ಶುಕ್ರವಾರ, ಜುಲೈ 23, 2021
23 °C
19 ತಿಂಗಳಿನಿಂದ ವೇತನವೂ ಇಲ್ಲ, ಆರು ತಿಂಗಳ ಹಿಂದೆ ವೀಸಾ ಅವಧಿ ಮುಕ್ತಾಯ

ಇರಾನ್‌ನಲ್ಲಿ ಹಡಗಿನಲ್ಲೇ ಬಂಧಿಯಾದ ಭಟ್ಕಳದ ಯುವಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಇರಾನ್‌ನಲ್ಲಿ ಉದ್ಯೋಗದಲ್ಲಿರುವ ಪಟ್ಟಣದ ಯುವಕರೊಬ್ಬರು ಮರಳಿ ಸ್ವದೇಶಕ್ಕೆ ಬರಲು ಕೇಂದ್ರ ಸರ್ಕಾರದ ಸಹಾಯ ಬೇಡುತ್ತಿದ್ದಾರೆ. 19 ತಿಂಗಳಿನಿಂದ ವೇತನವನ್ನೂ ನೀಡದೇ ದುಡಿಸಿಕೊಳ್ಳುತ್ತಿದ್ದು, ಹೇಗಾದರೂ ಪಾರು ಮಾಡುವಂತೆ ವಿಡಿಯೊ ಮುಖಾಂತರ ಅಂಗಲಾಚಿದ್ದಾರೆ.

ಪಟ್ಟಣದ ಆಜಾದ್ ನಗರದವರಾದ ಯಾಸಿನ್ ಶಾ ಮಕಾನ್ದಾರ್ ಸಹಾಯದ ನಿರೀಕ್ಷೆಯಲ್ಲಿರುವವರು. ಎಂ.ಕಾಂ  ಪದವೀಧರರಾಗಿರುವ ಅವರು, 2020ರ ಜ.12ರಿಂದ ಇರಾನ್‌ನ ‘ಫಯಾಮ್ ಟು’ ಎಂಬ ಹಡಗಿನಲ್ಲಿ ಕೆಲಸ ಮಾಡುತ್ತಿದ್ದಾರೆ. 19 ತಿಂಗಳಿನಿಂದ ತಮಗೆ ವೇತನವನ್ನೂ ಕೊಡುತ್ತಿಲ್ಲ, ವಾಪಸ್ ಬರಲು ಬಿಡುತ್ತಿಲ್ಲ. ಆರು ತಿಂಗಳ ಹಿಂದೆ ವೀಸಾದ ಅವಧಿಯೂ ಮುಕ್ತಾಯವಾಗಿದೆ ಎಂದು ಅವರು ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ. ಸದ್ಯ ಅವರು ಖೋರಂಶಹರ್ ಬಂದರಿನಲ್ಲಿರುವುದಾಗಿ ಹೇಳಿದ್ದಾರೆ.

ಹೈದರಬಾದ್‌ನಲ್ಲಿ ಮರೈನ್ ಕೋರ್ಸ್ ಅಧ್ಯಯನ ಮಾಡಿ, 2020ರ ಜನವರಿಯಲ್ಲಿ ಮುಂಬೈನ ಸಿ ಫೋರಂ ಮರೈನ್ ಕಂಪನಿಯ ಏಜೆಂಟ್ ಸಹಾಯದಿಂದ ಇರಾನ್‌ನಲ್ಲಿ ಉದ್ಯೋಗ ಪಡೆದಿದ್ದರು. ಇದಕ್ಕಾಗಿ ₹ 7 ಲಕ್ಷ ವ್ಯಯಿಸಿದ್ದಾಗಿ ಅವರು ಹೇಳಿದ್ದಾರೆ.

ಹಗಲು ರಾತ್ರಿಯೆನ್ನದೇ ಅಮಾನವೀಯವಾಗಿ ದುಡಿಸಿಕೊಳ್ಳುತ್ತಿದ್ದಾರೆ. ಇಲ್ಲಿಂದ ಬಿಡುಗಡೆ ಮಾಡಿಸುವಂತೆ ಭಾರತದ ರಾಯಭಾರ ಕಚೇರಿಗೆ ಸಂಪರ್ಕಿಸಿದರೆ ಸರಿಯಾಗಿ ಸ್ಪಂದನ ವ್ಯಕ್ತವಾಗಲಿಲ್ಲ. ಇರಾನ್‌ನಲ್ಲಿರುವ ದೂತಾವಾಸ ಕಚೇರಿಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಅಲ್ಲದೇ ಅಲ್ಲಿರುವ ಕೆಲವು ಭಾರತೀಯರು ಸಂಪರ್ಕದಲಿದ್ದು ತನಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತ ಭಟ್ಕಳದಲ್ಲಿ ಅವರ ತಾಯಿ ಝರೀನಾ ತಮ್ಮ ಮಗನ  ಸುರಕ್ಷಿತವಾಗಿ ಮರಳಲು ಸಹಾಯ ಮಾಡುವಂತೆ ರಾಯಭಾರ ಕಚೇರಿಗೆ ಸೂಚಿಸಬೇಕು ಎಂದು ಸರ್ಕಾರವನ್ನು ಕೋರಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ನನ್ನ ಮಗನಿಗೆ ಸರಿಯಾಗಿ ಊಟ, ತಿಂಡಿ ಕೂಡ ಕೊಡುತ್ತಿಲ್ಲ. ನನ್ನ ಮಗ ಭಾರತಕ್ಕೆ ಮರಳಲು ಪ್ರಯತ್ನಿಸುತ್ತಿದ್ದು, ಕೆಲಸಕ್ಕೆ ಸೇರಿಸಿಕೊಂಡ ಕಂಪನಿ ಬಿಡುತ್ತಿಲ್ಲ. ಕೇಂದ್ರ ಸರ್ಕಾರ ನನ್ನ ಮಗನ ನೆರವಿಗೆ ಬರಬೇಕು. ಇರಾನ್‌ನ ಭಾರತದ ರಾಯಭಾರಿ ಕಚೇರಿಯಿಂದ ಮಗನನ್ನು ಸಂಪರ್ಕಿಸಿ ಮರಳಿ ಬರಲು ನೆರವು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು