ಜೆಡಿಎಸ್ ಅಭ್ಯರ್ಥಿ ಹರಕೆಯ ಹಾರ: ನಾಮಪತ್ರ ಸಲ್ಲಿಸಿದ ಅನಂತಕುಮಾರ ಹೆಗಡೆ ವಾಗ್ದಾಳಿ

ಮಂಗಳವಾರ, ಏಪ್ರಿಲ್ 23, 2019
33 °C
ಕಾರ್ಯಕರ್ತರ ಸಭೆ

ಜೆಡಿಎಸ್ ಅಭ್ಯರ್ಥಿ ಹರಕೆಯ ಹಾರ: ನಾಮಪತ್ರ ಸಲ್ಲಿಸಿದ ಅನಂತಕುಮಾರ ಹೆಗಡೆ ವಾಗ್ದಾಳಿ

Published:
Updated:
Prajavani

ಕಾರವಾರ: ‘ನಮ್ಮ ವಿರೋಧಿಗಳು ಈಗಾಗಲೇ ಯುದ್ಧಭೂಮಿ ಬಿಟ್ಟು ಹೋಗಿದ್ದಾರೆ. ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಹುತೇಕ ಹರಕೆಯ ಹಾರ ಎಂದು ಹೇಳಬಹುದು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಟೀಕಿಸಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದ ಬಳಿಕ ಅವರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಅನಂತಕುಮಾರ ಹೆಗಡೆ ಅಭಿವೃದ್ಧಿಯ ಬಗ್ಗೆ ಮಾತನಾಡದೇ ಕೇವಲ ಹಿಂದೂ ಮುಸ್ಲಿಂ ಕುರಿತು ಮಾತನಾಡುತ್ತಾರೆ ಎಂದು ಕೆಲವರು ಚರ್ಚೆ ಮಾಡ್ತಾರೆ. ತಲೆ–ಬುಡ ಗೊತ್ತಿಲ್ಲದವರೆಲ್ಲ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಹಸಿರು ಉದ್ಯಮಗಳನ್ನು ಸ್ಥಾಪಿಸುವ ಬಗ್ಗೆ ಹೇಳಿದರೆ ಅಭಿವೃದ್ಧಿ ಪರ ಎಂದು ಹೇಳಿಕೊಳ್ಳುವವರಿಗೆ ಅರ್ಥವಾಗುವುದಿಲ್ಲ’ ಎಂದರು.

‘ನಾನು ಮೋದಿ ಹೆಸರಿನಲ್ಲಿ ಮತ ಕೇಳುತ್ತೇನೆ ಎಂದೂ ಹೇಳ್ತಾರೆ. ನಾನು ನನ್ನ ಮೊದಲ ಚುನಾವಣೆಯಿಂದ ಈ ಚುನಾವಣೆಯವರೆಗೂ ನನಗೆ ಮತ ನೀಡಿ ಎಂದು ಕೇಳಿಲ್ಲ. ಚುನಾವಣೆ ನನ್ನದಲ್ಲ, ನಿಮ್ಮದು. ಅಷ್ಟು ಕನಿಷ್ಠ ಸೌಜನ್ಯ ಇಲ್ಲದಿರುವವರ ಬಾಲಿಷ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಅವಶ್ಯತೆಯಿಲ್ಲ ಎಂದು ಭಾವಿಸುತ್ತೇನೆ’ ಎಂದು ಹೇಳಿದರು.

‘ಆಷಾಢಭೂತಿಗಳಿಗೆ, ಅಭಿವೃದ್ಧಿಯನ್ನು ನಿಮ್ಮ ಅಪ್ಪ ಮಾಡಿಟ್ಟ ಆಸ್ತಿಯನ್ನು ತಂದು ಮಾಡ್ತೀರೋ ಅಥವಾ ಸರ್ಕಾರದ ಹಣದಲ್ಲಿ ಮಾಡ್ತೀರೋ ಎಂದು ನಾನು ಕೇಳುತ್ತೇನೆ. ಅವರು ನಮ್ಮ ಎದುರು ನಿಂತು ಮಾತಾಡಿದರೆ ಒಳ್ಳೆಯದು. ಒಂದು ವ್ಯವಸ್ಥೆ ನಿರ್ಮಾಣಕ್ಕೆ ನಾಯಕತ್ವದ ಅಡಿ ಹೊರಟಿದ್ದೀವೆ. ಇದರ ತಲೆಬುಡ ಗೊತ್ತಿಲ್ಲದ ಕಾಗೆ, ಗೂಬೆಗಳಿಗೆ ಹೇಗೆ ಅರ್ಥವಾಗಬೇಕು’ ಎಂದು ಪ್ರಶ್ನಿಸಿದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಎಲ್ಲ ಕಡೆ ರಾಜಕೀಯ ವಾತಾವರಣ ವ್ಯಾಪಕ ಬದಲಾವಣೆ ಕಾಣ್ತಿದೆ. ರಾಜ್ಯದಲ್ಲಿ ಮಾಡಿಕೊಂಡಿರುವ ಜೆಡಿಎಸ್– ಕಾಂಗ್ರೆಸ್ ಮೈತ್ರಿಕೂಟ ಅತಂತ್ರವಾಗಿದೆ. ಅದು ಮೂರಾಬಟ್ಟೆಯಾಗಿದೆ. ಎಲ್ಲಿದೆ ಎಂದು ದುರ್ಬೀನು ಹಿಡಿದು ನೋಡಬೇಕು’ ಎಂದು ವ್ಯಂಗ್ಯವಾಡಿದರು.

‘ದೇಶಪಾಂಡೆ ಪ್ರಯತ್ನಿಸಲೇ ಇಲ್ಲ’: ಮೈತ್ರಿಕೂಟದ ಸ್ಥಿತಿ ಏನಾಗಿದೆ ಎಂದು ಎಲ್ಲರಿಗೂ ತಿಳಿಸಿದೆ. ಹಾಸನ, ಮೈಸೂರು, ತುಮಕೂರು, ದಾವಣಗೆರೆ, ಧಾರವಾಡದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಅತಂತ್ರವಾಗಿದೆ. ಉತ್ತರ ಕನ್ನಡದಲ್ಲಿ ಜೆಡಿಎಸ್‌ಗೆ ಟಿಕೆಟ್ ಕೊಡಬಾರದಿತ್ತು. ನನಗೆ ಬೇಸರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಒಂದು ಹಂತದಲ್ಲಿ ಜೆಡಿಎಸ್‌ನಿಂದ ಅವರ ಮಗನಿಗೆ ಟಿಕೆಟ್ ನೀಡುವ ಬಗ್ಗೆಯೂ ಮಾತುಕತೆಯಾಗಿತ್ತು ಎಂದು ಗೊತ್ತಾಗಿದೆ’ ಎಂದು ಜಗದೀಶ ಶೆಟ್ಟರ್ ಹೇಳಿದರು. 

‘ದೇಶಪಾಂಡೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನವನ್ನೇ ಮಾಡಿಲ್ಲ. ಅವರಿಗೆ ಗೆಲ್ಲಲು ಸಾಧ್ಯವಿಲ್ಲ ಎಂದು ಗೊತ್ತಿದೆ’ಎಂದು ಟೀಕಿಸಿದರು.

ಶಾಸಕರಾದ ರೂ‍ಪಾಲಿ ನಾಯ್ಕ, ಸುನೀಲ ನಾಯ್ಕ, ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರು ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ಮುಖಂಡರಾದ ಸುನೀಲ ಹೆಗಡೆ, ಗಂಗಾಧರ ಭಟ್, ಲೋಕಸಭಾ ಕ್ಷೇತ್ರದ ಉಸ್ತುವಾರಿ ಲಿಂಗರಾಜ ಪಾಟೀಲ ಇದ್ದರು.

ಅನಂತಕುಮಾರ ಹೆಗಡೆ ನಾಮಪತ್ರ ಸಲ್ಲಿಸುವಾಗ ಅವರ ಪತ್ನಿ ಶ್ರೀರೂಪಾ, ಶಾಸಕ ಜಗದೀಶ ಶೆಟ್ಟರ್, ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಹಾಗೂ ವಕೀಲ ಬಿ.ಎಸ್.ಪೈ ಜತೆಗಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !