ಗುರುವಾರ , ಜೂಲೈ 9, 2020
28 °C
ಜಿಲ್ಲೆಯಲ್ಲಿ ಗಂಭೀರ ಸ್ವರೂಪದಲ್ಲಿ ಹೆಚ್ಚಳ ಕಾಣುತ್ತಿರುವ ಕೋವಿಡ್ ಪೀಡಿತರ ಸಂಖ್ಯೆ

ಉತ್ತರ ಕನ್ನಡ | ಒಂದೇ ದಿನ 40 ಜನರಿಗೆ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯಲ್ಲಿ ಕೋವಿಡ್–19 ಪೀಡಿತರ ಸಂಖ್ಯೆಯು ಗಂಭೀರ ಸ್ವರೂಪದಲ್ಲಿ ಏರಿಕೆ ಕಾಣುತ್ತಿದ್ದು, ಮಂಗಳವಾರ ಒಂದೇ ದಿನ 40 ಜನರಿಗೆ ದೃಢಪಟ್ಟಿದೆ. ಅವರಲ್ಲಿ ಹಲವರು ಈಗಾಗಲೇ ಸೋಂಕಿತರಾದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು. ಕೆಲವರು ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿ ಇದ್ದವರಾಗಿದ್ದಾರೆ.

ಹೊಸದಾಗಿ ಸೋಂಕು ಖಚಿತವಾದವರಲ್ಲಿ ಭಟ್ಕಳ ತಾಲ್ಲೂಕಿನವರೇ 21 ಮಂದಿ ಇದ್ದಾರೆ. ಉಳಿದಂತೆ, ಹಳಿಯಾಳ ತಾಲ್ಲೂಕಿನ ಎಂಟು, ಅಂಕೋಲಾ ತಾಲ್ಲೂಕಿನ ಐವರು, ಕುಮಟಾ ತಾಲ್ಲೂಕಿನ ನಾಲ್ವರು ಹಾಗೂ ಮುಂಡಗೋಡದ ಇಬ್ಬರು ಸೇರಿದ್ದಾರೆ.

ಸೋಂಕಿತರ ವಿವರ: ಮುಂಡಗೋಡದ ಟಿಬೆಟನ್ ನಿರಾಶ್ರಿತರ ಶಿಬಿರದ ಎರಡನೇ ಕ್ಯಾಂಪ್‌ ನಿವಾಸಿ, ಈಗಾಗಲೇ ಸೋಂಕಿತರಾಗಿರುವ ಬೌದ್ಧ ಬಿಕ್ಕುವಿನ (ಪಿ 178) ಪ್ರಾಥಮಿಕ ಸಂಪರ್ಕಕ್ಕೆ ಬಂದ ಇಬ್ಬರಿಗೆ ಸೋಂಕು ದೃಢವಾಗಿದೆ. ಅವರಲ್ಲಿ 12 ವರ್ಷದ ಬಾಲಕ ಮತ್ತು 17 ವರ್ಷದ ಬಾಲಕಿ ಒಳಗೊಂಡಿದ್ದಾರೆ.

ಮಹಾರಾಷ್ಟ್ರದಿಂದ ಕುಮಟಾ ತಾಲ್ಲೂಕಿನ ಮೊರಬಾಕ್ಕೆ ಬಂದಿರುವ ಏಳು ವರ್ಷದ ಬಾಲಕ, ಕೋಡ್ಕಣಿಯ 16 ವರ್ಷದ ಬಾಲಕ, ಗೋಕರ್ಣ ಹೊಸಕಟ್ಟಾದ 27 ವರ್ಷದ ಯುವತಿ, ಐಗಳಕೂರ್ವೆಯ 35 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ. 

ಅಂಕೋಲಾದ ಶೇಡಿಕಟ್ಟಾ ಅಗ್ರಗೋಣದಲ್ಲಿ ಮಂಗಳವಾರ ಕೋವಿಡ್ ದೃಢಪಟ್ಟವರೆಲ್ಲರೂ ಸೋಂಕಿತರೊಬ್ಬರ (ಪಿ 10648) ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಅವರಲ್ಲಿ 25 ವರ್ಷದ ಯುವಕ, 49, 33 ಹಾಗೂ 72 ವರ್ಷದ ಪುರುಷರು, 65 ವರ್ಷದ ಮಹಿಳೆ ಸೇರಿದ್ದಾರೆ.

ಭಟ್ಕಳದ ಮುಖ್ಯರಸ್ತೆಯ ಪ್ರದೇಶದಲ್ಲಿ ಸೋಂಕಿತರಾದವರು ಪಿ 13314 ಸಂಖ್ಯೆಯ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಅವರಲ್ಲಿ ಒಂದು ವರ್ಷ ಹಾಗೂ ಏಳು ವರ್ಷ ಇಬ್ಬರು ಬಾಲಕಿಯರು ಸೇರಿದಂತೆ 12 ಮಂದಿ ಇದ್ದಾರೆ. ಇದೇರೀತಿ, ರೋಗಿ ಸಂಖ್ಯೆ ಪಿ 12047 ಸಂಪರ್ಕಕ್ಕೆ ಬಂದ ಎಂಟು ಮಂದಿಗೆ ಕೋವಿಡ್ ಖಚಿತವಾಗಿದೆ. ಅವರೆಲ್ಲರೂ ನವಾಯತ ಕಾಲೊನಿ ಮತ್ತು ಜಾಮಿಯಾ ರಸ್ತೆಯ ನಿವಾಸಿಗಳಾಗಿದ್ದಾರೆ. ಹಲವರು ಒಂದೇ ಕುಟುಂಬದವರೂ ಸೇರಿದ್ದಾರೆ. ಮುರ್ಡೇಶ್ವರದ ಮಾವಳ್ಳಿಯ 39 ವರ್ಷದ ವ್ಯಕ್ತಿಯೊಬ್ಬರು ಸೋಂಕಿತರಾಗಿದ್ದು, ಅವರು ಮಂಗಳೂರು ಬಂದರಿಗೆ ಭೇಟಿ ನೀಡಿದ್ದರು.

ದಾಂಡೇಲಿಯಲ್ಲೂ ಸೋಂಕಿತರ ಸಂಖ್ಯೆ ಏರಿಕೆ ಕಂಡಿದ್ದು, ಮಹಾರಾಷ್ಟ್ರದ ಮೀರಜ್‌ನಿಂದ ಬಂದಿರುವ 21 ವರ್ಷದ ಯುವತಿ, ನಾಲ್ಕು ವರ್ಷದ ಬಾಲಕಿಗೆ ಕೋವಿಡ್ ದೃಢಪಟ್ಟಿದೆ. ಗಣೇಶನಗರದ 48 ವರ್ಷದ ವ್ಯಕ್ತ ಸೋಂಕಿತರಾಗಿದ್ದು, ಆಂಧ್ರಪ್ರದೇಶದಿಂದ ಬಂದಿದ್ದರು. ಬಂಗೂರನಗರದ 51 ವರ್ಷ ಮಹಿಳೆ ಗುಜರಾತ್‌ನ ವಾಪಿಯಿಂದ ಮರಳಿದ್ದರು.

ಹಳಿಯಾಳದ ಮುರ್ಕವಾಡಕ್ಕೆ ಮಹಾರಾಷ್ಟ್ರದ ಉಲ್ಲಾಸನಗರದಿಂದ ವಾಪಸಾಗಿರುವ 12 ವರ್ಷ ಬಾಲಕಿ, 28 ವರ್ಷದ ಮಹಿಳೆ, ಪುಣೆಯಿಂದ ಬಂದಿರುವ ಕೆ.ಎಚ್.ಬಿ ಕಾಲೊನಿ ನಿವಾಸಿ 72 ವರ್ಷದ ಮಹಿಳೆ ಹಾಗೂ 76 ವರ್ಷದ ವ್ಯಕ್ತಿಯೂ ಸೋಂಕಿತರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಏಳು ಮಂದಿ ಗುಣಮುಖ: ಕೋವಿಡ್ 19 ಸೋಂಕಿನಿಂದ ಗುಣಮುಖರಾದ ಏಳು ಮಂದಿಯನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ವಾರ್ಡ್‌ನಿಂದ ಬುಧವಾರ ಬಿಡುಗಡೆ ಮಾಡಲಾಯಿತು. 

ಅವರಲ್ಲಿ ಹೊನ್ನಾವರದ ಎರಡು ವರ್ಷದ ಬಾಲಕಿ, 28 ವರ್ಷದ ಯುವಕ, ಕುಮಟಾದ 56 ವರ್ಷದ ವ್ಯಕ್ತಿ, ಮುಂಡಗೋಡಿನ 45 ವರ್ಷದ ಮಹಿಳೆ, 19 ವರ್ಷದ ಯುವತಿ, 32 ವರ್ಷದ ವ್ಯಕ್ತಿ, ಭಟ್ಕಳದ 29 ವರ್ಷದ ಯುವಕ ಸೇರಿದ್ದಾರೆ.

ಕೋವಿಡ್ ಪೀಡಿತ, ಉಸಿರಾಟದ ತೊಂದರೆ ಎದುರಿಸುತ್ತಿರುವ ಅಂಕೋಲಾದ 45 ವರ್ಷದ ವ್ಯಕ್ತಿಗೆ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರಿದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಸದ್ಯ 92 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 253ಕ್ಕೇರಿದೆ. ಅವರಲ್ಲಿ 161 ಜನ ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು