ಶುಕ್ರವಾರ, ಡಿಸೆಂಬರ್ 4, 2020
20 °C

ಸಹಕರಿಸುವ ನೆಪದಲ್ಲಿ ವಂಚನೆ: ಆರೋಪಿಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಎ.ಟಿ.ಎಂ.ನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಬದಲಿಸಿ, ಹಣ ಡ್ರಾ ಮಾಡುತ್ತಿದ್ದ ಅಂತರರಾಜ್ಯ ವಂಚಕನನ್ನು ಯಲ್ಲಾಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೇಣುಗೋಪಾಲ ಕೃಷ್ಣ ರೆಡ್ಡಿ (50) ಬಂಧಿತ ಆರೋಪಿ.

2019ರ ಡಿ.17ರಂದು ಯಲ್ಲಾಪುರದ ನೂತನ ನಗರ ಜಡ್ಡಿಯ ಕೃಷ್ಣ ನಾಯ್ಕ ಎಂಬುವವರು, ಪಟ್ಟಣದ ಎಸ್.ಬಿ.ಐ ಎ.ಟಿ.ಎಂ.ನಲ್ಲಿ ತಮ್ಮ ಕಾರ್ಡ್‌ ಬಳಸಿ ಹಣ ಪಡೆದುಕೊಳ್ಳಲು ಯತ್ನಿಸಿದ್ದರು. ಆಗ ಅಲ್ಲಿಗೆ ಬಂದ ಆರೋಪಿಯು ಸಹಾಯ ಮಾಡುವ ನೆಪದಲ್ಲಿ ಅವರ ಕಾರ್ಡ್ ಮತ್ತು ಪಿನ್ ನಂಬರ್ ಪಡೆದುಕೊಂಡಿದ್ದ. ಕೊನೆಗೆ ಬೇರೊಂದು ಕಾರ್ಡ್‌ ನೀಡಿದ್ದ. ಅವರ ಕಾರ್ಡ್ ಬಳಸಿ ಡಿ.18 ಮತ್ತು 19ರಂದು ಒಟ್ಟು ₹ 40 ಸಾವಿರವನ್ನು ಬೇರೆ ಎ.ಟಿ.ಎಂ.ಗಳಿಂದ ಪಡೆದುಕೊಂಡಿದ್ದ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದರು. ಆತನಿಂದ ₹ 18,880 ನಗದನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಗೌರಿಬಿದನೂರು, ಮಧುಗಿರಿ, ಬಾಗೇಪಲ್ಲಿ, ಮಡಿವಾಳ, ಆಂಧ್ರಪ್ರದೇಶದ ಚಿತ್ತೂರಿನಲ್ಲೂ ಆರೋಪಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹಳಿಯಾಳ, ಶಿರಸಿ ಹಾಗೂ ಚಿತ್ರದುರ್ಗ, ಬೀದರ್ ಜಿಲ್ಲೆಯ ಕೆಲವು ಕಡೆಯೂ ಕೃತ್ಯ ಎಸಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಡಿ.ವೈ.ಎಸ್‌.ಪಿ ಜಿ.ಟಿ.ನಾಯಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ ಗೌಡರ್, ಭೀಮಸಿಂಗ್ ಲಮಾಣಿ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ವಿನೋದ ರೆಡ್ಡಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.