ಭಾನುವಾರ, ಜೂನ್ 13, 2021
22 °C
ವಿವಿಧ ಕಾಮಗಾರಿಗಳ ದಿಢೀರ್‌ ತಪಾಸಣೆ ನಡೆಸಿದ ಮೇಯರ್‌– ಮುಖ್ಯ ರಸ್ತೆಯ ಕಸ ಗುಡಿಸದ್ದಕ್ಕೆ ಆಕ್ಷೇಪ

ಬೆಂಗಳೂರು: ಅವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಿದ ಗುತ್ತಿಗೆದಾರರಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸದ ಹಾಗೂ ಹೊರವಲಯದ ಮುಖ್ಯ ರಸ್ತೆಗಳನ್ನು ಗುಡಿಸದಿರುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್‌ ಟಾಪಿಂಗ್‌ ಹಾಗೂ ಇತರ ಕಾಮಗಾರಿಗಳನ್ನು ಮೇಯರ್‌ ಬುಧವಾರ ದಿಢೀರ್‌ ಪರಿಶೀಲನೆ ನಡೆಸಿದರು.  

ಹೆಣ್ಣೂರು ಮುಖ್ಯ ರಸ್ತೆಯ ದುರಸ್ತಿ ಕಾಮಗಾರಿ ಪರಿಶೀಲನೆ ವೇಳೆ ನಿಯಮಾಸಾರ ಗುಂಡಿಯನ್ನು ಚೌಕಾಕಾರದಲ್ಲಿ ಕತ್ತರಿಸದಿರುವುದು ಕಂಡು ಬಂತು. ಸಣ್ಣ ಜಲ್ಲಿಯ ಬದಲು ದೊಡ್ಡ-ದೊಡ್ಡ ಜಲ್ಲಿಯನ್ನು ಉಪಯೋಗಿಸಿ ರಸ್ತೆಗುಂಡಿ ಮುಚ್ಚುತ್ತಿರುವುದನ್ನು ಕಂಡು ಮೇಯರ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸದ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ಸೂಚಿಸಿದರು.

ನಾಗವಾರ ಹೊರವರ್ತುಲ ರಸ್ತೆ ಮಾರ್ಗ ಹಾಗೂ ಮೇಲ್ಸೇತುವೆಯ ಇಕ್ಕೆಲಗಳಲ್ಲಿ ಮಣ್ಣಿನ ದೂಳು ಹಾಗೆಯೇ ಇದ್ದುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು. ಈ ರಸ್ತೆಗಳನ್ನು ಕಸ ಗುಡಿಸುವ ಯಂತ್ರಗಳ ಮೂಲಕ ಸ್ವಚ್ಛಗೊಳಿಸಲು ಏಕೆ ಕ್ರಮ ವಹಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಗುತ್ತಿಗೆದಾರರಿಗೂ ದಂಡ ವಿಧಿಸುವಂತೆ ಆದೇಶ ಮಾಡಿದರು.

ನಾಗವಾರ ಜಂಕ್ಷನ್‌ನಿಂದ ಬಾಗಲೂರು ಜಂಕ್ಷನ್‌ವರೆಗೆ ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ವೈಟ್‌ ಟಾಪಿಂಗ್ (9.5 ಕಿ.ಮೀ) ಕಾಮಗಾರಿಯನ್ನು ಮೇಯರ್‌ ಪರಿಶೀಲಿಸಿದರು. ಇಲ್ಲಿ ಜಲಮಂಡಳಿಯು ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಹೆಣ್ಣೂರು ಬಂಡೆಯ ಬಳಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು. 

‘ವಿ.ವಿ.ಪುರ ವಾರ್ಡ್‌ನಲ್ಲಿ ಸಜ್ಜನ್ ರಾವ್ ವೃತ್ತದಿಂದ ಕನ್ನಿಕಾ ಪರಮೇಶ್ವರಿ ರಸ್ತೆವರೆಗಿನ 1 ಕಿ.ಮೀ ಉದ್ದದ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿದ್ದು, ಇನ್ನೂ ಮುಗಿದಿಲ್ಲ’ ಎಂದು ವಾರ್ಡ್‌ನ ಪಾಲಿಕೆ ಸದಸ್ಯೆ ವಾಣಿ ರಾವ್‌ ಅವರು ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾಮಗಾರಿಯನ್ನು ಪರಿಶೀಲಿಸುವುದಾಗಿ ಮೇಯರ್‌ ಭರವಸೆ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಮೇಯರ್‌, ಬಾಕಿಯಿರುವ ಕಾಮಗಾರಿಯನ್ನು ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು