ಗುರುವಾರ , ಆಗಸ್ಟ್ 18, 2022
25 °C

ಮೇಜರ್ ರಾಮ ರಾಘೋಬ ರಾಣೆ ಜನ್ಮ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಭಾರತೀಯ ಸೈನ್ಯದ ಅತ್ಯುನ್ನತ ಗೌರವ ‘ಪರಮವೀರ ಚಕ್ರ ಪದಕ’ ಪುರಸ್ಕೃತ ಮೇಜರ್ ರಾಮ ರಾಘೋಬ ರಾಣೆ ಅವರ ಜನ್ಮದಿನವನ್ನು ನಗರದಲ್ಲಿ ಭಾನುವಾರ ಆಚರಿಸಲಾಯಿತು. ಯುದ್ಧ ನೌಕೆ ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಅವರ ಪ್ರತಿಮೆಗೆ ಶಾಸಕಿ ರೂಪಾಲಿ ನಾಯ್ಕ ಮಾಲಾರ್ಪಣೆ ಮಾಡಿದರು.

ಬಿ.ಜೆ.ಪಿ ಯುವ ಮೋರ್ಚಾದ ಕಾರವಾರ ನಗರ ಮತ್ತು ಗ್ರಾಮೀಣ ಘಟಕಗಳಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚಲಾಯಿತು. ರಾಮ ರಾಘೋಬಾ ಅವರ ಕುಟುಂಬದವರ ಪರವಾಗಿ ಸ್ಥಳೀಯ ನಿವಾಸಿ ಆನಂದು ಗಾಂವ್ಕರ್ ಅವರನ್ನು ಸನ್ಮಾನಿಸಲಾಯಿತು .

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ ನಾಯಕ ಹಾಗೂ ಗ್ರಾಮೀಣ ಘಟಕದ ಮಾಜಿ ಅಧ್ಯಕ್ಷ ಚಂದನ ಸಾವಂತ್ ಮೇಜರ್ ರಾಮ ರಾಘೋಬ ರಾಣೆ ಅವರ ಹಿನ್ನೆಲೆ, ಶೌರ್ಯವನ್ನು ವಿವರಿಸಿದರು. ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಶುಭಂ ಕಳಸ ಕಾರ್ಯಕ್ರಮ ನಿರೂಪಿಸಿದರು. 

ಪಕ್ಷದ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಚೆಂಡಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಶ್ ಅರ್ಗೇಕರ್, ನಗರಸಭೆ ಸದಸ್ಯೆ ರೋಶನಿ ಮಾಳ್ಸೇಕರ, ಯುವ ಮೋರ್ಚಾ ಗ್ರಾಮೀಣ ಘಟಕದ ಅಧ್ಯಕ್ಷ ಪ್ರಣವ್ ರಾಣೆ ಇದ್ದರು.

ಕೆಚ್ಚೆದೆಯ ವೀರ:

ಭಾರತೀಯ ಸೈನ್ಯದಲ್ಲಿ ಮೇಜರ್ ಆಗಿದ್ದ ರಾಮ ರಾಘೋಬ ರಾಣೆ ಅವರು ಕಾರವಾರ ತಾಲ್ಲೂಕಿನ ಚೆಂಡಿಯಾದವರು. ಜೀವಂತವಾಗಿದ್ದಲೇ ‘ಪರಮ ವೀರ ಚಕ್ರ’ ಪದಕ ಪುರಸ್ಕೃತರಾದ ಮೊದಲಿಗರು ಎಂಬ ಹೆಗ್ಗಳಿಕೆ ಅವರದ್ದಾಗಿದೆ.

1918ರ ಜೂನ್ 26ರಂದು ಜನಿಸಿದ ಅವರು, 1940ರಲ್ಲಿ ಸೈನ್ಯ ಸೇರಿದ್ದರು. ಎರಡನೇ ವಿಶ್ವ ಯುದ್ಧದಲ್ಲಿ ಬ್ರಿಟಿಷ್–ಭಾರತೀಯ ಸೈನ್ಯದಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಸ್ವತಂತ್ರ ಭಾರತದ ಸೈನ್ಯದಲ್ಲಿ ಮುಂದುವರಿದ ಅವರು, 1948ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತ ಜಯಿಸುವಲ್ಲಿ ನಿರ್ಣಾಯಕ ಕೆಲಸ ಮಾಡಿದ್ದರು.

ಜಮ್ಮು ಕಾಶ್ಮೀರದ ರಜೌರಿ ಪ್ರದೇಶವನ್ನು ಭಾರತೀಯ ಸೇನೆ ಸ್ವಾಧೀನ ಪಡಿಸಿಕೊಳ್ಳಲು ನೆರವಾಗಿದ್ದರು. ಭಾರತೀಯ ಟ್ಯಾಂಕ್‌ಗಳು ಮುನ್ನುಗ್ಗಿ ಬಾರದಂತೆ ರಸ್ತೆಗಳಲ್ಲಿ ನಿರ್ಮಿಸಲಾಗಿದ್ದ ಅಡೆತಡೆಗಳು, ನೆಲದಲ್ಲಿ ಹುದುಗಿ ಇಟ್ಟಿದ್ದ ಸ್ಫೋಟಕಗಳ ತೆರವು ಕಾರ್ಯಾಚರಣೆಯಲ್ಲಿ ಪ್ರಮುಖ ‍ಪಾತ್ರ ವಹಿಸಿದ್ದರು.

ಅವರ ಧೈರ್ಯವನ್ನು ಗುರುತಿಸಿದ ಕೇಂದ್ರ ಸರ್ಕಾರವು, 1948ರ ಏ.8ರಂದು ‘ಪರಮವೀರ ಚಕ್ರ’ ಪದಕ ಪ್ರದಾನ ಮಾಡಿತ್ತು. 28 ವರ್ಷ ಕರ್ತವ್ಯ ನಿರ್ವಹಿಸಿ 1968ರಲ್ಲಿ ನಿವೃತ್ತರಾದರು. 1994ರ ಜುಲೈ 11ರಂದು ಪುಣೆಯಲ್ಲಿ ನಿಧನರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು