ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ ಪುರಸಭೆಗೆ ಅವಿರೋಧ ಆಯ್ಕೆ

ಮುಹಮ್ಮದ್ ಪರ್ವೇಜ್ ಕಾಶಿಮಜಿ ಅಧ್ಯಕ್ಷ, ಮುಹಮ್ಮದ್ ಖೈಸರ್ ಮೊಹತೆಶಂ ಉಪಾಧ್ಯಕ್ಷ
Last Updated 5 ನವೆಂಬರ್ 2020, 15:49 IST
ಅಕ್ಷರ ಗಾತ್ರ

ಭಟ್ಕಳ: ಇಲ್ಲಿನ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದೆ. ಅಧ್ಯಕ್ಷರಾಗಿ ತಂಜೀಂ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮುಹಮ್ಮದ್ ಪರ್ವೇಜ್ ಕಾಶಿಮಜಿ ಹಾಗೂ ಉಪಾಧ್ಯಕ್ಷರಾಗಿ ಮುಹಮ್ಮದ್ ಖೈಸರ್ ಮೊಹತೆಶಂ ಅವಕಾಶ ಪಡೆದುಕೊಂಡರು.

ಪುರಸಭೆಯ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಆರಂಭದಲ್ಲೇ ಇಬ್ಬರೂ ನಾಮಪತ್ರಗಳನ್ನು ಸಲ್ಲಿಸಿದರು. ಬಳಿಕ ಯಾರೂ ಉಮೇದುವಾರಿಕೆ ವ್ಯಕ್ತಪಡಿಸಲಿಲ್ಲ. ಹಾಗಾಗಿ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ಎಸ್.ರವಿಚಂದ್ರ ಇಬ್ಬರನ್ನೂ ಅವಿರೋಧ ಆಯ್ಕೆಯೆಂದು ಪ್ರಕಟಿಸಿದರು.

ಪುರಸಭೆಯಲ್ಲಿ 23 ಸದಸ್ಯ ಬಲವಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಇಬ್ಬರೂ ಭಟ್ಕಳದ ಮಜ್ಲಿಸೆ ಇಸ್ಲಾ-ವ-ತಂಜೀಂ ಸಂಸ್ಥೆಯ ಬೆಂಬಲ ಪಡೆದುಕೊಂಡಿದ್ದಾರೆ.

‘ಅಭಿವೃದ್ಧಿಗೆ ಆದ್ಯತೆ’:ತಮ್ಮ ಆಯ್ಕೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮುಹಮ್ಮದ್ ಪರ್ವೇಜ್ ಕಾಶಿಮಜಿ, ‘ಪುರಸಭೆಗೆ ಒಂದೂವರೆ ವರ್ಷಗಳಿಂದ ಅಧಿಕಾರ ಇಲ್ಲದ ಕಾರಣ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಹಾಗಾಗಿ ಪುರಸಭೆಯಲ್ಲಿ ಮೂಲಸೌಕರ್ಯವೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ನಾಗರಿಕರ ಕೆಲಸಗಳನ್ನು ವೇಗವಾಗಿ ಮಾಡಿಕೊಡಲು ಕಾಳಜಿ ವಹಿಸಲಾಗುವುದು’ ಎಂದು ತಿಳಿಸಿದರು.

‘ಭಟ್ಕಳ ಪುರಸಭೆಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸುವ ಗುರಿಯನ್ನು ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಎಲ್ಲರ ಸಹಕಾರ ಸಿಗುವ ನಿರೀಕ್ಷೆಯಿದೆ. ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡು ಒಂದು ತಂಡವಾಗಿ ಕಾರ್ಯ ನಿರ್ವಹಿಸಲಾಗುವುದು. ಪುರಸಭೆಯು ಜನರ ಸೇವೆಗೆ ಸದಾ ಸಿದ್ಧವಾಗಿರುತ್ತದೆ’ ಎಂದು ಹೇಳಿದರು.

ಇದೇವೇಳೆ, ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬೆಂಬಲಿಗರು ಹೂವಿನ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು. ಬಳಿಕ ತೆರೆದ ಜೀಪಿನಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT