ಶುಕ್ರವಾರ, ಮೇ 27, 2022
22 °C
ಜಿಲ್ಲೆಯ ಕಡಲತೀರಗಳಿಗೆ ಪ್ರವೇಶ ನಿಷೇಧ

ವರ್ಷಾಂತ್ಯದ ದಿನ: ಕಡಲತೀರ ನಿರ್ಜನ, ಗೋವಾದತ್ತ ಸಾಗಿದ ಪ್ರವಾಸಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ಕಡಲತೀರಗಳಲ್ಲಿ ಸಂಭ್ರಮಿಸುತ್ತ ಹೊಸ ವರ್ಷಾಚರಣೆ ಮಾಡಲು ಬಯಸಿದ್ದವರಿಗೆ ಈ ಬಾರಿಯೂ ನಿರಾಸೆಯಾಯಿತು. ಜಿಲ್ಲಾಡಳಿತವು ಶುಕ್ರವಾರ ರಾತ್ರಿ 8ರಿಂದಲೇ ಕರ್ಫ್ಯೂ ವಿಧಿಸಿದ್ದರಿಂದ ಕಡಲ ಕಿನಾರೆ ಖಾಲಿಯಾಗಿ ಕಂಡುಬಂತು.

ಕೋವಿಡ್ ರೂಪಾಂತರಿ ತಳಿ ‘ಓಮೈಕ್ರಾನ್’ ಪ್ರಸರಣ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಕರಾವಳಿಯ ಐದೂ ತಾಲ್ಲೂಕುಗಳ ಕಡಲಕಿನಾರೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇದರ ಮಾಹಿತಿಯಿದ್ದ ಕಾರಣ ಹೆಚ್ಚಿನ ಜನ ಈ ಕಡೆ ಹೆಜ್ಜೆ ಹಾಕಲಿಲ್ಲ. ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರವೂ ಸೇರಿದಂತೆ ಎಲ್ಲೆಡೆ ಪೊಲೀಸ್ ಸಿಬ್ಬಂದಿ ಬಂದೊಬಸ್ತ್ ಮಾಡಿದ್ದರು.

ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ ನಂತರ ಎರಡು ವರ್ಷಗಳಿಂದ ಜಿಲ್ಲೆಯ ಕಡಲತೀರಗಳಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಜನ ಸಂದಣಿ ಸೇರುವುದನ್ನು ಜಿಲ್ಲಾಡಳಿತ ನಿಯಂತ್ರಿಸುತ್ತಿದೆ. ಕಳೆದ ವರ್ಷವೂ ಕಡಲತೀರಗಳಲ್ಲಿ ಸೇರಲು ಅವಕಾಶ ಸಿಕ್ಕಿರಲಿಲ್ಲ.

ಈ ವರ್ಷ ಕೋವಿಡ್ ದೃಢಪಡುವ ಪ್ರಮಾಣವು ಶೇ 1ಕ್ಕಿಂತಲೂ ಕಡಿಮೆಯಿದೆ. ಹಾಗಾಗಿ ಒಂದಷ್ಟು ನಿರ್ಬಂಧಗಳೊಂದಿಗೆ ಹೊಸ ವರ್ಷಾಚರಣೆಗೆ ಅವಕಾಶ ಸಿಗಬಹುದು ಎಂದು ಜನ ಹಾಗೂ ಆತಿಥ್ಯ ವಲಯದ ಉದ್ಯಮಿಗಳು ನಿರೀಕ್ಷಿಸಿದ್ದರು. ಆದರೆ, ಓಮೈಕ್ರಾನ್ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕೇಕ್ ಖರೀದಿ: ನಗರದ ನೂರಾರು ಮಂದಿ ಹೊಸ ವರ್ಷವನ್ನು ಕೇಕ್ ಕತ್ತರಿಸುವ ಮೂಲಕ ಬರಮಾಡಿಕೊಂಡರು. ಹಾಗಾಗಿ ಬೇಕರಿಗಳಲ್ಲಿ ವಿವಿಧ ಗಾತ್ರಗಳ ಕೇಕ್‌ಗಳಿಗೆ ಉತ್ತಮ ಬೇಡಿಕೆ ಕಂಡುಬಂತು.

ಹೊಸ ವರ್ಷವನ್ನು ಸ್ವಾಗತಿಸಲು ಬಿಯರ್, ವೈನ್‌ಗಳ ಖರೀದಿಯೂ ಜೋರಾಗಿತ್ತು. ನಗರದ ಬಹುತೇಕ ಮದ್ಯ ಮಾರಾಟ ಮಳಿಗೆಗಳ ಮುಂದೆ ಸಂಜೆಯ ವೇಳೆಗೆ ಹೆಚ್ಚಿನ ಗ್ರಾಹಕರಿದ್ದರು.

ಕಾಯ್ದಿರಿಸಿದ್ದ ಕೊಠಡಿಗಳು ರದ್ದು: ಕೋವಿಡ್ ಪೂರ್ವದಲ್ಲಿ ವರ್ಷಾಂತ್ಯದ ದಿನದಂದು ಜಿಲ್ಲೆಯ ಪ್ರಸಿದ್ಧ ಕಡಲಕಿನಾರೆಗಳು ಪ್ರವಾಸಿಗರು, ಹೊಸ ವರ್ಷಾಚರಣೆ ಮಾಡುವವರಿಂದ ತುಂಬಿರುತ್ತಿತ್ತು. ಆದರೆ, ಈ ಬಾರಿಯೂ ಪ್ರವೇಶ ನಿಷೇಧಿಸಿದ್ದರಿಂದ ಗೋಕರ್ಣ, ಮುರುಡೇಶ್ವರ, ಕಾರವಾರದಲ್ಲಿ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಮುಂಗಡ ಕಾಯ್ದಿರಿಸಿದ್ದ ಕೊಠಡಿಗಳನ್ನು ಹಲವರು ರದ್ದು ಮಾಡಿದರು.

ಅವರಲ್ಲಿ ಬಹುತೇಕ ಮಂದಿ, ಸಮೀಪದ ಗೋವಾದತ್ತ ಪ್ರಯಾಣಿಸಿದರು. ಅಲ್ಲಿನ ಕಡಲತೀರಗಳಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇಲ್ಲದಿರುವುದು ಪ್ರವಾಸಿಗರಿಗೆ ಅನುಕೂಲವಾಯಿತು.

ಇದರಿಂದ ಸ್ಥಳೀಯ ಪ್ರವಾಸೋದ್ಯಮಿಗಳು ನಷ್ಟ ಅನುಭವಿಸಿದ್ದಾಗಿ ದೂರಿದ್ದಾರೆ. ಅಲ್ಲದೇ ಇಲ್ಲಿರುವ ನಿರ್ಬಂಧದ ನೇರ ಲಾಭವನ್ನು ಗೋವಾ ಪಡೆದುಕೊಂಡಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು