ಸೋಮವಾರ, ಮೇ 16, 2022
29 °C

ಪವರ್ ಲಿಫ್ಟಿಂಗ್‌ನಲ್ಲಿ ‘ಅನಂತ’ ಸಾಧನೆ; ಕಾಮನ್‌ವೆಲ್ತ್‌ ಸ್ಫೆರ್ಧೆಗೆ ಹಣ ಸಮಸ್ಯೆ

ದೇವರಾಜ ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕುಮಟಾ ಕೈಗಾರಿಕಾ ಪ್ರದೇಶದ ನಿವಾಸಿ ಅನಂತ ಭಟ್, ‘ಪವರ್ ಲಿಫ್ಟಿಂಗ್’ನ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಇದೀಗ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಅವರಿಗೆ ಆರ್ಥಿಕ ಸಮಸ್ಯೆ ಸವಾಲೊಡ್ಡಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಕೆನಡಾದಲ್ಲಿ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ. ಅಲ್ಲಿಗೆ ತೆರಳಲು ಸಾರಿಗೆ, ಊಟ– ತಿಂಡಿ, ಕೆಲವು ಪ್ರವೇಶ ಶುಲ್ಕಗಳೆಲ್ಲವನ್ನೂ ಸೇರಿ ಅಂದಾಜು ₹ 2.50 ಲಕ್ಷದವರೆಗೆ ಹಣದ ಅಗತ್ಯವಿದೆ. ಈ ಹಿಂದೊಮ್ಮೆಯೂ ಭಾಗವಹಿಸಲು ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ, ಇದೇ ರೀತಿ ಆರ್ಥಿಕ ತೊಂದರೆಯಿಂದಾಗಿ ಅವಕಾಶದಿಂದ ವಂಚಿತರಾಗಿದ್ದರು. ಈ ಬಾರಿಯಾದರೂ ಭಾಗವಹಿಸಿ, ದೇಶದ ಹೆಸರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಇದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.

ಅಂದು ಎಂಜಿನಿಯರ್, ಇಂದು ಪವರ್ ಲಿಫ್ಟರ್: ಅನಂತ ಅವರು ಮೆಕಾನಿಕಲ್ ಎಂಜಿನಿಯರ್ ಪದವಿ ಪಡೆದಿದ್ದಾರೆ. ಕುಮಟಾದಲ್ಲಿ ಡಿಪ್ಲೊಮಾ ಓದುತ್ತಿದ್ದ ವೇಳೆ ಅಲ್ಲಿನ ಸರ್ಕಾರಿ ಜಿಮ್‌ನಲ್ಲಿ ಬಾಡಿ ಬಿಲ್ಡಿಂಗ್ ತರಬೇತಿ ಪಡೆದರು. ನಂತರ ಅಲ್ಲಿಂದ ಎಂಜಿನಿಯರಿಂಗ್‌ ಶಿಕ್ಷಣಕ್ಕಾಗಿ ಮಂಗಳೂರಿಗೆ ತೆರಳಿದ್ದರು. ಓದಿನ ನಡುವೆಯೂ ಜಿಮ್‌ಗೆ ತೆರಳಿ ಬಾಡಿ ಬಿಲ್ಡಿಂಗ್ ತರಬೇತಿ ಪಡೆಯುತ್ತಿದ್ದ ಅವರಿಗೆ, ಪವರ್ ಲಿಫ್ಟಿಂಗ್‌ನಲ್ಲಿ ಭಾಗವಹಿಸುವಂತೆ ಒಬ್ಬರು ಸಲಹೆ ನೀಡಿದ್ದರು. ಅದರಂತೆ ಈ ವಿಭಾಗದಲ್ಲಿ ತರಬೇತುದಾರರಾದ ಮೋಹನರಾಜ್ ಪುಟ್ಟಣ್ಣ, ತಿಲಕರಾಜ್ ಹಾಗೂ ವಿನೋದರಾಜ್‌ ತರಬೇತಿ ನೀಡಿದರು.

ಅಲ್ಲಿಂದ ಈವರೆಗೆ ರಾಜ್ಯ, ರಾಷ್ಟ್ರಮಟ್ಟದ ಹಲವಾರು ಚಾಂಪಿಯನ್‌ಶಿಪ್ ಹಾಗೂ ಸ್ಪರ್ಧೆಗಳಲ್ಲಿ ಅನಂತ ಭಾಗವಹಿಸಿದ್ದಾರೆ. ‘ಸುಮಾರು ಎರಡು ವರ್ಷಗಳ ಕಾಲ ಪವರ್‌ ಲಿಫ್ಟಿಂಗ್ ತರಬೇತಿ ಪಡೆದು ವಿವಿಧೆಡೆ ಪ್ರದರ್ಶನ ನೀಡಿ ಪದಕಗಳನ್ನು ಗೆದ್ದುಕೊಂಡಿದ್ದೇನೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆನ್ನುವುದು ನನ್ನ ಮಹದಾಸೆ. ಆದರೆ, ಅದಕ್ಕೆ ಈಗ ಆರ್ಥಿಕ ಸಮಸ್ಯೆ ಅಡ್ಡಿಯಾಗುತ್ತಿದೆ. ಈಗಾಗಲೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ. ಇನ್ನುಳಿದ ಸಿದ್ಧತೆಗೆ ಹಣದ ಅಭಾವ ಉಂಟಾಗಿದೆ. ಇಷ್ಟು ವರ್ಷ ಪಟ್ಟ ಶ್ರಮವೆಲ್ಲವೂ ವ್ಯರ್ಥವಾಗುತ್ತದೇನೋ ಎಂಬ ಆತಂಕವೂ ಎದುರಾಗಿದೆ’ ಎಂದು ಅನಂತ ಭಟ್ ಬೇಸರದಿಂದಲೇ ನುಡಿದರು.

ಅವರಿಗೆ ಸಹಾಯ ಮಾಡಲು ಇಚ್ಛಿಸುವವರು ಮೊ.ಸಂ: 72592 21514ಗೆ ಸಂಪರ್ಕಿಸಬಹುದು.

ಸಂದ ಪ್ರಶಸ್ತಿಗಳು:

* 2017ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ

* 2018ರಲ್ಲಿ ನಡೆದ ಕರ್ನಾಟಕ ರಾಜ್ಯ ಹಿರಿಯರ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು

* 2018ರಲ್ಲಿ ನಡೆದ ಕರ್ನಾಟಕ ರಾಜ್ಯ ಕಿರಿಯರ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ

* ಕರ್ನಾಟಕ ರಾಜ್ಯ ಕಿರಿಯರ ಬೆಂಚ್ ಪ್ರೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ

* 2018ರಲ್ಲಿ ನಡೆದ ದಕ್ಷಿಣ ಕನ್ನಡ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ

* 2019ರಲ್ಲಿ ನಡೆದ ದಕ್ಷಿಣ ಭಾರತ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನ

* 2019ರಲ್ಲಿ ನಡೆದ ಕರ್ನಾಟಕ ರಾಜ್ಯ ಕಿರಿಯರ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು