ಶನಿವಾರ, ಆಗಸ್ಟ್ 13, 2022
26 °C

‘ತೌತೆ’ಯಿಂದ ಹಾನಿ: ಮಾಹಿತಿ ಪಡೆದ ಕೇಂದ್ರದ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮೇ 14ರಿಂದ 17ರವರೆಗೆ ಅಬ್ಬರಿಸಿದ ‘ತೌತೆ’ ಚಂಡಮಾರುತದಿಂದ ಆದ ಹಾನಿಯ ಪರಿಶೀಲನೆಗೆ ಕೇಂದ್ರ ತಂಡದ ಅಧಿಕಾರಿಗಳು ಬಂದಿದ್ದಾರೆ. ಅವರು ನಗರದಲ್ಲಿ ಬುಧವಾರ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಾಹಿತಿ ಮಾಹಿತಿ ಪಡೆದರು.

ರಾಜ್ಯ ಕಂದಾಯ ಇಲಾಖೆ ಆಯುಕ್ತ ಡಾ.ಮನೋಜ್ ರಾಜನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಹಮ್ಮಿಕೊಳ್ಳಲಾಯಿತು. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ತಮ್ಮ ಜಿಲ್ಲೆಗಳಲ್ಲಿ ಉಂಟಾದ ಹಾನಿಯ ಮಾಹಿತಿ ನೀಡಿದರು.

ಉತ್ತರ ಕನ್ನಡದಲ್ಲಿ ₹ 27.71 ಕೋಟಿ ಮತ್ತು ಸಮುದ್ರ ಕೊರೆತದಿಂದ ₹ 77.40 ಕೋಟಿಯಂತೆ ಒಟ್ಟು ಅಂದಾಜು ₹ 105.11 ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. 164.58 ಹೆಕ್ಟೇರ್ ಕೃಷಿಭೂಮಿ, 164 ಮನೆಗಳು, 33 ಸೇತುವೆಗಳು, 230 ದೋಣಿಗಳಿಗೆ ಭಾಗಶಃ, ಶಾಲೆಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ 22 ಕಟ್ಟಡಗಳಿಗೆ ಹಾನಿಯಾಗಿದೆ. ಭಟ್ಟಳ ಹಾಗೂ ಕುಮಟಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಮುಲ್ಲೈ ಮುಗಿಲನ್ ವಿವರಿಸಿದರು.

ಉಡುಪಿ ಜಿಲ್ಲೆಯಲ್ಲಿ ಎಂಟು ಮನೆಗಳು ಸಂಪೂರ್ಣವಾಗಿ, 158 ಮನೆಗಳಿಗೆ ಭಾಗಶಃ, ಐದು ಜಾನುವಾರು ಹಾಗೂ ಒಬ್ಬರ ಜೀವ ಹಾನಿಯಾಗಿದೆ. ಮೀನುಗಾರರ 33 ದೋಣಿಗಳು, 14 ದೊಡ್ಡ ಬಲೆಗಳು, 32 ಹೆಕ್ಟೇರ್ ಕೃಷಿ ಭೂಮಿ, ಸಮುದ್ರ ಕೊರೆತದಿಂದ 5.271 ಕಿ.ಮೀ ಕಡಲದಂಡೆ, ಶಾಲೆಗಳು ಹಾಗೂ ಸರ್ಕಾರದ ವಿವಿಧ 18 ಕಟ್ಟಡಗಳು, 39 ಸೇತುವೆಗಳು ಸೇರಿದಂತೆ ಒಟ್ಟು ₹ 70.17 ಕೋಟಿ ನಷ್ಟವಾಗಿದೆ ಎಂದು ಜಿ.ಜಗದೀಶ್ ತಿಳಿಸಿದರು.

 ಕೇಂದ್ರ ತಂಡದ ಅಧಿಕಾರಿಗಳಾದ ಸುಶೀಲ್ ಪಾಲ್, ಸದಾನಂದ ಬಾಬು, ಓಂ ಕಿಶೋರ್, ಡಾ.ಪುನ್ನು ಸ್ವಾಮಿ, ಡಾ.ಶ್ರೀನಿವಾಸ ರೆಡ್ಡಿ, ಮಹೇಶ ಕುಮಾರ, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ನವೀನ್ ಭಟ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು