ಬುಧವಾರ, ಜುಲೈ 6, 2022
22 °C
ಮಾರಿಕಾಂಬಾ ಜಾತ್ರೆ: ನಗರಸಭೆಯಿಂದ ಮುನ್ನೆಚ್ಚರಿಕೆ ಕ್ರಮ

ರೋಗ ತಡೆಗೆ ರಾಸಾಯನಿಕ ಸಿಂಪಡಣೆ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಮಾರಿಕಾಂಬಾ ಜಾತ್ರೆಗೆ ಕ್ಷಣಗಣನೆ ಆರಂಭಗೊಂಡಿದ್ದು ಲಕ್ಷಾಂತರ ಭಕ್ತರು ನಗರಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿ ಜಾತ್ರೆ ವೇಳೆ ಆರೋಗ್ಯ ಸುರಕ್ಷತೆಗೆ ಒತ್ತು ನೀಡಿರುವ ನಗರಸಭೆ ಸ್ವಚ್ಛತೆ ಕ್ರಮಗಳಿಗೆ ವೇಗ ನೀಡಿದೆ.

ಬೇಸಿಗೆಯೂ ಆರಂಭಗೊಂಡಿದ್ದರಿಂದ ವಾತಾವರಣದ ಏರುಪೇರಿನಿಂದ ಸಂಭವಿಸಬಹುದಾದ ಕಾಲರಾ, ವಿಷಮಶೀತ ಜ್ವರ ಮುಂತಾದ ಆರೋಗ್ಯ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಇದಕ್ಕಾಗಿ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆ ಕೆಲಸ ಕೈಗೊಂಡು ಬ್ಲೀಚಿಂಗ್, ಸುಣ್ಣದ ಪುಡಿ ಸಿಂಪಡಿಸಲಾಗುತ್ತಿದೆ. ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ಹೂಳೆತ್ತಿಸಲಾಗುತ್ತಿದೆ. ಸಾರ್ವಜನಿಕ ಶೌಚಾಲಯಗಳನ್ನು ಶುಚಿಗೊಳಿಸಲಾಗಿದೆ.

ಕೋವಿಡ್ ಭೀತಿಯಿಂದ ಜನರು ಹೊರಬರುತ್ತಿದ್ದರೂ ಜಾತ್ರೆ ವೇಳೆ ಸಾವಿರಾರು ಜನರು ಒಂದೆಡೆ ಸೇರುವ ಪೇಟೆ ಪ್ರದೇಶದಲ್ಲಿ ನಿರಂತರವಾಗಿ ಸೋಡಿಯಂ ಹೈಪೊಕ್ಲೋರೈಡ್ ಸಿಂಪಡಿಸಲಾಗುತ್ತಿದೆ. ಈಗಾಗಲೇ ಮಾರಿಕಾಂಬಾ ದೇವಸ್ಥಾನ ಸುತ್ತಮುತ್ತ, ಬಿಡ್ಕಿಬೈಲ್ ಪ್ರದೇಶದಲ್ಲಿ ಈ ಕಾರ್ಯ ನಡೆಯುತ್ತಿದೆ.

‘ಸಾಂಕ್ರಾಮಿಕ ಕಾಯಿಲೆ ಹರಡದಂತೆ ಎಚ್ಚರಿಕೆ ವಹಿಸಲು ನಗರದ ಎಲ್ಲ ಚರಂಡಿಗಳನ್ನು ಹೂಳೆತ್ತಿಸಲಾಗುತ್ತಿದೆ. ಸುಣ್ಣ ಮತ್ತು ಬ್ಲೀಚಿಂಗ್ ಪುಡಿ ಮಿಶ್ರಣ ಮಾಡಿ ಹಾಕುತ್ತಿದ್ದೇವೆ’ ಎನ್ನುತ್ತಾರೆ ನಗರಸಭೆಯ ಪರಿಸರ ಎಂಜಿನಿಯರ್ ನಾರಾಯಣ ನಾಯಕ.

‘ಜಾತ್ರೆ ಸಮಯದಲ್ಲಿ ಮುನ್ನೆಚ್ಚರಿಕೆ ಸಲುವಾಗಿ 2 ಟನ್ ಬ್ಲೀಚಿಂಗ್ ಪುಡಿ ಖರೀದಿಸಿಟ್ಟುಕೊಂಡಿದ್ದೇವೆ. ಸುಮಾರು 500 ಲೀ. ಹೈಪೊಕ್ಲೋರೈಡ್ ಮೊದಲ ಹಂತದಲ್ಲಿ ಖರೀದಿ ಮಾಡಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ದಾಸ್ತಾನು ಮಾಡಿಕೊಳ್ಳುತ್ತೇವೆ’ ಎಂದರು.

‘ಕೋವಿಡ್ ಆತಂಕ ದೂರವಾಗದ ಕಾರಣ ಜಾತ್ರೆ ಪೇಟೆ ಮತ್ತು ನಗರದಲ್ಲಿ ಜನ ಹೆಚ್ಚು ಸೇರುವ ಪ್ರದೇಶಕ್ಕೆ ಪ್ರತಿದಿನ ರಾತ್ರಿ ಸ್ವಚ್ಛತೆ ಕಾರ್ಯಗಳು ಮುಗಿದ ಬಳಿಕ ಹೈಪೊಕ್ಲೋರೈಡ್ ಸಿಂಪಡಣೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಸ್ವಚ್ಛತೆ ಕಾರ್ಯಕ್ಕಾಗಿ ನಗರಸಭೆಯ ಕಾಯಂ ಸಿಬ್ಬಂದಿ ಹೊರತಾಗಿ ಹೆಚ್ಚುವರಿ 30 ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಹಾನಗಲ್ ಭಾಗದಿಂದ ಬರುವ ಸಿಬ್ಬಂದಿ ಈಗಾಗಲೆ ಜಾತ್ರೆಪೇಟೆ ಸ್ವಚ್ಛತೆ ಕೆಲಸಗಳನ್ನು ಆರಂಭಿಸಿದ್ದಾರೆ. ಕಾಯಂ ಸಿಬ್ಬಂದಿ ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತೆ ಕೆಲಸ ಕೈಗೊಳ್ಳುತ್ತಿದ್ದಾರೆ’ ಎಂದು ವಿವರಿಸಿದರು.

‘ಜಾತ್ರೆ ವೇಳೆ ರೋಗರುಜಿನ ಹರಡದಂತೆ ಎಚ್ಚರವಹಿಸಲು ಅಗತ್ಯ ಸ್ಥಳಗಳಲ್ಲಿ ಸ್ವಚ್ಛತೆಗೆ ನಿರಂತರ ಕ್ರಮವಹಿಸಲಾಗುವುದು. ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗಿದ್ದು ಅಲ್ಲಿ ಹೆಚ್ಚು ನಿಗಾ ಇಡುತ್ತೇವೆ’ ಎಂದು ಜಾತ್ರಾ ಕರ್ತವ್ಯಕ್ಕೆ ನಿಯೋಜಿತರಾದ ವಿಶೇಷ ಅಧಿಕಾರಿ ಆರ್.ಎಂ.ವೆರ್ಣೇಕರ ತಿಳಿಸಿದರು.

9 ವೈದ್ಯರ ನೇಮಕ:

ಮಾ.15 ರಿಂದ 23ರ ವರೆಗೆ ನಡೆಯುವ ಮಾರಿಕಾಂಬಾ ಜಾತ್ರೆಗೆ ತಾತ್ಕಾಲಿಕ ಪ್ರಾಥಮಿಕ ಚಿಕಿತ್ಸಾಲಯ ತೆರೆಯಲಾಗುತ್ತಿದ್ದು 9 ವೈದ್ಯರನ್ನು ಈ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ ಹೇಳಿದರು.

‘ಜಾತ್ರಾ ಗದ್ದುಗೆ, ಐದು ರಸ್ತೆ ವೃತ್ತ, ಹೊಸ ಬಸ್ ನಿಲ್ದಾಣ ಸೇರಿದಂತೆ ಜನ ದಟ್ಟಣೆ ಹೆಚ್ಚಿರುವ ಭಾಗದಲ್ಲಿ ವೈದ್ಯರು ಇರಲಿದ್ದಾರೆ. 18 ಸಮುದಾಯ ಆರೋಗ್ಯಾಧಿಕಾರಿಗಳು, 12 ಶುಶ್ರೂಷಕರನ್ನೂ ನಿಯೋಜಿಸಲಾಗುವುದು. ಅಗತ್ಯ ಔಷಧಗಳನ್ನೂ ಪೂರೈಕೆ ಮಾಡಲಾಗುವುದು. ಈ ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಿದ್ದಾರೆ’ ಎಂದು ತಿಳಿಸಿದರು.

----------

ಜಾತ್ರೆ ಸಮಯದಲ್ಲಿ ಸಾಂಕ್ರಾಮಿಕ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು ಎಂಬ ಆರೋಗ್ಯ ಇಲಾಖೆ ಸೂಚನೆ ಆಧರಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ನಾರಾಯಣ ನಾಯಕ

ನಗರಸಭೆ ಪರಿಸರ ಎಂಜಿನಿಯರ್

---------------

ಸಾಂಕ್ರಾಮಿಕ ಕಾಯಿಲೆ ತಡೆಗಟ್ಟಲು ಸ್ವಚ್ಛತೆ ಕಾಯ್ದುಕೊಳ್ಳುವುದು ಅಗತ್ಯ. ಈ ಬಗ್ಗೆ ನಿಗಾ ಇಡುವಂತೆ ನಗರಸಭೆಗೆ ನಿರ್ದೇಶನ ನೀಡಲಾಗಿದೆ.

ಡಾ.ವಿನಾಯಕ ಭಟ್

ತಾಲ್ಲೂಕು ಆರೋಗ್ಯಾಧಿಕಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು