ಮಂಗಳವಾರ, ಜನವರಿ 28, 2020
29 °C
ಗುಪ್ತ ಗಾಮಿನಿಯಾಗಿ ನೆರವು ನೀಡಿದ ಕುಟುಂಬ

‘ಬಪ್ಪನಳ್ಳಿ ಬೆಳಕು’ ಬಿಡುಗಡೆ 29ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಗ್ರಾಮೀಣ ಬದುಕಿನ ಕುಟುಂಬವೊಂದು ಸತತ ಪರಿಶ್ರಮ, ಪ್ರಾಮಾಣಿಕತೆಯಿಂದ ಮೇಲೆದ್ದು, ಗಳಿಸಿದ ಸಂಪತ್ತನ್ನು ಯೋಗ್ಯರಿಗೆ ಹಂಚಿ ಉಳಿದವರ ಬದುಕಿಗೆ ಬೆಳಗಾಗಿರುವ ಬಪ್ಪನಳ್ಳಿ ಕುಟುಂಬದ ಕುರಿತಾದ ಸಂಪಾದಿತ ಕೃತಿ ‘ಬಪ್ಪನಳ್ಳಿ ಬೆಳಕು’ ಬಿಡುಗಡೆ ಕಾರ್ಯಕ್ರಮವು ಡಿ.29ರ ಸಂಜೆ 5.30ಕ್ಕೆ ತಾಲ್ಲೂಕಿನ ಗೋಳಿಯ ಸಿದ್ಧಿವಿನಾಯಕ ಮಂದಿರದಲ್ಲಿ ನಡೆಯಲಿದೆ.

ಶಿವಮೊಗ್ಗದ ‘ಸಮಾನಸ’ ಸಂಸ್ಥೆ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಸಂಸ್ಥೆ ಮುಖ್ಯಸ್ಥ ಡಾ.ವಿಘ್ನೇಶ ಭಟ್ಟ, ಸಾಮಾಜಿಕ ಕಾರ್ಯಕರ್ತ ಎಸ್‌.ಜಿ.ಹೆಗಡೆ ಊರತೋಟ ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಒಂದು ಕುಟುಂಬ ಅನೇಕ ಕುಟುಂಬಗಳಿಗೆ, ಸಮಾಜಕ್ಕೆ ಬೆಳಕಾದ ಕಥೆ ಸಣ್ಣದಲ್ಲ. ಕೃಷಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ವ್ಯಾಪಾರೋದ್ಯಮಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಬಪ್ಪನಳ್ಳಿ ಕುಟುಂಬ, ಅನೇಕ ಕಾರಣಕ್ಕೆ ಮಹತ್ವ ಪಡೆದಿದೆ. ಅನೇಕ ಜನರಿಗೆ ಗುಪ್ತ ಗಾಮಿನಿಯಾಗಿ ನೆರವಿನ ಹಸ್ತವನ್ನು ನೀಡಿದೆ’ ಎಂದರು.

‘ಈ ಕುಟುಂಬ ಶಿರಸಿಯನ್ನು ಕಟ್ಟುವಲ್ಲಿ ನೆನಪಿಡುವ ಕೊಡುಗೆ ನೀಡಿದ್ದು ಶಿರಸಿಯ ಇತಿಹಾಸದಲ್ಲಿ ಬೆರೆತುಹೋಗಿದೆ. ಮಹಿಳೆಯರಿಗೆ ಮಜ್ಜಿಗೆ ಕಡೆಯುವ ಕಷ್ಟದಿಂದ ದೂರ ಮಾಡುವ ನಿಟ್ಟಿನಲ್ಲಿ ಡಿ.ಪಿ.ಹೆಗಡೆ ಅವರ ನೇತೃತ್ವದಲ್ಲಿ ಸಂಶೋಧಿಸಿದ ಮಜ್ಜಿಗೆ ಕಡೆಯುವ ಯಂತ್ರ ಇಂದಿಗೂ ಹತ್ತಾರು ಸಾವಿರ ಕುಟುಂಬಗಳ ಮನೆಗಳಲ್ಲಿ ಕೆಲಸ ಮಾಡುತ್ತಿದೆ. ಇಂಥ ಸಮಾಜಮುಖಿ ಕುಟುಂಬದ ಕುರಿತು ಬೆಳಕು ಚೆಲ್ಲುವ ಕೃತಿ ಬಿಡುಗಡೆಗೆ ಸಿದ್ದವಾಗಿದೆ’ ಎಂದು ತಿಳಿಸಿದರು.

ರಂಗಕರ್ಮಿ ಹಾರೂಗಾರಿನ ಶಂಕರನಾರಾಯಣ ಹೆಗಡೆ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಗಡೀಕೈ ನಾರಾಯಣ ಹೆಗಡೆ ಅವರನ್ನು ಸನ್ಮಾನಿಸಲಾಗುವುದು. ನಂತರ ಬಾಲ ಕಲಾವಿದೆ ತುಳಸಿ ಹೆಗಡೆ ‘ಪಂಚ ಪಾವನ ಕಥಾ’ ಯಕ್ಷನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು. 

ಸುಬ್ರಾಯ ಹೆಗಡೆ ಪ್ರಧಾನ ಸಂಪಾದಕತ್ವದಲ್ಲಿ, ಡಾ. ವಿಘ್ನೇಶ ಎನ್. ಭಟ್ಟ, ಡಾ. ಸುಮಿತ್ರಾ ವಿ.ಭಟ್ಟ ಸಂಪಾದಕತ್ವದಲ್ಲಿ ಸಮಾನಸ ಸಂಸ್ಥೆ ಇದನ್ನು ಪ್ರಕಾಶಿಸಿದೆ. 160 ಪುಟಗಳ ಈ ಕೃತಿಯಲ್ಲಿ ಪ್ರಮುಖರಾದ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ವಿದ್ವಾನ್ ನಾಗೇಂದ್ರ ಭಟ್ಟ ಹಿತ್ಲಳ್ಳಿ, ಪ್ರೊ. ಪಿ.ಎಂ.ಹೆಗಡೆ, ವೈಶಾಲಿ ವಿ.ಪಿ. ಹೆಗಡೆ, ಪ್ರೊ. ರಾಮಚಂದ್ರ ಕನಕ, ಕೆ.ಆರ್.ಹೆಗಡೆ ಕಾನಸೂರು, ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ನೆಬ್ಬೂರು ನಾರಾಯಣ ಭಾಗವತ್, ಆರ್.ಟಿ.ಭಟ್ಟ, ಸತ್ಯನಾರಾಯಣ ಹೆಗಡೆ ಮಂಜುಗುಣಿ, ಶ್ರೀಧರ ಮಂಗಳೂರು, ನಾಗರತ್ನಾ ಲೋಕೇಶ ಹೆಗಡೆ, ಎಸ್.ಜಿ.ಕೃಷ್ಣ ಪುತ್ತೂರು ಸೇರಿ 60ಕ್ಕೂ ಅಧಿಕ ಜನರ ಲೇಖನಗಳಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು