ಶನಿವಾರ, ಸೆಪ್ಟೆಂಬರ್ 25, 2021
23 °C
ಅಡಿಕೆ, ತೆಂಗಿನ ಕೃಷಿಗೆ ಊಹೆಗೂ ಮೀರಿದ ಹಾನಿ: ಅರಣ್ಯೋತ್ಪನ್ನ, ಕಾಳು ಮೆಣಸಿಗೂ ಸಂಚಕಾರ

ಕಳಚೆ: ಧರೆ ಕುಸಿದಾಗ, ಕಳಚಿ ಬಿದ್ದ ತೋಟಗಾರಿಕೆಯ ಕಳಸ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತೋಟಗಾರಿಕೆಯಲ್ಲಿ ಕಳಸದಂತಿದ್ದ ಕಳಚೆಯ ಅಡಿಕೆ ಮತ್ತು ತೆಂಗಿನ ಫಸಲಿಗೆ ವಿಶೇಷ ಬೇಡಿಕೆಯಿದೆ. ಇಲ್ಲಿನ ಖನಿಜಾಂಶಯುಕ್ತ ಮಣ್ಣಿನ ಗುಣದಿಂದಾಗಿ ಗೊನೆಗಳು ಸಹಜವಾಗಿ ಕಣ್ಮನ ಸೆಳೆಯುತ್ತವೆ. ಭೂಕುಸಿತದಿಂದಾಗಿ ಇಡೀ ಊರನ್ನೇ ಖಾಲಿ ಮಾಡಬೇಕಾದ ಸ್ಥಿತಿ ಉಂಟಾಗಿರುವುದು, ತೋಟಗಾರಿಕೆ ಕ್ಷೇತ್ರದಲ್ಲಿ ತಳಮಳಕ್ಕೆ ಕಾರಣವಾಗಿದೆ.

ಗೊನೆಗಳಿಂದ ತೊನೆದಾಡುತ್ತಿದ್ದ ಅಡಿಕೆ, ತೆಂಗಿನ ಮರಗಳು ಆಳವಾದ ಪ್ರಪಾತದಲ್ಲಿ ಬುಡಮೇಲಾಗಿ ಬಿದ್ದಿವೆ. ಅದೆಷ್ಟೋ ಮರಗಳು ಪ್ರವಾಹದ ರಭಸಕ್ಕೆ ಕೊಚ್ಚಿಕೊಂಡು ಏಳೆಂಟು ಕಿಲೋಮೀಟರ್‌ ದೂರ ಸಾಗಿವೆ.

‘ಕಳಚೆ ಕಾಯಿ’ಗೆ (ತೆಂಗು) ಯಲ್ಲಾಪುರ ತಾಲ್ಲೂಕಿನ ಅಡುಗೆ ಮನೆಗಳಲ್ಲಿ ವಿಶೇಷ ಸ್ಥಾನಮಾನವಿದೆ. ಕಾಡಿನ ನಡುವಿನ, ಹೇರಳವಾಗಿ ಖನಿಜಾಂಶಗಳಿರುವ ಇಲ್ಲಿನ ಕಪ್ಪು ಬಣ್ಣದ ಮಣ್ಣು, ತೆಂಗಿನ ಬೆಳೆಗೆ ನೈಸರ್ಗಿಕವಾಗಿ ಸಮೃದ್ಧಿಯನ್ನು ನೀಡಿದೆ. ತೆಂಗಿನಕಾಯಿ ದಪ್ಪವಾಗಿದ್ದು, ಕೊಬ್ಬರಿಯಲ್ಲಿ ಹೆಚ್ಚಿನ ಎಣ್ಣೆಯ ಅಂಶವಿದೆ. ಹಾಗಾಗಿ, ಸಂತೆ, ಮಾರುಕಟ್ಟೆಗಳಲ್ಲಿ ಇತರ ಊರುಗಳ ತೆಂಗಿನಕಾಯಿಗಿಂತ ದುಪ್ಪಟ್ಟು ದರ ಇರುತ್ತದೆ.

ಅಡಿಕೆ ಈ ಊರಿನವರ ಪ್ರಮುಖ ವಾಣಿಜ್ಯಿಕ ಉತ್ಪನ್ನ. ಮುಗಿಲೆತ್ತರಕ್ಕೆ ನಿಂತಿರುವ ಬೆಟ್ಟಗಳ ಇಳಿಜಾರಿನಲ್ಲಿರುವ ತೋಟಗಳನ್ನು ನಿರ್ವಹಣೆ ಮಾಡುವುದೇ ಇಲ್ಲಿನವರಿಗೆ ದೊಡ್ಡ ಸವಾಲು. ಅಡಿಕೆ ಕೊಯ್ಲು, ಮಳೆಗಾಲದಲ್ಲಿ ಔಷಧ ಸಿಂಪಡಣೆ, ಗಿಡಗಳಿಗೆ ಗೊಬ್ಬರ ನೀಡುವುದು.. ಹೀಗೆ ಎಲ್ಲ ಕೆಲಸಗಳೂ ಬಹಳ ಶ್ರಮ ಬೇಡುತ್ತವೆ. ಇಲ್ಲಿನ ಮಂದಿ ಸದಾ ತೋಟದಲ್ಲಿ, ಘಟ್ಟದಲ್ಲಿ ಸಂಚರಿಸುತ್ತಿದ್ದ ಕಾರಣ ದೈಹಿಕ ಕಸರತ್ತು ಸಾಕಷ್ಟಾಗುತ್ತಿತ್ತು. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲೂ ಪೂರಕವಾಗಿತ್ತು.

ಭೌಗೋಳಿಕ ಸನ್ನಿವೇಶದ ಕಾರಣದಿಂದ ಪ್ರತಿ ಎಕರೆಗೆ ಏಳರಿಂದ ಎಂಟು ಕ್ವಿಂಟಲ್ ಅಡಿಕೆ ಫಸಲು ಬರುತ್ತಿತ್ತು. ಸುಮಾರು 530 ಹೆಕ್ಟೇರ್ ಎಕರೆ ಅಡಿಕೆ ತೋಟ, 74 ಹೆಕ್ಟೇರ್ ತೆಂಗಿನ ಬೆಳೆ ಈ ಭಾಗದಲ್ಲಿದೆ. ಧರೆ ಕುಸಿದ ಬಳಿಕ ಅವುಗಳಲ್ಲಿ ಬಹುಪಾಲು ಸರ್ವನಾಶವಾಗಿವೆ.

ತೋಟಗಾರಿಕೆ ಬೆಳೆಯೊಂದಿಗೇ ಉಪ ಬೆಳೆಯಾಗಿ ಕಾಳುಮೆಣಸು, ಗೇರು, ಮಾವು, ಬೇರು ಹಲಸನ್ನೂ ಸಮೃದ್ಧವಾಗಿ ಬೆಳೆಯಲಾಗುತ್ತಿತ್ತು. ಹಾಲು ಮತ್ತು ಕೃಷಿಗೆ ಪೂರಕವಾಗಿ ಹೈನುಗಾರಿಕೆಯನ್ನೂ ಹಲವರು ನೆಚ್ಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಿನವರೆಗೂ ದನ, ಕರುಗಳಿಂದ ತುಂಬಿದ್ದ ಕೊಟ್ಟಿಗೆಗಳು, ಈಗ ಖಾಲಿಯಾಗಿವೆ. ಮನೆ ಬಾಗಿಲು ತೆರೆದ ಕೂಡಲೇ ಧುತ್ತನೆ ಕಾಣುವ ಕುಸಿದ ಬೆಟ್ಟ ಮತ್ತು ಮನೆಯಂಗಳದಲ್ಲೇ ಮಣ್ಣಿನಲ್ಲಿ ಉಂಟಾಗಿರುವ ಬಿರುಕು, ನಿವಾಸಿಗಳನ್ನು ಕಂಗೆಡಿಸಿದೆ. ಹಾಗಾಗಿ, ಪ್ರೀತಿಯ ಸಾಕುಪ್ರಾಣಿಗಳ ಜೊತೆ ಮನೆ ಮಂದಿ ಊರು ತೊರೆದಿದ್ದಾರೆ.

ದುರಂತಕ್ಕೂ ಮೊದಲು ದನಗಳನ್ನು ಕಾಡಿಗೆ ಮೇಯಲು ಬಿಟ್ಟಾಗ, ಮಡ್ಡಿ ಧೂಪ, ದಾಲ್ಚಿನ್ನಿ ಮುಂತಾದ ವನೋತ್ಪನ್ನಗಳನ್ನು ಸಂಗ್ರಹಿಸುತ್ತಿದ್ದರು. ಪ್ರಕೃತಿ ಸಹಜವಾಗಿ ಬೆಳೆಯುವ ಔಷಧೀಯ ಸಸ್ಯಗಳು ಅದೆಷ್ಟೋ ನಾಟಿ ವೈದ್ಯರಿಗೆ ಔಷಧಿಗೆ ಮೂಲಧಾತುಗಳನ್ನು ಒದಗಿಸುತ್ತಿದ್ದವು. ದೇವರಕಾಡು, ದೇವಿಕಲ್ಲುಗಳು ಕೃಷಿ ಜೀವನದಲ್ಲಿ ಆರಾಧನೆಯ ಭಾಗಗಳಾಗಿದ್ದವು. ಪ್ರತಿ ಮನೆಯಲ್ಲೂ ತರಕಾರಿ, ಹೂವುಗಳನ್ನು ಸಮೃದ್ಧವಾಗಿ ಬೆಳೆದುಕೊಳ್ಳುತ್ತಿದ್ದರು.

ಈ ರೀತಿ ಸ್ವಾವಲಂಬಿ ಬದುಕನ್ನು ಕಂಡಿದ್ದ ‘ಬೆಟ್ಟದೂರು’ ಈಗ ಅನಾಥವಾಗಿದೆ. ಅರ್ಧ ಅಡಿಯಷ್ಟು ಬಿರುಕು ಬಿಟ್ಟು ನಿಂತಿರುವ ತೋಟಗಳನ್ನು ನೋಡುವಾಗ ತನ್ನನ್ನು ರಕ್ಷಿಸುವಂತೆ ಅಂಗಲಾಚುವಂತೆ ಭಾಸವಾಗುತ್ತದೆ.

ಕೂಸಿಗೆ ನೀರೆತ್ತಲು ಬರುವುದಿಲ್ಲ!: ಕಳಚೆಯಲ್ಲಿ ಬೆಟ್ಟದ ಮೇಲಿನಿಂದ ಹರಿಯುವ ಒರತೆಯ ನೀರೇ ಪ್ರತಿ ಮನೆಗಳಿಗೂ ತಲುಪುತ್ತಿತ್ತು. ಹಾಗಾಗಿ ಇಲ್ಲಿ ಬಾವಿಗಳಿಲ್ಲ. ‘ಕಳಚೆಯ ಕೂಸುಗಳಿಗೆ ಬಾವಿ ನೀರೆತ್ತುವುದೇ ಗೊತ್ತಿಲ್ಲ’ ಎಂಬ ತಮಾಷೆಯ ಮಾತು ಈ ಭಾಗದಲ್ಲಿ ಚಾಲ್ತಿಯಲ್ಲಿದೆ.

ಇಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ಬೆಟ್ಟದಿಂದ ಬರುವ ನೀರನ್ನು 30–35 ಸಣ್ಣಪುಟ್ಟ ಕೆರೆಗಳಲ್ಲಿ ಸಂಗ್ರಹಿಸಿ, ಅದನ್ನೇ ಕೃಷಿಗೆ ಬಳಕೆ ಮಾಡುತ್ತಿದ್ದರು. ನೀರಿನ ವಿಚಾರದಲ್ಲಿ ಸಂಪೂರ್ಣ ಸ್ವಾವಲಂಬನೆಯಿದ್ದ ಊರಿದು.

18ಕ್ಕೂ ಹೆಚ್ಚಿನ ಹಲಸಿನ ತಳಿಗಳಲ್ಲಿ, ಇಲ್ಲಿನ ಹಲಸಿನ ಕಾಯಿ ಮತ್ತು ಅದರಿಂದ ಮಾಡುವ ‘ಹುಳಿ’ ಪ್ರಸಿದ್ಧವಾಗಿದೆ. ಹಲಸಿನ ವಿವಿಧ ಖಾದ್ಯಗಳು ಊಟದ ರುಚಿಯನ್ನು ಹೆಚ್ಚಿಸಿವೆ. ಪ್ರತಿ ಹಲಸಿನ ಮರವನ್ನೂ ಅದರ ಕಾಯಿಗಳನ್ನು ಯಾವ ಖಾದ್ಯಕ್ಕೆ ಬಳಸುತ್ತಾರೋ ಆ ಹೆಸರಿನಿಂದಲೇ ಗುರುತಿಸುವುದು ವಾಡಿಕೆ.

ಕಳಚೆಯಲ್ಲಿ ತೋಟಗಾರಿಕೆಯ ಒಟ್ಟು ಶೇ 50ರಷ್ಟು ಹಾನಿಯಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಕೆಲವೆಡೆ ಹೋಗಲೂ ದಾರಿಯಿಲ್ಲ. ಪೂರ್ಣ ಸಮೀಕ್ಷೆಗೆ ಸಮಯ ಬೇಕು.

– ಸತೀಶ ಹೆಗಡೆ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ.

ನಾನು ಹೊಂದಿದ್ದ ಒಟ್ಟು 3.5 ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದ್ದು, ಸರ್ವಸ್ವವನ್ನೂ ಕಳೆದುಕೊಂಡಿದ್ದೇನೆ. ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಲೇ ಇಲ್ಲ.

– ಜನಾರ್ದನ ಹೆಬ್ಬಾರ, ಅಡಿಕೆ ಬೆಳೆಗಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು