ಸೋಮವಾರ, ಏಪ್ರಿಲ್ 19, 2021
32 °C

ವೆಂಕಟರಮಣ ದೇವರ ಅಶ್ವರಥೋತ್ಸವ ಫೆ.2ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಪುಣ್ಯ ಕ್ಷೇತ್ರ ಮಂಜುಗುಣಿ ವೆಂಕಟರಮಣ ದೇವರ ಉದ್ಭವ ಸ್ಥಾನ ಗಿಳಲಗುಂಡಿಯಿಂದ ಅಶ್ವರಥೋತ್ಸವ, ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತ, ಚಕ್ರತೀರ್ಥ ಕೆರೆಯಲ್ಲಿ ನೌಕಾ ವಿಹಾರೋತ್ಸವ ಹಾಗೂ ಅಶ್ವರಥೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಫೆ.2 ಮತ್ತು 3ರಂದು ನಡೆಯಲಿವೆ.

ವಿಕಾರಿ ಸಂವತ್ಸರದ ಮಾಘ ಶುದ್ಧ ಅಷ್ಟಮಿ ಫೆ.2ರ ಮುಂಜಾನೆಯಿಂದ ಸಂಜೆಯವರೆಗೆ ಗಿಳಲಗುಂಡಿಯಲ್ಲಿ ಧಾರ್ಮಿಕ  ಕೈಂಕರ್ಯಗಳು ನಡೆಯುತ್ತವೆ. ಮಂಜುಗುಣಿ ದೇವಸ್ಥಾನದಿಂದ ಒಂಬತ್ತು ಕಿ.ಮೀ ದೂರದ ಗಿಳಲಗುಂಡಿಯವರೆಗೆ ದೇವರ ಉತ್ಸವ ಮೂರ್ತಿಯ ಮೌನ ಮೆರವಣಿಗೆ, ಉದ್ಭವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯದ ನಂತರ, ಅದ್ಧೂರಿ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯ ಅಶ್ವರಥ ದೇವಸ್ಥಾನಕ್ಕೆ ಹಿಂದಿರುಗಲಿದೆ.

 ಫೆ.3ರ ಬೆಳಗ್ಗೆ 10 ಗಂಟೆಯಿಂದ ದೇವಸ್ಥಾನ ಆವರಣದಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತ, ಅ‌ದೇ ದಿನ ಸಂಜೆ 5 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ದೇವಸ್ಥಾನದ ರಥಬೀದಿಯಂಚಿನ ಚಕ್ರತೀರ್ಥ ಕೆರೆಯಲ್ಲಿ ಶ್ರೀ-ಭೂ ಸಹಿತನಾದ ವೆಂಕಟರಮಣ ದೇವರ ನೌಕಾಯಾನೋತ್ಸವ, ಕೆರೆಯ ದಡದಲ್ಲಿ ರಜತಮಯ ಅಶ್ವರಥದಲ್ಲಿ ಶ್ರೀನಿವಾಸ ದೇವರ ತೀರ್ಥ ತೀರ ವಿಹಾರ ಉತ್ಸವಗಳು ಏಕಕಾಲದಲ್ಲಿ ಜರುಗಲಿವೆ.

ಅಪರೂಪವಾದ ವೈಭವದ ಉತ್ಸವ ನಂತರ ದೇಗುಲದ ಎದುರಿನ ಕಲ್ಯಾಣ ವೇದಿಕೆಯಲ್ಲಿ ದೇವರ ಉತ್ಸವ ಮೂರ್ತಿಯೊಂದಿಗೆ ರಾಜಭೋಗಾರ್ಪಣೆ, ಪಟ್ಟಗಾಣಿಕೆ ಸಮರ್ಪಣೆ ಕಾರ್ಯಕ್ರಮವು ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ನೇತೃತ್ವದಲ್ಲಿ ನೆರವೇರಲಿದೆ. ಫೆ.3ರ ಮಧ್ಯಾಹ್ನ 3ಕ್ಕೆ ನಾರಾಯಣ ದಾಸರಿಂದ ಕೀರ್ತನೆ, ರಾತ್ರಿ 9.30ರಿಂದ ಮಕ್ಕಳ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು