ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ ಸಮುದಾಯ ಕೇಂದ್ರಕ್ಕೆ ಜಿಲ್ಲಾ ಆಸ್ಪತ್ರೆ ಶಿಫ್ಟ್‌

ಕಾಮಗಾರಿ ಮುಗಿಯುವವರೆಗೂ ಆಸ್ಪತ್ರೆ ಸ್ಥಳಾಂತರಕ್ಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ: ಸ್ಥಳ ಪರಿಶೀಲನೆಗೆ ಸಿಇಒ ಸೂಚನೆ
Last Updated 18 ನವೆಂಬರ್ 2020, 13:32 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕಿರುವುದರಿಂದ ತಾತ್ಕಾಲಿಕವಾಗಿ ಜಿಲ್ಲಾ ಆಸ್ಪತ್ರೆಯನ್ನು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸುವುದು ಒಳಿತು ಎಂದು ಶಾಸಕ ರಘುಪತಿ ಭಟ್‌ ಭಟ್‌ ವಿಷಯ ಪ್ರಸ್ತಾಪಿಸಿದರು.

ಬುಧವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಆಸ್ಪತ್ರೆ ಕಟ್ಟಡ ಕಾಮಗಾರಿ ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಆರಂಭವಾಗಲಿದೆ. ಆಸ್ಪತ್ರೆಯ ಒಂದೊಂದು ಭಾಗ ಕೆಡವಿ ಕಾಮಗಾರಿ ಮಾಡಿದರೆ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. 2 ವರ್ಷದ ಅವಧಿಗೆ ಜಿಲ್ಲಾ ಆಸ್ಪತ್ರೆ ಸ್ಥಳಾಂತರಿಸಬೇಕಿದೆ. ಬ್ರಹ್ಮಾವರ ಸಮುದಾಯ ಕೇಂದ್ರ, ಡಿಎಚ್‌ಒ ಕಚೇರಿ, ಪಶು ಆಸ್ಪತ್ರೆ ಹಾಗೂ ಬಿಆರ್‌ ಶೆಟ್ಟಿ ಮಹಿಳೆಯರ ಹಾಗೂ ಮಕ್ಕಳ ಆಸ್ಪತ್ರೆಗೆ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ವರ್ಗಾಯಿಸುವುದು ಉತ್ತಮ’ ಎಂದು ಅಭಿಪ್ರಾಯಪಟ್ಟರು.

ಬ್ರಹ್ಮಾವರ ಸಮುದಾಯ ಕೇಂದ್ರಕ್ಕೆ ಜಿಲ್ಲಾ ಆಸ್ಪತ್ರೆ ಸ್ಥಳಾಂತರವಾದರೆ ಕುಂದಾಪುರ, ಕಾರ್ಕಳ ತಾಲ್ಲೂಕಿನ ರೋಗಿಗಳಿಗೆ ಅನುಕೂಲವಾಗಲಿದೆ. ಈ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ಹಾಗೂ ಜಿಲ್ಲಾ ಸರ್ಜನ್‌ ಮಧುಸೂಧನ್ ನಾಯಕ್‌ ಅವರಿಗೆ ಶಾಸಕರು ಸೂಚಿಸಿದರು.

ಸರ್ಜನ್‌ ಮಧುಸೂಧನ್ ನಾಯಕ್‌ ಪ್ರತಿಕ್ರಿಯಿಸಿ, ‘ಬ್ರಹ್ಮಾವರ ಸಮುದಾಯ ಕೇಂದ್ರ ತುಂಬಾ ಹಳೆಯ ಕಟ್ಟಡವಾಗಿರುವುದರಿಂದ ಅಲ್ಲಿಗೆ ಸ್ಥಳಾಂತರಿಸುವುದು ಸೂಕ್ತವಲ್ಲ. ಬದಲಿಗೆ ಅದರ ಪಕ್ಕದಲ್ಲಿರುವ ಹೊಸ ಕಟ್ಟಡಗಳನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.‌

ಜಿಲ್ಲಾ ಆಸ್ಪತ್ರೆ ಸ್ಥಳಾಂತರಕ್ಕೂ ಮುನ್ನ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಿ. ಸ್ಥಳಾಂತರವಾದ ಬಳಿಕ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಯೋಜನೆ ಸಿದ್ಧಪಡಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್‌ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಭತ್ತ ಖರೀದಿ ಕೇಂದ್ರ ಆರಂಭಿಸಿ:

ಜಿಲ್ಲೆಯಲ್ಲಿ ಭತ್ತದ ಕಟಾವು ಮುಗಿಯುತ್ತಾ ಬಂದರೂ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭವಾಗಿಲ್ಲ. ಮಧ್ಯವರ್ತಿಗಳಿಗೆ ಅನುಕೂಲ ಮಾಡಿಕೊಡಲು ಖರೀದಿ ಕೇಂದ್ರ ತೆರೆದಿಲ್ಲವೇ ಎಂದು ಸದಸ್ಯ ಉದಯ ಕೋಟ್ಯಾನ್‌ ಪ್ರಶ್ನಿಸಿದರು.

ಅಕ್ಟೋಬರ್‌ನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಖರೀದಿ ಕೇಂದ್ರ ತೆರೆಯಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಅನುಮತಿ ಸಿಕ್ಕಿದ್ದು, ಶೀಘ್ರವೇ ಖರೀದಿ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಎಪಿಎಂಸಿ ಅಧಿಕಾರಿ ತಿಳಿಸಿದರು.

ಶಾಸಕರ ಅಸಮಾಧಾನ:

‘ಬ್ರಹ್ಮಾವರ–ಹೆಬ್ರಿ (ಚೇರ್ಕಾಡಿವರೆಗಿನ) ಚತುಷ್ಪಥ ರಸ್ತೆ ಕಾಮಗಾರಿಗೆ ಅಡ್ಡಿಯಾಗಿರುವ ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಕಾಮಗಾರಿಗೆ ₹ 30 ಕೋಟಿ ಬಿಡುಗಡೆಯಾಗಿದ್ದರೂ ಕೈಕಟ್ಟಿ ಕೂರುವಂತಾಗಿದೆ. ಮರಗಳ ತೆರವು ಸಂಬಂಧ ಮೂರು ಬಾರಿ ಸಾರ್ವಜನಿಕರ ಅಹವಾಲು ಸಭೆ ನಡೆಸಲಾಗಿದ್ದು, ಯಾರಿಂದಲೂ ಆಕ್ಷೇಪಣೆಗಳು ಕೇಳಿಬಂದಿಲ್ಲ. ಆದರೂ, ಅರಣ್ಯ ಇಲಾಖೆ ಮರಗಳನ್ನು ಕಡಿಯಲು ಅನುಮತಿ ನೀಡುತ್ತಿಲ್ಲ. ಇನ್ಮುಂದೆ, ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆಗೆ ಬಿಡುವುದಿಲ್ಲ’ ಎಂದು ಶಾಸಕ ರಘುಪತಿ ಭಟ್‌ ಆಕ್ರೋಶ ವ್ಯಕ್ತಪಡಿಸಿದರು.

ಮರಗಳ ಮೌಲ್ಯಕ್ಕಿಂತ ಕಡಿಮೆ ಮೊತ್ತಕ್ಕೆ ಗುತ್ತಿಗೆದಾರರು ಟೆಂಡರ್‌ ಹಾಕಿರುವ ಕಾರಣ ಮರಗಳನ್ನು ಕಡಿಯಲು ಅನುಮತಿ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಅರಣ್ಯ ಇಲಾಖೆಯೇ ಖುದ್ದು ಮರಗಳನ್ನು ಕಡಿಸಿ ಡಿಪೋದಲ್ಲಿ ಸಂಗ್ರಹಿಸಿ ಹರಾಜು ಹಾಕಲಿ. ಆದರೆ, ಕಾಮಗಾರಿಗೆ ಅಡ್ಡಿಯಾಗಿರುವರ ಮರಗಳನ್ನು ಮೊದಲು ತೆರವುಗೊಳಿಸಲೇಬೇಕು ಎಂದು ರಘುಪತಿ ಭಟ್‌ ಒತ್ತಾಯಿಸಿದರು.

ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಮಾತನಾಡಿ, ‘ಮರಗಳ ತೆರವು ಸಂಬಂಧ ಡಿಮ್ಯಾಂಡ್ ನೋಟಿಸ್‌ ನೀಡಲಾಗಿದೆ. ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬೈಲೂರು ಕಾರ್ಕಳ ರಸ್ತೆಯಲ್ಲಿಯೂ ಅಪಾಯಕಾರಿ ಮರಗಳಿದ್ದು ತೆರವುಗೊಳಿಸುವಂತೆ ಸದಸ್ಯರು ಒತ್ತಾಯಿಸಿದರು.

ಸದಸ್ಯ ಸುಧಾಕರ್ ಶೆಟ್ಟಿ ಮೈರ್ಮಾಡಿ ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೃಷಿಕರಿಗೆ ನೀಡಲಾಗುತ್ತಿರುವ ಯಂತ್ರಗಳ ಬಾಡಿಗೆ ದುಬಾರಿಯಾಗಿದೆ. ಮಾರುಕಟ್ಟೆಗಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ ಎಂದರು. ದರ ನಿಯಂತ್ರಣ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಸಿಇಒ ಭರವಸೆ ನೀಡಿದರು.

‘ಅವ್ಯವಹಾರ: ಅಧಿಕಾರಿ ವಿರುದ್ಧ ಕ್ರಮ ಇಲ್ಲ’

ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟಂಬೈಲಿನಲ್ಲಿ ₹ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಅವ್ಯವಹಾರ ನಡೆದಿದೆ. ಆದರೂ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳದಿರಲು ಕಾರಣ ಬಹಿರಂಗಪಡಿಸಬೇಕು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಕಾಮಗಾರಿ ಸ್ಥಳ ಪರಿಶೀಲಿಸಿ ಕಳಪೆ ಕಾಮಗಾರಿ ನಡೆದಿದೆ ಎಂದರೂ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ ವಿರುದ್ಧ ಕ್ರಮ ಜರುಗಿಸದೆ, ಕಾಮಗಾರಿಯ ಬಿಲ್‌ ಪಾವತಿ ಮಾಡಿರುವುದು ಎಷ್ಟು ಸರಿ. ಪಾಲನಾ ವರದಿಯಲ್ಲಿಯೂ ತೆಗೆದುಕೊಂಡ ಕ್ರಮದ ಕುರಿತು ಪ್ರಸ್ತಾಪ ಮಾಡಿಲ್ಲದಿರುವುದು ಪ್ರಕರಣ ಮುಚ್ಚಿಹಾಕುವ ಷಡ್ಯಂತ್ರ ನಡೆದಂತೆ ಕಾಣುತ್ತಿದೆ. ಜಿಲ್ಲಾ ಪಂಚಾಯಿತಿ ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಪರೋಕ್ಷವಾಗಿ ಅವ್ಯವಹಾರಕ್ಕೆ ಅನುಮತಿ ಕೊಟ್ಟಂತಾಗುತ್ತದೆ ಎಂದು ಸದಸ್ಯ ಜನಾರ್ಧನ ತೋನ್ಸೆ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ ರಾವ್ ಮಾತನಾಡಿ, ವಾರಾಹಿ ಇಲಾಖೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ. ಬೃಹತ್ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಮೂರು ಬಾರಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ ಜಿ.ಪುತ್ರನ್, ಸುಮೀತ್ ಶೆಟ್ಟಿ ಕೌಡೂರು, ಪ್ರತಾಪ್ ಹೆಗ್ಡೆ ಮಾರಾಳಿ, ಕುಂದಾಪುರ ಡಿಎಫ್‍ಒ ಆಶಿಶ್ ರೆಡ್ಡಿ, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT