ಭಾನುವಾರ, ಫೆಬ್ರವರಿ 23, 2020
19 °C
ದಾಂಡೇಲಿ ವ್ಯಾಪ್ತಿಯಿಂದ ಹಸ್ತಾಂತರ

ಯಲ್ಲಾಪುರ ವ್ಯಾಪ್ತಿಗೆ ಅತ್ತಿವೇರಿ ಪಕ್ಷಿಧಾಮ

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ದೇಶ–ವಿದೇಶ ಹಕ್ಕಿಗಳ ‘ಹೆರಿಗೆ ಆಸ್ಪತ್ರೆ’ ಎಂದೇ ಗುರುತಿಸಿಕೊಂಡಿರುವ ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮವನ್ನು ಯಲ್ಲಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಆಡಳಿತ ವ್ಯಾಪ್ತಿಗೆ ಒಳಪಡಿಸಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್ ಆದೇಶ ಹೊರಡಿಸಿದ್ದಾರೆ.

ಇಲ್ಲಿಯವರೆಗೆ ದಾಂಡೇಲಿಯ ಕಾಳಿ ಹುಲಿ ಯೋಜನೆ ವ್ಯಾಪ್ತಿಗೆ ಅತ್ತಿವೇರಿ ಪಕ್ಷಿಧಾಮ ಒಳಪಟ್ಟಿತ್ತು. ಪಕ್ಷಿಧಾಮ ಇರುವುದು ಒಂದೆಡೆಯಾದರೆ, ಇದರ ನಿರ್ವಹಣೆ ನಿರ್ವಹಣೆ ಇನ್ನೊಂದು ಕಡೆ ಇತ್ತು. ಪ್ರತಿವರ್ಷ ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ, ಇಲ್ಲಿ ಅಭಿವೃದ್ಧಿ ಕುಂಠಿತಗೊಂಡಿತ್ತು.

ಶಾಸಕರ ಮನವಿಗೆ ಸ್ಪಂದನೆ

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಅತ್ತಿವೇರಿ ಪಕ್ಷಿಧಾಮವನ್ನು ಯಲ್ಲಾಪುರ ವಿಭಾಗಕ್ಕೆ ಹಸ್ತಾಂತರಿಸುವಂತೆ ಶಾಸಕ ಶಿವರಾಮ ಹೆಬ್ಬಾರ್ ಈ ಹಿಂದೆ ಅರಣ್ಯ ಸಚಿವರಿಗೆ ಮನವಿ ನೀಡಿದ್ದರು. 70 ಕಿ.ಮೀ ದೂರದಲ್ಲಿರುವ ಕುಳಗಿ ವನ್ಯಜೀವಿ ಧಾಮದ ಅಧೀನಕ್ಕೆ ಈ ಪಕ್ಷಿಧಾಮ ಒಳಪಡಿಸಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದರು. ಶಾಸಕರ ಮನವಿಯನ್ನು ಪರಿಗಣಿಸಿ, ಅರಣ್ಯಪಡೆ ಮುಖ್ಯಸ್ಥರು ಈಗ ಆದೇಶ ಹೊರಡಿಸಿದ್ದಾರೆ.

‘2000ನೇ ಸಾಲಿನಲ್ಲಿ ಅತ್ತಿವೇರಿ ಪಕ್ಷಿಧಾಮ ಎಂದು ಸರ್ಕಾರ ಘೋಷಣೆ ಮಾಡಿದೆ. ವರ್ಷದ ಮೂರ್ನಾಲ್ಕು ತಿಂಗಳು ಬಿಡಾರ ಹೂಡುವ ವಲಸೆ ಹಕ್ಕಿಗಳನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಆದರೆ, ಮೂಲಸೌಕರ್ಯ ಹಾಗೂ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಯಲ್ಲಾಪುರ ಅರಣ್ಯ ವ್ಯಾಪ್ತಿಗೆ ಸೇರಿಸಿರುವುದರಿಂದ ಅಭಿವೃದ್ಧಿಗೆ ಸಹಾಯವಾಗುತ್ತದೆ’ ಎಂದು ಹುನಗುಂದ ಗ್ರಾಮಸ್ಥ ಸಿದ್ಧು ಹಡಪದ ಹೇಳಿದರು.

‘ಮುಂಡಗೋಡ ತಾಲ್ಲೂಕಿನಲ್ಲಿದ್ದರೂ ಅದರ ನಿರ್ವಹಣೆಯನ್ನು ಈ ಹಿಂದೆ ರಾಣೆಬೆನ್ನೂರು ವನ್ಯಜೀವಿ ಘಟಕಕ್ಕೆ ನೀಡಲಾಗಿತ್ತು. ನಂತರ ದಾಂಡೇಲಿ ಕಾಳಿ ಹುಲಿ ಯೋಜನೆ ವ್ಯಾಪ್ತಿಗೆ ಸೇರಿಸಿದ್ದರು. ಇನ್ನಾದರೂ ಸ್ಥಳೀಯರ ಅಭಿಪ್ರಾಯವನ್ನು ಪಡೆದು ಪ್ರಮುಖ ಪ್ರವಾಸಿ ತಾಣ ಮಾಡಲು ಪ್ರಯತ್ನಿಸಬೇಕಾಗಿದೆ’ ಎಂದು ಸ್ಥಳೀಯ ನಿವಾಸಿ ಚಂದ್ರು ಪಾಟೀಲ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು