ಕಾರ್ಕಳ: ಯಕ್ಷಗಾನದಲ್ಲಿ ಸಮಾಜಮುಖಿ ಚಿಂತನೆ ಮತ್ತು ಒಳಗೊಳ್ಳುವಿಕೆ ಅಗತ್ಯವಿದೆ ಎಂದು ಯಕ್ಷಗಾನ ಹಿಮ್ಮೇಳ ಕಲಾವಿದರಾಗಿರುವ ಬೈಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಭಟ್ ಹೇಳಿದರು.
ನಗರದ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಕಾಲೇಜಿನ ಯಕ್ಷಗಾನ ಹಾಗೂ ಲಲಿತಕಲಾ ಸಂಘದ ವಾರ್ಷಿಕ ಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನ ದೇವರಕಲೆ. ತಳಮಟ್ಟದಿಂದ ದೃಢವಾದ ಅಭ್ಯಾಸ ಮಾಡಿ ರಂಗಸ್ಥಳದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡುವುದು ಕಲಾವಿದನಾಗುವ ವಿದ್ಯಾರ್ಥಿಯ ಜವಾಬ್ದಾರಿ. ವೃತ್ತಿನಿರತರಾಗಿ ದುಡಿಯುವ ಸಂದರ್ಭದಲ್ಲಿ, ಅಲ್ಲಿಯ ಜನರಿಗೆ ಲಲಿತಕಲೆ ಮತ್ತು ಯಕ್ಷಗಾನದ ತರಬೇತಿ ನೀಡಿ ಅವರನ್ನು ಕೂಡಿಕೊಂಡು ಪ್ರದರ್ಶನಗಳನ್ನ ನೀಡಿದಲ್ಲಿ, ಕಲೆಯ ಪ್ರಸರಣ ವೃದ್ಧಿಗೊಳ್ಳುವುದು ಎಂದರು.
ಯಕ್ಷಗಾನ ತರಬೇತಿ ಗುರು ಮಹಾವೀರ ಪಾಂಡಿ ಮಾತನಾಡಿ, ಸ್ಥಳೀಯ ಯಕ್ಷಗಾನ ವಿದೇಶಗಳಲ್ಲೂ ಹೆಸರುವಾಸಿಯಾಗಿದೆ. ಕಾಲೇಜಿನಲ್ಲಿ ಲಭ್ಯವಿರುವ ಲಲಿತಕಲೆ, ರಂಗಭೂಮಿ ಹಾಗೂ ಯಕ್ಷಗಾನ ತರಬೇತಿಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಕಿರಣ್ ಎಂ.ಮಾತನಾಡಿ, ಕಲಿಕೆ ಹಾಗೂ ಕಲಾ ಪ್ರದರ್ಶನಗಳಲ್ಲಿ ಸಮಾಜದ ಎಲ್ಲಾ ವರ್ಗದವರೂ ಭಾಗವಹಿಸುತ್ತಿರುವುದು ಪ್ರಶಂಸನೀಯ ಎಂದರು.
ಯಕ್ಷಕಲಾ ರಂಗ ಕಾರ್ಕಳ ಮತ್ತು ಕಾಲೇಜಿನ ನಡುವೆ ಯಕ್ಷಗಾನ ಸರ್ಟಿಫಿಕೆಟ್ ಕೋರ್ಸ್ ನಡೆಸುವ ಒಡಂಬಡಿಕೆಯನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಲಾಯಿತು.
ಯಕಗಾನ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾಲೇಜಿನ ಐಕ್ಯುಎಸಿ ಸಂಚಾಲಕಿ ಸುಷ್ಮಾ ರಾವ್, ಪ್ರಾಧ್ಯಾಪಕ ವಿದ್ಯಾಧರ ಹೆಗ್ಡೆ ಎಸ್, ಜಯಭಾರತಿ, ಸುದರ್ಶನ ಬಿ, ಪ್ರಸನ್ನ ಕುಮಾರ್ ಮಂಜುನಾಥ ಬಿ ಹಾಗೂ ಗ್ರಂಥಪಾಲಕ ವೆಂಕಟೇಶ್ ಇದ್ದರು.
ಲಲಲಿತಕಲಾ ಸಂಘದ ಸಂಚಾಲಕಿ ಮೈತ್ರಿ ಬಿ ಸ್ವಾಗತಿಸಿದರು. ಯಕ್ಷಗಾನ ಸಂಘದ ಸಂಚಾಲಕ ಗಣೇಶ್ ವಂದಿಸಿದರು. ವಿದ್ಯಾರ್ಥಿನಿ ಸೌಜನ್ಯ ಭಾಗವತಿಕೆಯಲ್ಲಿ, ಸಂದೇಶ್ ಭಟ್ ಹಾಗೂ ಗಣೇಶ್ ಚೆಂಡೆ ಹಾಗೂ ಮದ್ದಳೆಯಲ್ಲಿ ಸಹಕರಿಸಿದರು. ಸ್ನೇಹಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.