ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ ಹೊಡೆತಕ್ಕೆ ನಲುಗಿದ ಬಾಳೆ

150 ಹೆಕ್ಟೇರ್‌ಗೂ ಅಧಿಕ ಬೆಳೆ ನಾಶ: ಪರಿಹಾರದ ನಿರೀಕ್ಷೆಯಲ್ಲಿ ಬೆಳೆಗಾರರು
Last Updated 8 ಆಗಸ್ಟ್ 2020, 12:51 IST
ಅಕ್ಷರ ಗಾತ್ರ

ಶಿರಸಿ: ಮಳೆ–ಗಾಳಿಯ ಅಬ್ಬರಕ್ಕೆ ತಾಲ್ಲೂಕಿನ ಪೂರ್ವಭಾಗದಲ್ಲಿ ಬಾಳೆ ಬೆಳೆಗಾರರು ನಲುಗಿದ್ದಾರೆ. ಬನವಾಸಿ ಹೋಬಳಿಯಲ್ಲಿ 150 ಹೆಕ್ಟೇರ್‌ಗೂ ಅಧಿಕ ಬಾಳೆ ತೋಟ ನೆಲಕ್ಕುರುಳಿದೆ.

ಬನವಾಸಿ, ಗುಡ್ನಾಪುರ, ಕಾಳಂಗಿ, ವದ್ದಲ, ಸಂತೊಳ್ಳಿ, ಅಂಡಗಿ ಭಾಗಗಳಲ್ಲಿ ಸಾವಿರಾರು ಬಾಳೆ ಮರಗಳು ಬಿದ್ದಿವೆ. ಗೊನೆ ಬಿಟ್ಟು, ಕಟಾವಿಗೆ ಬಂದಿದ್ದ ಬೆಳೆ ಕೈತಪ್ಪಿ ಹೋಗಿದ್ದಕ್ಕೆ ರೈತರು ದಿಕ್ಕುತೋಚದಂತಾಗಿದ್ದಾರೆ.

ಬನವಾಸಿ ಹೋಬಳಿಯ ಪ್ರಮುಖ ಬೆಳೆ ಭತ್ತವಾಗಿದ್ದರೂ, ರೈತರ ಕೈಹಿಡಿದಿದ್ದು ಬಾಳೆ, ಅನಾನಸ್ ಹಾಗೂ ಶುಂಠಿ ಬೆಳೆಗಳು. 2000 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತದೆ. ‘ವದ್ದಲ ಗ್ರಾಮವೊಂದರಲ್ಲೇ 20 ಎಕರೆಯಷ್ಟು ಬಾಳೆ ಬೆಳೆ ನಾಶವಾಗಿದೆ. ಗೊನೆ ಬಿಟ್ಟಿದ್ದ ಸಾವಿರಾರು ಬಾಳೆ ಗಿಡಗಳು ನೆಲಕ್ಕೊರಗಿವೆ. ಲಾಕ್‌ಡೌನ್‌ ವೇಳೆ ಬೆಳೆಗೆ ಬೆಲೆ ಇರಲಿಲ್ಲ. ಆಗ ಆಗಿದ್ದ ನಷ್ಟವನ್ನು ಸರಿದೂಗಿಸುವ ಮುನ್ನವೇ ಗಾಳಿ ಬೆಳೆಯನ್ನು ಕಿತ್ತುಕೊಂಡಿದೆ’ ಎನ್ನುತ್ತಾರೆ ರೈತ ವಸಂತ ಗೌಡ.

‘ವದ್ದಲದಲ್ಲಿ 15ಕ್ಕೂ ಹೆಚ್ಚು ರೈತರು, ಸಂತೊಳ್ಳಿ, ಕಾಳಂಗಿಯ 10ಕ್ಕೂ ಹೆಚ್ಚು ರೈತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಲಾಕ್‌ಡೌನ್ ವೇಳೆ ಕೆ.ಜಿ.ಯೊಂದಕ್ಕೆ ₹ 6ಕ್ಕೂ ಕೇಳುವವರಿರಲಿಲ್ಲ. ಬೆಳೆ ಕಟಾವು ಮಾಡಿದ ಕೂಲಿ ಹಣವೂ ಬರಲಿಲ್ಲ. ಈಗ ಮತ್ತೆ ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಿದೆ’ ಎಂದು ರೈತರು ಅಲವತ್ತುಕೊಂಡರು.

‘ಸಾಲ ಮಾಡಿ ಬಾಳೆ ಬೆಳೆದಿದ್ದೆವು. ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾಗಿದೆ. ಕಂಗಾಲಾಗಿರುವ ರೈತರಿಗೆ ಪರಿಹಾರ ನೀಡಿ, ಸರ್ಕಾರ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು’ ಎಂದು ಬೆಳೆಗಾರರಾದ ಸದಾನಂದ ಗೌಡ, ನೀಲಪ್ಪ ಮಾದರ, ಮಲ್ಲಿಕಾರ್ಜುನ ಗೌಡ, ಗುತ್ಯಪ್ಪ ಚೆನ್ನಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT