ಕಾರವಾರ:ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಮೇ 29ರಂದು ಮತದಾನ, ಮೇ 31ರಂದು ಮತ ಎಣಿಕೆ ನಡೆಯಲಿದೆ. ಜಿಲ್ಲೆಯ ಭಟ್ಕಳ ಪುರಸಭೆ, ಹೊನ್ನಾವರ ಮತ್ತು ಸಿದ್ದಾಪುರ ಪಟ್ಟಣ ಪಂಚಾಯ್ತಿಗಳಲ್ಲಿ ಚುನಾವಣೆಯಿದೆ.
ಈ ಮೂರೂ ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಹೊಸದಾಗಿ ಜನಪ್ರತಿನಿಧಿಗಳ ಆಯ್ಕೆಗೆ ದಿನಾಂಕ ನಿಗದಿ ಮಾಡಿದ್ದಾರೆ. ಮೇ 9ರಂದು ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, ಮೇ 16ವರೆಗೆ ಉಮೇದುವಾರಿಕೆಸಲ್ಲಿಸಲು ಅವಕಾಶವಿದೆ. ಮೇ 17ರಂದು ನಾಮಪತ್ರ ಪರಿಶೀಲನೆ ಹಾಗೂ 20ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಮೂರು ಸ್ಥಳೀಯ ಸಂಸ್ಥೆಗಳ ಒಟ್ಟು 58 ವಾರ್ಡ್‌ಗಳಲ್ಲಿ ಮತದಾನ ನಡೆಯಲಿದೆ. ಭಟ್ಕಳ ಪುರಸಭೆಯ 23 ವಾರ್ಡ್‌ಗಳು, ಹೊನ್ನಾವರ ಪಟ್ಟಣ ಪಂಚಾಯ್ತಿಯ 20 ಹಾಗೂ ಸಿದ್ದಾಪುರ ಪಟ್ಟಣ ಪಂಚಾಯ್ತಿಯ 15 ವಾರ್ಡ್‌ಗಳು ಇದರಲ್ಲಿ ಸೇರಿವೆ.ಈ ಸಂಬಂಧ ಭಟ್ಕಳದಲ್ಲಿ 27, ಹೊನ್ನಾವರದಲ್ಲಿ 20 ಮತ್ತು ಸಿದ್ದಾಪುರದಲ್ಲಿ 15 ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಮೂರು ನಗರಸಭೆಗಳು, ಮೂರು ಪುರಸಭೆಗಳು ಮತ್ತು ಎರಡು ಪಟ್ಟಣ ಪಂಚಾಯ್ತಿಗಳಿಗೆ ಆ.3ರಂದು ಚುನಾವಣೆ ನಡೆದಿತ್ತು. ಸೆ.3ರಂದು ಮತ ಎಣಿಕೆಯೂ ಆಗಿತ್ತು. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ವಿಚಾರದಲ್ಲಿ ಆದ ಗೊಂದಲಗಳಿಂದ ಇದುವರೆಗೂ ಅಧಿಕಾರಪದಗ್ರಹಣವಾಗಿಲ್ಲ. ಎಲ್ಲ ಕಡೆಯೂ ಆಡಳಿತಾಧಿಕಾರಿಗಳೇ ಅಧಿಕಾರ ನಡೆಸುತ್ತಿದ್ದಾರೆ. ಈಗ ಚುನಾವಣೆ ಘೋಷಣೆಯಾಗಿರುವ ಮೂರು ಸ್ಥಳೀಯ ಸಂಸ್ಥೆಗಳಿಗೂ ಆಡಳಿತಾವಧಿ ಮುಗಿದು ಎರಡು ತಿಂಗಳೇ ಕಳೆದಿದ್ದು, ಅಲ್ಲೂ ಆಡಳಿತಾಧಿಕಾರಿಗಳೇ ಪ್ರಮುಖರಾಗಿದ್ದಾರೆ.
ಮೂರು ಸಂಸ್ಥೆಗಳ ಮತದಾರರು
ಸ್ಥಳೀಯ ಸಂಸ್ಥೆ; ಪುರುಷ; ಮಹಿಳೆ; ಒಟ್ಟು
ಭಟ್ಕಳ; 11,862; 11,438; 23,300
ಹೊನ್ನಾವರ; 7,516; 7,679; 15,195
ಸಿದ್ದಾಪುರ; 5,537; 5,355; 10,892
ಒಟ್ಟು; 24,915; 24,472; 49,397
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.