ಕಳ ತಾಲ್ಲೂಕುಗಳಲ್ಲಿರುವ ಪ್ರಾಗೈತಿಹಾಸಿಕ ತಾಣಗಳನ್ನು ಎಎಸ್‌ಐ ಅಧೀನಕ್ಕೆ ತರಲು ಸರ್ಕಾರ ಶಿಫಾರಸು ಮಾಡಿದರೆ ಅವುಗಳು ನಾಶವಾಗದಂತೆ ತಡೆಯಬಹುದು
ಮುರುಗೇಶಿ ಟಿ. ತುರುವೇಕೆರೆ ಪುರಾತತ್ವಶಾಸ್ತ್ರಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT