ಮಂಗಳವಾರ, ಡಿಸೆಂಬರ್ 1, 2020
19 °C

ರೈಲಿನಲ್ಲಿ ಚಿನ್ನಾಭರಣ ಕದ್ದ ಆರೋಪಿಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಮಂಗಳಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಯನ್ನು ರೈಲ್ವೆ ಸುರಕ್ಷತಾ ದಳದ (ಆರ್.ಪಿ.ಎಫ್) ಸಿಬ್ಬಂದಿ ಕಾರವಾರದಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ಕಣ್ಣೂರು ನಿವಾಸಿ ನಿಖಿಲ್ ಕುಮಾರ್ ಎಂದು ಗುರುತಿಸಲಾಗಿದೆ.

ನ.13ರಂದು ಉಡುಪಿಯಿಂದ ಮುಂಬೈಗೆ ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವನಿತಾ ದಿವಾಕರ ಎಂಬುವವರ ಕೈಚೀಲ ಕಳವಾಗಿತ್ತು. ಅದರಲ್ಲಿ ರೂ.2.20 ಲಕ್ಷ ಮೌಲ್ಯದ ಚಿನ್ನಾಭರಣ, ಪರ್ಸ್, ಎ.ಟಿ.ಎಂ ಕಾರ್ಡ್ ಹಾಗೂ ಇತರ ದಾಖಲೆಗಳಿದ್ದವು. ಈ ಬಗ್ಗೆ ಅವರು ರೈಲಿನ ಟಿಕೆಟ್ ಪರಿಶೀಲನಾಧಿಕಾರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ಮಡಗಾಂವ್ ನ ರೈಲ್ವೆ ಭದ್ರತಾ ದಳದ ಅಪರಾಧ ವಿಭಾಗದ ಇನ್ ಸ್ಪೆಕ್ಟರ್ ವಿನೋದ್ ಕುಮಾರ್, ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದರು.

ಈ ವೇಳೆ, ಟೋಪಿ ಧರಿಸಿದ್ದ, ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಅವರು ಗುರುತಿಸಿದರು. ಆತನ ಭಾವಚಿತ್ರವನ್ನು ಆರ್.ಪಿ.ಎಫ್ ಸಿಬ್ಬಂದಿಯ ವಾಟ್ಸ್ ಆ್ಯಪ್ ಗ್ರೂಪ್ ಗೆ ಕಳುಹಿಸಿಕೊಡಲಾಯಿತು. ಮರುದಿನ, ನ.14ರಂದು ಆ ವ್ಯಕ್ತಿಯು ಅದೇ ಟೋಪಿಯನ್ನು ಧರಿಸಿ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ಸ್ಥಳೀಯ ಆರ್.ಪಿ.ಎಫ್ ಕಾನ್ ಸ್ಟೆಬಲ್ ಆರ್.ಡಿ.ವಿನಾಯಕ ಪತ್ತೆ ಹಚ್ಚಿದರು. ಆತ ಕಳವು ಮಾಡಿ‌ದ್ದ ವಸ್ತುಗಳೊಂದಿಗೆ ತನ್ನ ಊರಿಗೆ ಮರಳುತ್ತಿದ್ದ. ಪಾಸಿಂಗ್ ಸಲುವಾಗಿ ರೈಲು ಕಾರವಾರದಲ್ಲಿ ನಿಂತಿದ್ದಾಗ ಆತನನ್ನು ವಶಕ್ಕೆ ಪಡೆದರು ಎಂದು ಕೊಂಕಣ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಚಿನ್ನಾಭರಣಗಳೂ ಸೇರಿದಂತೆ ಆರೋಪಿಯು ಕದ್ದ ವಸ್ತುಗಳೆಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಕೊಂಕಣ ರೈಲ್ವೆ ಪೊಲೀಸರ ವಶಕ್ಕೆ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು