ಬುಧವಾರ, ಸೆಪ್ಟೆಂಬರ್ 22, 2021
21 °C
ಕಾಳುಮೆಣಸು ಕೃಷಿಯನ್ನೇ ಪ್ರಮುಖ ಆದಾಯ ಮೂಲವಾಗಿಸಿಕೊಂಡ ಹೊನ್ನಾವರದ ಕೃಷಿಕ

ಬಾಳು ಬಂಗಾರವಾಗಿಸಿದ ‘ಕಪ್ಪು ಚಿನ್ನ’

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: 20 ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಬೆವರು ಸುರಿಸಿ ಕೂಲಿ ಕೆಲಸ ಮಾಡುತ್ತಿದ್ದವರು ಇಂದು ಸ್ವಂತ ತೋಟದಲ್ಲಿ ಬೆನ್ನು ಬಾಗಿಸಿ ದುಡಿಯುತ್ತಿದ್ದಾರೆ. ವರ್ಷಕ್ಕೆ ಸರಾಸರಿ 10 ಕ್ವಿಂಟಲ್ ಕಾಳುಮೆಣಸು ಬೆಳೆದು ಸ್ವಾಭಿಮಾನದ ಜೀವನ ಮಾಡುತ್ತಿದ್ದಾರೆ.

ಹೊನ್ನಾವರ ತಾಲ್ಲೂಕಿನ ಕರ್ವ ಗ್ರಾಮದ ಸುಬ್ರಾಯ ಗೌಡ, ಅಡಿಕೆಯನ್ನು ಉಪಬೆಳೆಯಾಗಿ ಮಾಡಿಕೊಂಡರು. ಕಾಳುಮೆಣಸನ್ನೇ ಮುಖ್ಯವಾಗಿ ಬೆಳೆದು ಆದಾಯ ಮೂಲವನ್ನಾಗಿ ಕಂಡುಕೊಂಡರು.

20 ವರ್ಷಗಳ ಹಿಂದೆ ಜಿಲ್ಲೆಯ ಘಟ್ಟದ ಮೇಲಿನ ಭಾಗದ ತೋಟಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕೂಡಿಟ್ಟ ಅಲ್ಪಸ್ವಲ್ಪ ಹಣದಿಂದ ಕರ್ವ ಗ್ರಾಮದಲ್ಲಿ ಎರಡು ಎಕರೆ ಜಾಗ ಖರೀದಿಸಿದರು. ಕೂಲಿಯಲ್ಲಿ ಸಿಕ್ಕಿದ್ದ ದುಡಿಮೆಯ ಅನುಭವವನ್ನು ತಮ್ಮ ಜಮೀನಿನಲ್ಲಿ ಬಳಸಿಕೊಂಡರು. ಕರಾವಳಿ ಭಾಗದ ಕೃಷಿ ಪದ್ಧತಿಗಿಂತ ಭಿನ್ನವಾಗಿರುವ, ಮಲೆನಾಡಿನ ಶೈಲಿಯನ್ನು ಅನುಸರಿಸಿದರು. ಹಾಗಾಗಿ ಇಂದಿಗೂ ಅವರು ಬೇಸಿಗೆಯಲ್ಲಿ ತೋಟಕ್ಕೆ ನೀರೂಡಿಸುವುದಿಲ್ಲ. 

‘ಜಮೀನಿನಲ್ಲಿ ನೀರಿನ ಕೊರತೆಯೂ ಇದಕ್ಕೆ ಕಾರಣ. ನೀರಿಗಾಗಿ ಹೊಂಡ ತೋಡಿದರೆ ಕೇವಲ 10 ಅಡಿ ಕೆಳಗೆ ಬಂಡೆಗಲ್ಲು ಅಡ್ಡವಾಗುತ್ತಿದೆ. ಆದರೂ ತೋಟಕ್ಕೆ ನೀರಿನ ತೀರಾ ಕೊರತೆಯೇನೂ ಕಾಡಿಲ್ಲ. ಕಾಳುಮೆಣಸು ಫಸಲು ಚೆನ್ನಾಗಿ ಬಂದ ಕಾರಣ ಚಿಂತಿಸಲಿಲ್ಲ’ ಎಂದು ತಮ್ಮ ಅನುಭವವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಅಡಿಕೆ ಸಸಿಗಳನ್ನು ನೆಟ್ಟ ಕೂಡಲೇ ನೆರಳಿಗಾಗಿ ಕೆಣಕಲು ಗಿಡಗಳನ್ನು (ಬೇಗ ಬೆಳೆಯುವ, ಮೃದು ಮರ) ನೆಟ್ಟಿದ್ದೆ. ಅವುಗಳಲ್ಲಿ 50 ಗಿಡಗಳಿಗೆ ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದೆ. ಮೊದಲ ಬಾರಿ ಎರಡು ಕ್ವಿಂಟಲ್ ಕಾಳು ಮೆಣಸು ಸಿಕ್ಕಿತ್ತು. ಅಡಿಕೆ ಸಸಿಗಳು ಫಲ ನೀಡುವವರೆಗೂ ಅದೇ ರೀತಿ ಆದಾಯ ಬಂತು. ಅಡಿಕೆ ಮರಗಳಿಗೆ ಐದು ವರ್ಷ ಆದ ಬಳಿಕ ಅವುಗಳಿಗೇ ಮೆಣಸಿನ ಬಳ್ಳಿ ನೆಟ್ಟೆ. ಮರ ಬೆಳೆದಂತೆ ಬಳ್ಳಿಯೂ ಎತ್ತರಕ್ಕೆ ಹೋಗಿ ಕಾಳುಮೆಣಸಿನ ಇಳುವರಿ ಹೆಚ್ಚಾಯ್ತು. ಒಂದು ವರ್ಷ 12 ಕ್ವಿಂಟಲ್‌ವರೆಗೂ ಫಸಲು ಸಿಕ್ಕಿತ್ತು’ ಎಂದು ನೆನಪಿಸಿಕೊಂಡರು.

ರಾಸಾಯನಿಕ ಸಿಂಪಡಣೆಯಿಲ್ಲ

‘ಪ್ರತಿವರ್ಷ ಮಳೆ ಶುರುವಾದ ಕೂಡಲೇ ಕಾಳುಮೆಣಸಿನ ಪ್ರತಿ ಬಳ್ಳಿಗೆ ಒಂದು ಚಮಚದಂತೆ ಟ್ರೈಕೊಡರ್ಮಾ ಕೊಡುತ್ತೇನೆ. ಅದನ್ನು ಹೊರತಾಗಿ ಮತ್ಯಾವುದೇ ರಾಸಾಯನಿಕವನ್ನೂ ಬಳಸುವುದಿಲ್ಲ. ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರದಂತಹ ಸಾವಯವ ಗೊಬ್ಬರನ್ನೇ ಬಳಸುತ್ತೇನೆ’ ಎಂದು ಹೇಳಿದರು. 

‘ಅಡಿಕೆ ಮರಗಳಿಗೂ ಕೊಳೆರೋಗದ ಔಷಧಿ ಸಿಂಪಡಿಸುವುದಿಲ್ಲ. ಜಾಸ್ತಿ ಮಳೆಯಾದಾಗ ರೋಗ ಕಾಣಿಸಿಕೊಂಡರೂ ಬಿಸಿಲು ಬಂದ ಕೂಡಲೇ ನಾನೇ ಮರ ಏರಿ ಕೊಳೆಯನ್ನು ಶುಚಿಗೊಳಿಸುತ್ತೇನೆ’ ಎಂದು ವಿವರಿಸಿದರು.

‘ಊರ ತಳಿಯ ಆರು ಆಕಳು ಇವೆ. ಗೋಬರ್ ಗ್ಯಾಸ್ ಉತ್ಪಾದನೆಯ ಘಟಕವಿದೆ. ಅದಕ್ಕೆ ಬಳಸಿದ ಸೆಗಣಿಯನ್ನು ಗೊಬ್ಬರವಾಗಿ ಬಳಸುತ್ತೇವೆ. ತೋಟದಲ್ಲಿ ಬೆಳೆದ ಕಳೆಯನ್ನು ಕತ್ತರಿಸಿ ಅಲ್ಲೇ ಹಾಕುತ್ತೇನೆ. ಅಡಿಕೆ ಮರಗಳ ಬುಡಕ್ಕೆ ತರಗೆಲೆ, ಅಡಿಕೆ ಸೋಗೆ, ಹಾಳೆಯನ್ನು ಮುಚ್ಚುತ್ತೇನೆ. ಬಿಸಿಲಿಗೆ ತೇವಾಂಶ ಒಣಗದಂತೆ ಅದು ತಡೆಯುತ್ತದೆ’ ಎಂದರು. 

‘10 ಕ್ವಿಂಟಲ್ ಫಸಲು ನಿರೀಕ್ಷೆ’

‘ಈ ಹಿಂದೆ ಪ್ರತಿ ಕ್ವಿಂಟಲ್‌ ಕಾಳುಮೆಣಸನ್ನು ₹ 60 ಸಾವಿರದಿಂದ ₹ 70 ಸಾವಿರದಂತೆ ಮಾರಾಟ ಮಾಡಿದ್ದೆ. ಆದರೆ, ಈ ವರ್ಷ ₹ 30 ಸಾವಿರದ ಆಸುಪಾಸಿನಲ್ಲಿದೆ. ದರ ಏರಿಕೆಯಾಗಬಹುದು ಎಂದುಕೊಂಡಿದ್ದೇನೆ. ಈಗ ಸುಮಾರು 300 ಬಳ್ಳಿಗಳಿದ್ದು, 10 ಕ್ವಿಂಟಲ್ ಫಸಲು ಸಿಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ಸುಬ್ರಾಯ ಗೌಡ.

‘ನಾಲ್ಕೈದು ಎಕರೆ ಅಡಿಕೆ ಬೆಳೆಯ ಆದಾಯ, ನನಗೆ ಮುಕ್ಕಾಲು ಎಕರೆಯ ಕಾಳುಮೆಣಸಿನಿಂದ ಬರುತ್ತಿದೆ. ವರ್ಷಕ್ಕೆ ₹ 3 ಲಕ್ಷ ಹಣ ಸಂಪಾದಿಸಲು ಕನಿಷ್ಠ ಎರಡು ಎಕರೆ ತೋಟ ಬೇಕು. ಕಾಳುಮೆಣಸಿನ ದರ ಇಳಿದಿದ್ದರೂ ಜೀವನಕ್ಕೇನೂ ತೊಂದರೆಯಿಲ್ಲ’ ಎಂಬ ತೃಪ್ತಿ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು