ಸೋಮವಾರ, ಮಾರ್ಚ್ 27, 2023
31 °C
ಉಡುಪಿಯಲ್ಲಿ ಫೆ.11, 12ರಂದು ಯಕ್ಷಗಾನ ಸಮ್ಮೇಳನ: ಕಾರ್ಯಾಧ್ಯಕ್ಷ ಡಾ.ಜಿ.ಎಲ್‌.ಹೆಗಡೆ

ಸರ್ವರ ಸಹಕಾರ: ಸಮ್ಮೇಳನ ಸಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ತೆಂಕು ಬಡಗುತಿಟ್ಟು ಯಕ್ಷಗಾನದ ಮಧ್ಯ ಕೇಂದ್ರವಾಗಿರುವ ಉಡುಪಿಯಲ್ಲಿ ಫೆ.11 ಹಾಗೂ 12ರಂದು ನಡೆಯಲಿರುವ ರಾಜ್ಯದ ಪ್ರಥಮ ‌ಯಕ್ಷಗಾನ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ನಡೆಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್‌.ಹೆಗಡೆ ತಿಳಿಸಿದರು.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದ ಯಶಸ್ಸು ಸಾಮೂಹಿಕ ಸಹಭಾಗಿತ್ವದ ಮೇಲೆ ನಿಂತಿದೆ. ಕಲಾ ಸಂಘಟಕರು, ಕಲಾ ಪೋಷಕರು, ಕಲಾವಿದರು, ಸಂಘ ಸಂಸ್ಥೆಗಳು ಶಕ್ತಿಮೀರಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುವ ಸಮ್ಮೇಳನದಲ್ಲಿ ಯಕ್ಷಗಾನಕ್ಕೆ ಸಂಬಂಧಪಟ್ಟ ಎಲ್ಲ ಪರಿಕರಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಇರಲಿವೆ. ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಚಿತವಾಗಿ ಮಳಿಗೆಗಳನ್ನು ಕೊಡಲಾಗಿದೆ.

‘ಪ್ರದರ್ಶಿನಿ’ ಹೆಸರಿನಲ್ಲಿ ನಡೆಯುವ ಮಳಿಗೆಗಳಲ್ಲಿ ಯಕ್ಷಗಾನಕ್ಕೆ ಬಳಸುವ ಕಶೆ ಸೀರೆ, ತಾಳ, ಗೆಜ್ಜೆ, ಆಭರಣ, ಪರಿಕರಗಳು ಒಂದೇ ವೇದಿಕೆಯಲ್ಲಿ ಕಾಣಸಿಗಲಿದೆ. ಯಕ್ಷಾಭಿಮಾನಿಗಳು ಬಣ್ಣ ಹಚ್ಚಿಸಿಕೊಂಡು ಫೋಟೊ ತೆಗೆಸಿಕೊಳ್ಳಲೂ ಅವಕಾಶವಿದೆ. ಇದಲ್ಲದೆ ವಾಣಿಜ್ಯ ಮಳಿಗೆಗಳು, ಆಹಾರ ಮೇಳ ಇರಲಿದೆ ಎಂದು ಮಾಹಿತಿ ನೀಡಿದರು.

75 ಸಮ್ಮಾನಿತರು:

ಟೆಂಟ್ ಕಟ್ಟುವವರು, ಮೇಕಪ್ ಹಚ್ಚುವವರು, ಆಭರಣ ತಯಾರಿಸುವರು, ಕಲಾವಿದರು, ಮೇಳದ ವ್ಯವಸ್ಥಾಪಕರು, ಮಾಧ್ಯಮಗಳು ಸೇರಿ ಯಕ್ಷಗಾನ ಕ್ಷೇತ್ರಕ್ಕೆ ದುಡಿಯುತ್ತಿರುವ 75 ಮಂದಿಯನ್ನು ಸನ್ಮಾನಿಸಲಾಗುವುದು.

ಯಕ್ಷಗಾನ ಕರಾವಳಿ ಮಾತ್ರವಲ್ಲ; ಕರ್ನಾಟಕದ ಅಸ್ಮಿತೆಯಾಗಿದ್ದು, ಮೈಸೂರು, ಮಂಡ್ಯ, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಘಟ್ಟದಕೋರೆ, ಮೂಡಲಪಾಯ, ಕೇಳಿಕೆ ಸೇರಿದಂತೆ ಹಲವು ಪ್ರಕಾರಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುವುದು ಎಂದರು.

ಮುರಳಿ ಕಡೆಕಾರ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಕ್ಷಗಾನ ಸಮ್ಮೇಳನ ಉದ್ಘಾಟಿಸಲಿದ್ದು, ಕರಾವಳಿಯ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುವ ಯಕ್ಷಗಾನ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪ್ರಧಾನ ವೇದಿಕೆ, ಎರಡು ಉಪ ವೇದಿಕೆ ಸೇರಿ ಮೂರು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಏಕಕಾಲದಲ್ಲಿ ಮೂರೂ ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯುವಂತೆ ವಿಶೇಷವಾಗಿ ವೇದಿಕೆ ನಿರ್ಮಿಸಲಾಗುತ್ತಿದೆ.

ಯಕ್ಷಗಾನ ಸಮ್ಮೇಳನಾದ್ಯಕ್ಷರಾದ ಡಾ.ಪ್ರಭಾಕರ ಜೋಶಿ ಅವರೊಂದಿಗೆ ಸಂವಾದ ನಡೆಯಲಿದೆ. 23 ತಂಡಗಳಿಂದ ಯಕ್ಷಗಾನ ಪ್ರದರ್ಶನಗಳು ಇರಲಿವೆ. ತೆಂಕು, ಬಡಗು, ಮಕ್ಕಳು ಮಹಿಳಾ ಕಲಾವಿದರ ಪ್ರದರ್ಶನ ನೀಡಲಿದ್ದಾರೆ. 2 ದಿನ ಇಡೀ ರಾತ್ರಿ ಬಡಗತಿಟ್ಟು, ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಯಕ್ಷಗಾನಕ್ಕೆ ಸಂಬಂಧಪಟ್ಟ 6 ವಿಚಾರಗೋಷ್ಠಿಗಳು ನಡೆಯಲಿವೆ. ಯಕ್ಷಗಾನ ಕ್ಷೇತ್ರದಲ್ಲಿ ದುಡಿದ 200 ಮಂದಿ ವೃತ್ತಿಕಲಾವಿದರ ಚಿತ್ರಗಳನ್ನು ಸಂಗ್ರಹಿಸಿ ಚೌಕಿಯಲ್ಲಿ ಪ್ರದರ್ಶನಕ್ಕಿಡಲಾಗುವುದು. ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್‌, ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ಅಸ್ರಣ್ಣ ಮಾತನಾಡಿದರು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್‌.ಸಾಮಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಶಿವರುದ್ರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು