ಬುಧವಾರ, ಏಪ್ರಿಲ್ 1, 2020
19 °C
ದೈನಂದಿನ ಕೆಲಸದಲ್ಲಿ ತೊಡಗಿದ ಕಾರ್ಯಕರ್ತರು

ಮುಂಡಗೋಡ: ವಿಶ್ರಾಂತಿಯ ಮೊರೆ ಹೋದ ಮುಖಂಡರು

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಉಪಚುನಾವಣೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಕಾರ್ಯಕರ್ತರಿಗೆ ಧನ್ಯವಾದ ಹೇಳಿ ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಸ್ಥಳೀಯ ಮುಖಂಡರು ‘ಮೊಬೈಲ್’ಗೆ ರೆಸ್ಟ್‌ ನೀಡಿ, ರಾಜಕೀಯ ಚಟುವಟಿಕೆಗೆ ಬಿಡುವು ನೀಡಿದ್ದರು.

ಕೆಲವು ದಿನಗಳಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಗರಿಗೆದರಿದ್ದ, ಅನಿರೀಕ್ಷಿತ ‘ರಾಜಕೀಯ ಚಟುವಟಿಕೆ’, ಜೋರು ಮಳೆ ಬಂದು ನಿಂತ ಮೇಲಿನ ಶಾಂತಂತೆಯಂತೆ ಶುಕ್ರವಾರ ಕಂಡುಬಂತು. ಕೆಲವೆಡೆ ಕಾರ್ಯಕರ್ತರು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರು. ತಮ್ಮ ಮತಗಟ್ಟೆಗಳಲ್ಲಿ ಪಕ್ಷಕ್ಕೆ ಎಷ್ಟು ಮತಗಳು ಬಿದ್ದಿರಬಹುದು, ಮತದಾನದ ಪ್ರಮಾಣ ಹೆಚ್ಚಳ ಅಥವಾ ಕಡಿಮೆ ಆಗಿದ್ದರಿಂದ, ಎಷ್ಟು ಲಾಭ, ನಷ್ಟವಾಗಲಿದೆ ಎಂದು ಚರ್ಚಿಸುತ್ತಿರುವ ದೃಶ್ಯ ಸಹ ಕಂಡುಬಂತು.

‘ಕಡಿಮೆ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಓಡಾಡಿ, ದಣಿದಿದ್ದ ಕೆಲವು ಮುಖಂಡರು ಹೆಚ್ಚಿನ ಸಮಯವನ್ನು ತಮ್ಮ ಮನೆಯಲ್ಲಿಯೇ ಕಳೆದರು. ಬೆರಳೆಣಿಕೆಯಷ್ಟು ಪ್ರಮುಖರು ಮಾತ್ರ ಸಾರ್ವಜನಿಕವಾಗಿ ಕಂಡರು. ತಾಲ್ಲೂಕಿನ ಕೆಲವು ಮತಗಟ್ಟೆಗಳಲ್ಲಿ ಶೇ 75ರಿಂದ 90ರವರೆಗೆ ಮತದಾನವಾಗಿದ್ದು, ತಮ್ಮ ಅನುಕೂಲಕ್ಕೆ ತಕ್ಕಂತೆ ಮುಖಂಡರು ವ್ಯಾಖ್ಯಾನ ಮಾಡುತ್ತಿದ್ದಾರೆ.

ಜಾತಿ ಮೇಲೆ ಮತಗಳು ಹಂಚಿಕೆಯಾಗಿರಬಹುದೇ? ಒಳಹೊಡೆತದ ಮತದಾನ ಆಗಿರಬಹುದೇ? ರಾಜ್ಯ ಮಟ್ಟದ ಮುಖಂಡರ ಪ್ರಚಾರದಿಂದ ಪಕ್ಷಗಳಿಗೆ ಲಾಭ ಆಗಿದೆಯೇ? ಸಮಬಲದ ಹೋರಾಟ ನಡೆದಿದೆಯೇ ಎಂಬಿತ್ಯಾದಿ ಬಗ್ಗೆ ಗ್ರಾಮೀಣ ಭಾಗದಲ್ಲಿ ಕಾರ್ಯಕರ್ತರು ಚರ್ಚಿಸುತ್ತಿದ್ದಾರೆ.

‘ರಾಜಕೀಯ ಚಟುವಟಿಕೆಗೆ ಬಿಡುವು ನೀಡಿ, ಗದ್ದೆ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಕಾರ್ಯಕರ್ತರೂ ತಮ್ಮ ತಮ್ಮ ಕೆಲಸಗಳತ್ತ ಗಮನಹರಿಸಿದ್ದಾರೆ. 15–20 ದಿನಗಳಿಂದ ನಿಂರತರವಾಗಿ ಚುನಾವಣಾ ಕೆಲಸದಲ್ಲಿ ತೊಡಗಿದ್ದರಿಂದ, ವಿಶ್ರಾಂತಿಗೆ ಹೆಚ್ಚಿನ ಸಮಯ ನೀಡಬೇಕಾಗಿದೆ’ ಎಂದು ಪಟ್ಟಣ ಪಂಚಾಯ್ತಿ ಬಿಜೆಪಿ ಸದಸ್ಯ ಶೇಖರ ಲಮಾಣಿ ಹೇಳಿದರು.

‘ಚುನಾವಣೆ ಪ್ರಚಾರದಲ್ಲಿ ಹೆಚ್ಚಿನ ಸಮಯ ತೊಡಗಿದ್ದರಿಂದ, ಮನೆ, ಕೃಷಿ ಕಡೆ ಹೆಚ್ಚು ಲಕ್ಷ್ಯ ವಹಿಸಿರಲಿಲ್ಲ. ಇವತ್ತು ಸ್ವಲ್ಪ ವಿಶ್ರಾಂತಿ ಪಡೆದು, ದೈನಂದಿನ ಕೆಲಸಗಳತ್ತ ಸಮಯ ಕಳೆದಿರುವೆ’ ಎಂದು ಪಟ್ಟಣ ಪಂಚಾಯ್ತಿ ಕಾಂಗ್ರೆಸ್‌ ಸದಸ್ಯ ಮೊಹಮ್ಮದ ಜಾಫರ್ ಹಂಡಿ ಹೇಳಿದರು.

ಮತದಾನದ ವಿವರ: ತಾಲ್ಲೂಕಿನಲ್ಲಿ ಶೇ 78.11ರಷ್ಟು ಮತದಾನ ಆಗಿದೆ. 27,935 ಪುರುಷ ಹಾಗೂ 26,788 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆಲಳ್ಳಿ ಮತಗಟ್ಟೆ ಸಂಖ್ಯೆ 140ರಲ್ಲಿ ಅತಿ ಹೆಚ್ಚು ಶೇ 90.80 ಹಾಗೂ ಶಾಸಕರ ಮಾದರಿ ಶಾಲೆಯ ಮತಗಟ್ಟೆ ಸಂಖ್ಯೆ 122ರಲ್ಲಿ ಶೇ 58.84 ಮತದಾನ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು