ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಪರೀಕ್ಷೆಗೆ ತಜ್ಞರಿಲ್ಲ!

ಬಿ.ಆರ್.ಸಿ, ಸಿ.ಆರ್.ಸಿ.ಗಳ ಸೇವೆ ಮುಂದುವರಿದಿಲ್ಲ: ಕಿಟ್‌ಗಳ ಅವಧಿಯೂ ಮುಕ್ತಾಯ
Last Updated 7 ಜುಲೈ 2021, 19:30 IST
ಅಕ್ಷರ ಗಾತ್ರ

ಕಾರವಾರ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಬಿ.ಆರ್.ಸಿ ಮತ್ತು ಸಿ.ಆರ್.ಸಿ.ಗಳ ಸೇವೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದ ಪರಿಣಾಮ, ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಲು ಸಿಬ್ಬಂದಿಯೇ ಇಲ್ಲದಂತಾಗಿದೆ. ಅಲ್ಲದೇ ಪರೀಕ್ಷೆಗೆ ತರಲಾಗಿದ್ದ ‘ಫಸ್ಟ್ ಟೆಸ್ಟ್ ಕಿಟ್’ಗಳ (ಎಫ್.ಟಿ.ಕೆ) ಅವಧಿ ಮುಕ್ತಾಯವಾಗಿ, ರಾಜ್ಯದಾದ್ಯಂತ ಲಕ್ಷಾಂತರ ರೂಪಾಯಿ ವ್ಯರ್ಥವಾಗಿದೆ.

ಸರ್ಕಾರದಿಂದ ಪೂರೈಕೆ ಮಾಡುವ ಕುಡಿಯುವ ನೀರಿನಲ್ಲಿರುವ ಅಂಶ ಹಾಗೂ ಗುಣಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ‘ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ’ಯಡಿ (ಎನ್‌.ಆರ್‌.ಡಿ.ಡಬ್ಲ್ಯು.ಪಿ) ಈ ಸಿಬ್ಬಂದಿ ಮಾಡುತ್ತಿದ್ದರು. ಆದರೆ, ಕೇಂದ್ರ ಸರ್ಕಾರವು ‘ಜಲ ಜೀವನ ಮಿಷನ್‌’ ಜಾರಿಗೊಳಿಸಿದ ಬಳಿಕ, ಈ ಯೋಜನೆಯನ್ನು ವಿಲೀನಗೊಳಿಸಲಾಗಿದೆ. ಹಾಗಾಗಿ ಸಿಬ್ಬಂದಿಯನ್ನು ಮುಂದುವರಿಸಲಾಗದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು.

ಇದರ ಪರಿಣಾಮ ರಾಜ್ಯದಾದ್ಯಂತ ಸುಮಾರು 300 ಮಂದಿ ಕೆಲಸ ಕಳೆದುಕೊಂಡರು. ಸರ್ಕಾರದ ಧೋರಣೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದ 115 ಮಂದಿ ಮಾತ್ರ ಸದ್ಯ ಮುಂದುವರಿದಿದ್ದಾರೆ. ಅವರಲ್ಲಿ ಉತ್ತರ ಕನ್ನಡದ ಏಳು ಮಂದಿ (ಮೊದಲು 18 ಮಂದಿ ಇದ್ದರು), ಚಾಮರಾಜನಗರ, ಗದಗ, ಬೆಳಗಾವಿ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೊಡಗು ಜಿಲ್ಲೆಯವರು ಸೇರಿದ್ದಾರೆ. ಅವರಿಗೆ 202ರ ಮಾರ್ಚ್ ನಂತರ ವೇತನವೂ ಪಾವತಿಯಾಗಿಲ್ಲ.

‘10 ವರ್ಷಗಳಿಂದ ಮುಂಗಾರಿಗೆ ಮೊದಲು ಮತ್ತು ನಂತರ, ಕುಡಿಯುವ ನೀರಿನ ಬಗ್ಗೆ ಆರು ರೀತಿಯ ಪರೀಕ್ಷೆಗಳನ್ನು ಮಾಡಿ ವರದಿ ಸಲ್ಲಿಸುತ್ತಿದ್ದೆವು. ಕೇಂದ್ರ ಸರ್ಕಾರದ ‘ನೀರಿನ ಗುಣಮಟ್ಟ ನಿರ್ವಹಣೆ ಪರಿಶೀಲನಾ ಕಾರ್ಯಕ್ರಮ’ ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ಪೂರಕ ಮಾಹಿತಿ ನೀಡುತ್ತಿದ್ದೆವು. ಮಾನವೀಯತೆಯ ನೆಲೆಯಲ್ಲಿ ನಮ್ಮ ಸೇವೆಯನ್ನು ಮುಂದುವರಿಸುವುದಾಗಿ ಸಚಿವ ಈಶ್ವರಪ್ಪ ಕೂಡ ಭರವಸೆ ನೀಡಿದ್ದರು. ಆದರೆ, ಹಾಗಾಗಲಿಲ್ಲ’ ಎಂದು ಜಿಲ್ಲೆಯ ಬಿ.ಆರ್.ಪಿ ಒಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಎನ್‌.ಆರ್‌.ಡಿ.ಡಬ್ಲ್ಯು.ಪಿ ಯೋಜನೆ ಮುಕ್ತಾಯವಾಗಿರುವ ಬಗ್ಗೆ ಸರ್ಕಾರದಿಂದ ಎಲ್ಲೂ ಅಧಿಕೃತವಾದ ಮಾಹಿತಿಯಿಲ್ಲ. ಹಾಗಾಗಿ ಇಲಾಖೆಯ ಹಿರಿಯ ಅಧಿಕಾರಿಗಳ ವಾದವೇ ಸರಿಯಲ್ಲ. ನಮ್ಮನ್ನು ಸೇವೆಯಲ್ಲಿ ಮುಂದುವರಿಸದಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗುವ ಸಾಧ್ಯತೆಯೂ ಇದೆ’ ಎಂದೂ ಹೇಳಿದರು.

ತಾಂತ್ರಿಕ ಜ್ಞಾನವಿಲ್ಲ‌

‘ಬಿ.ಆರ್.ಸಿ.ಗಳು ಮತ್ತು ಸಿ.ಆರ್.ಸಿ.ಗಳು ಮಾಡುತ್ತಿದ್ದ ಕೆಲಸವನ್ನು ಗ್ರಾಮಗಳಲ್ಲಿ ನೀರಗಂಟಿಗಳ ಮೂಲಕ ಮಾಡಿಸುವುದಾಗಿ ಹೇಳಲಾಗುತ್ತಿದೆ. ಅವರಿಗೆ ನಾವೇ ತರಬೇತಿಯನ್ನೂ ನೀಡಿದ್ದೇವೆ. ಆದರೆ, ಅವರಲ್ಲಿ ಬಹುತೇಕರಿಗೆ ತಾಂತ್ರಿಕ ಜ್ಞಾನ, ಸೂಕ್ತ ವಿದ್ಯಾರ್ಹತೆ ಇಲ್ಲ. ಹಾಗಾಗಿ ಕುಡಿಯುವ ನೀರಿನ ಗುಣಮಟ್ಟವನ್ನು ಅವರು ಹೇಗೆ ಖಾತ್ರಿ ಪಡಿಸಲು ಸಾಧ್ಯ’ ಎಂದು ಬಿ.ಆರ್.ಸಿ ಒಬ್ಬರು ಪ್ರಶ್ನಿಸುತ್ತಾರೆ.

‘ಒಂದು ವರ್ಷದ ಹಿಂದೆ ನೀರಿನ ಗುಣಮಟ್ಟ ಪರೀಕ್ಷೆಗೆಂದು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಅಂದಾಜು ತಲಾ ₹4 ಸಾವಿರ ಮೌಲ್ಯದ ಕಿಟ್‌ಗಳನ್ನು ನೀಡಲಾಗಿತ್ತು. ಕೌಶಲವಿರುವ ಸಿಬ್ಬಂದಿ ಇಲ್ಲದ ಕಾರಣ ಕಿಟ್ ಬಳಸಿ ನೀರಿನ ಗುಣಮಟ್ಟ ಪರೀಕ್ಷೆಯನ್ನು ಎಲ್ಲೂ ಮಾಡಿಲ್ಲ. ಆ ಕಿಟ್‌ಗಳಿಗೆ ಒಂದು ವರ್ಷದ ಅವಧಿಯಿದ್ದು, ಜೂನ್ 30ಕ್ಕೆ ಮುಕ್ತಾಯವಾಗಿದೆ’ ಎಂದೂ ಅವರು ಬೇಸರಿಸುತ್ತಾರೆ.

***

* ಬಿ.ಆರ್.ಸಿ, ಸಿ.ಆರ್.ಸಿ.ಗಳ ಸೇವೆ ಮುಂದುವರಿಸಲು ಆದೇಶ ಬಂದಿಲ್ಲ. ನ್ಯಾಯಾಲಯದಿಂದ ತಡೆಯಾಜ್ಞೆ ತಂದವರಿಗೆ ಮಾತ್ರ ವೇತನ ಪಾವತಿಸಲು ಹಣ ಬಿಡುಗಡೆಯಾಗಿದೆ.

- ಎಂ.ಪ್ರಿಯಾಂಗಾ, ಜಿ.ಪಂ.ಸಿ.ಇ.ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT