ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಬಳಿಕ ಸರ್ಕಾರದ ಅಲುಗಾಟ ಆರಂಭವಾದರೆ ಅಚ್ಚರಿಯೇನಿಲ್ಲ: ಅನಂತಕುಮಾರ್ ಹೆಗಡೆ

Last Updated 4 ಮೇ 2019, 14:13 IST
ಅಕ್ಷರ ಗಾತ್ರ

ಶಿರಸಿ: ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಜ್ಯ ಸರ್ಕಾರದ ಅಲುಗಾಟ ಆರಂಭವಾದರೆ ಅದರಲ್ಲಿ ಅಚ್ಚರಿಯೇನಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

ಶನಿವಾರ ಇಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ‘ಮತ್ತೊಮ್ಮೆ ಚುನಾವಣೆ ಎದುರಾಗುವ ಸಾಧ್ಯತೆ ಇರುವುದರಿಂದ ಕಾರ್ಯಕರ್ತರು ವಿಶ್ರಾಂತಿಯನ್ನು ಮರೆತು ಕೆಲಸ ಮಾಡಬೇಕು. ವಿಶ್ರಾಂತಿಯು ರೋಗದ ಸಂಕೇತ ಮತ್ತು ಇದು ಮಾನಸಿಕ ಪ್ರಾಬಲ್ಯವನ್ನು ಕುಗ್ಗಿಸುತ್ತದೆ. ಚುನಾವಣೆ ಫಲಿತಾಂಶ ಹೇಗೆಯೇ ಬರಲಿ ದೇಶ, ಧರ್ಮ ರಕ್ಷಣೆಯ ಕಾರ್ಯ ನಿರಂತರವಾಗಿರುತ್ತದೆ ಎಂದರು.

ಜನರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಮನೆ ಮಗನ ಎಲ್ಲ ಬೇಡಿಕೆಗೆ ಸ್ಪಂದಿಸಿದರೆ ಆತ ತಪ್ಪು ಮಾರ್ಗದಲ್ಲಿ ಸಾಗುತ್ತಾನೆಯೇ ವಿನಾ ಸಮಾಜವಲ್ಲ. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳ ಬದಲಾಗಿ, ಬೌದ್ಧಿಕ ವಿಕಾಸ ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದರು.

ಕಾರ್ಯಕರ್ತರ ಪರಿಶ್ರಮ ಹಾಗೂ ಪ್ರಾಮಾಣಿಕತೆಯೊಂದಿಗೆ ವಿಶೇಷ ಅಪೇಕ್ಷೆಯಿಲ್ಲದೇ ಚುನಾವಣೆ ನಡೆದಿರುವ ಕ್ಷೇತ್ರ ಇದಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲದಿರಬಹುದು ಆದರೆ, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಚಿಹ್ನೆ ಇರುತ್ತದೆ. ಹೀಗಾಗಿ ಜನರು ಭ್ರಮೆಯಲ್ಲಿರಬಾರದು ಎಂದರು.

ಮಾಜಿ ಶಾಸಕ ಸುನಿಲ್ ಹೆಗಡೆ ಮಾತನಾಡಿ, ‘ಸ್ಥಳೀಯ ಚುನಾವಣೆಗಳನ್ನು ಕಡೆಗಣಿಸದೇ, ಪಕ್ಷದ ಗೆಲುವಿಗೆ ಗಂಭೀರವಾಗಿ ಶ್ರಮಿಸಬೇಕು. ಧರ್ಮ, ಸಂಸ್ಕೃತಿಗೆ ರಕ್ಷಣೆ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳದ ಜನಪ್ರತಿನಿಧಿ ಅನಂತಕುಮಾರ್ ಹೆಗಡೆ ಆಗಿದ್ದಾರೆ. ಹಳಿಯಾಳ ಹಾಗೂ ದಾಂಡೇಲಿ ಭಾಗಗಳಲ್ಲಿ ಅವರಿಗೆ 80ಸಾವಿರಕ್ಕೂ ಅಧಿಕ ಮತ ಬಿದ್ದಿರುವ ಸಾಧ್ಯತೆಯಿದೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ಶಾಸಕ ದಿನಕರ ಶೆಟ್ಟಿ, ಪ್ರಮುಖರಾದ ಎಂ.ಜಿ.ನಾಯ್ಕ, ಲಿಂಗರಾಜ ಪಟೇಲ್, ವಿನೋದ ಪ್ರಭು, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಎನ್.ಎಸ್.ಹೆಗಡೆ, ವೆಂಕಟೇಶ ನಾಯಕ, ಆರ್.ಡಿ.ಹೆಗಡೆ, ಕೃಷ್ಣ ಎಸಳೆ, ಪ್ರಮೋದ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT