ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದಲ್ಲಿ ಗೊಂದಲ ಸೃಷ್ಟಿಸುವುದು ಮಾರ್ಗರೆಟ್ ಆಳ್ವಗೆ ಶೋಭೆಯಲ್ಲ : ಭೀಮಣ್ಣನಾಯ್ಕ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ತಿರುಗೇಟು
Last Updated 16 ಡಿಸೆಂಬರ್ 2019, 12:48 IST
ಅಕ್ಷರ ಗಾತ್ರ

ಶಿರಸಿ: ‘ಕಾಂಗ್ರೆಸ್ ಪಕ್ಷದೊಳಗೆ ಗೊಂದಲ ಸೃಷ್ಟಿಸುವುದು ಹಿರಿಯ ನಾಯಕಿಯಾಗಿರುವ ಮಾರ್ಗರೆಟ್ ಆಳ್ವಾ ಅವರಿಗೆ ಶೋಭೆ ತರುವುದಿಲ್ಲ. ಅಪರೂಪದ ಅತಿಥಿಯಾಗಿರುವ ಅವರು ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಾಲಯ ಎಲ್ಲಿದೆ ಎಂದು ಮೊದಲು ತಿಳಿದುಕೊಳ್ಳಲಿ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ತಿರುಗೇಟು ನೀಡಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಾನು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಲು ಅವರು ಯಾರು ? 2009ರ ಲೋಕಸಭೆ ಚುನಾವಣೆಯಲ್ಲಿ ಸೋಲುಂಡ ನಂತರ ಜಿಲ್ಲೆಯ ರಾಜಕೀಯದಿಂದ ದೂರವಿದ್ದ ಆಳ್ವಾ, ಏಕಾಏಕಿ ಪಕ್ಷದ ಬಗ್ಗೆ ಮಾತನಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರಿಗೆ ಅಸಮಾಧಾನವಿದ್ದರೆ ಪಕ್ಷದ ಕಚೇರಿಗೆ ಬಂದು ಹೇಳಬಹುದಿತ್ತು. ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸುವ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ಹೇಳುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದರು.

’ನಾನು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ವೇಳೆ ಜಿಲ್ಲೆಯಲ್ಲಿ ಒಬ್ಬರೇ ಕಾಂಗ್ರೆಸ್ ಶಾಸಕರಿದ್ದರು. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ, ‘ಕಾಂಗ್ರೆಸ್‌ ನಡೆ ಹಳ್ಳಿಯ ಕಡೆಗೆ’ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದನ್ನು, ಕೆಪಿಸಿಸಿ ರಾಜ್ಯದಾದ್ಯಂತ ಜಾರಿಗೊಳಿಸಿತು. ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಾದಾಗ, ಕೆಪಿಸಿಸಿಗೆ ಲಿಖಿತವಾಗಿಯೇ ವರದಿ ನೀಡಿದ್ದೆ. ಪಕ್ಷದ ವರಿಷ್ಠರ ಆದೇಶದಂತೆ ಈ ಸ್ಥಾನದಲ್ಲಿ ಮುಂದುವರಿಯುತ್ತಿದ್ದೇನೆಯೇ ಹೊರತು ಅಧಿಕಾರ ನಡೆಸಬೇಕೆಂಬ ಸ್ವಾರ್ಥದಿಂದ ಅಲ್ಲ’ ಎಂದು ಖಾರವಾಗಿ ಹೇಳಿದರು.

‘ಎಲ್ಲರನ್ನೂ ತಾವೇ ಕಾಂಗ್ರೆಸ್ಸಿಗೆ ಕರೆತಂದಿರುವುದಾಗಿ ಆಳ್ವಾ ಹೇಳಿದ್ದಾರೆ. ಹಾಗಿದ್ದರೆ, ಅವರೇ ಕರೆತಂದಿದ್ದ ಹೆಬ್ಬಾರರನ್ನು ಯಾಕೆ ಉಳಿಸಿಕೊಳ್ಳಲು ಆಗಿಲ್ಲ. ಯಲ್ಲಾಪುರ ವಿಧಾನಸಭೆ ಉಪಚುನಾವಣೆಯ ಟಿಕೆಟ್ ಕೊಡಬೇಕೆಂದು ನಾನು ಬೇಡಿಕೆ ಇಟ್ಟಿಲ್ಲ. ಪಕ್ಷದ ವರಿಷ್ಠರ ತೀರ್ಮಾನದಂತೆ ಸ್ಪರ್ಧಿಸಿದ್ದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

’ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇನೆ. ಉಪಚುನಾವಣೆಯಲ್ಲಿ 50ಸಾವಿರ ಜನರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಪಕ್ಷ ಸಂಘಟಿಸುವುದು ಕಾರ್ಯಕರ್ತರ ಮೊದಲ ಆದ್ಯತೆ ಆಗಬೇಕು’ ಎಂದು ಹೇಳಿದರು. ಪ್ರಮುಖರಾದ ಜಗದೀಶ ಗೌಡ, ಅಬ್ಬಾಸ್ ತೋನ್ಸೆ, ಎಸ್.ಟಿ.ಹೆಗಡೆ, ದೀಪಕ ದೊಡ್ಡೂರು, ಶೈಲೇಶ್, ಪ್ರಸನ್ನ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT