ಸೋಮವಾರ, ಆಗಸ್ಟ್ 2, 2021
25 °C
ಗ್ರಾಮ ಅರಣ್ಯ ಸಮಿತಿಗಳಿಗೆ ಲಾಭಾಂಶ ವಿತರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅಭಿಮತ

ಉತ್ತರ ಕನ್ನಡ | ಗ್ರಾ.ಪಂ.ಗಳು ಅಭಿವೃದ್ಧಿಯ ಕೇಂದ್ರಗಳಾಗಬೇಕು: ಸ್ಪೀಕರ್ ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಸಂವಿಧಾನಬದ್ಧ ಸ್ಥಾನ ಪಡೆದಿರುವ ಗ್ರಾಮ ಪಂಚಾಯ್ತಿಗಳು ಅಭಿವೃದ್ಧಿಯ ಕೇಂದ್ರಗಳಾಗಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲ್ಲೂಕಿನ ಮಂಜುಗುಣಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಪಾಲಿಸಿದರೆ ಪಾಲು ಯೋಜನೆಯಡಿ ಶಿರಸಿ ವಿಭಾಗದ 14 ಗ್ರಾಮ ಅರಣ್ಯ ಸಮಿತಿಗಳಿಗೆ ಒಟ್ಟು ₹ 46.81 ಲಕ್ಷ ಲಾಭಾಂಶ ವಿತರಿಸಿ, ಅವರು ಮಾತನಾಡಿದರು. ಗ್ರಾಮೀಣಾಭಿವೃದ್ಧಿಯಲ್ಲಿ ಜನರ ಪಾತ್ರ ಮುಖ್ಯವಾಗಿದೆ. ಊರಿನ ಅಭಿವೃದ್ಧಿಯಲ್ಲಿ ಜನರು ಹೆಚ್ಚು ತೊಡಗಿಕೊಳ್ಳಬೇಕು ಎಂದರು.

ಧಾರ್ಮಿಕ ಕ್ಷೇತ್ರವಿದ್ದಲ್ಲಿ ದೇವರು ಕಾಡು ನಿರ್ಮಾಣವಾಗಬೇಕು. ಇದರಿಂದ ಮಾನಸಿಕ ನೆಮ್ಮದಿಯ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಬಹುದು ಎಂದರು.

ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ‘ಜೀವ ವೈವಿಧ್ಯ ರಕ್ಷಣೆ ಹೆಚ್ಚಬೇಕು. ಏಕರೀತಿ ನೆಡುತೋಪು ಕಡಿಮೆಯಾಗಿ, ಬಹುವಿಧದ ಗಿಡಗಳನ್ನು ಬೆಳೆಸಬೇಕು. ಅಕೇಶಿಯಾಕ್ಕೆ ಬದಲಾಗಿ ನೈಸರ್ಗಿಕ ಗಿಡಗಳಿಗೆ ಆದ್ಯತೆ ನೀಡಬೇಕು. ಪ್ರತಿ ಗ್ರಾಮ ಅರಣ್ಯ ಸಮಿತಿ ವ್ಯಾಪ್ತಿಯಲ್ಲಿ ಕಣಿವೆ ಅರಣ್ಯಗಳ ರಚನೆ ಆಗಬೇಕು’ ಎಂದರು.

ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ್ ಮಾತನಾಡಿ, ‘ಕೆನರಾ ವೃತ್ತದ ಆರು ಅರಣ್ಯ ವಿಭಾಗಗಳಿಂದ ಒಟ್ಟು 636 ಗ್ರಾಮ ಅರಣ್ಯ ಸಮಿತಿಗಳಿವೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿಯೂ ಸಮಿತಿ ರಚನೆಯಾಗಿದೆ. ಅನೇಕ ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಈವರೆಗೆ ಗ್ರಾಮ ಅರಣ್ಯ ಸಮಿತಿಗಳಿಗೆ ₹ 31.14 ಕೋಟಿ ಲಾಭಾಂಶವನ್ನು ಅರಣ್ಯ ಇಲಾಖೆಯಿಂದ ವಿತರಿಸಲಾಗಿದೆ. ಲಾಭಾಂಶ ವಿತರಣೆಯು ಕೆಲವು ಜಾತಿಯ ಮರಗಳಿಗೆ ಸೀಮಿತವಾಗಿದೆ. ಆಯ್ದ ಮರಗಳ ಲಾಭಾಂಶ ವಿತರಣೆಗೆ ಅವಕಾಶ ನೀಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸದಸ್ಯೆ ಸರೋಜಾ ಭಟ್ಟ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ, ಮಂಜುಗುಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಾವೇರಿ ಗೌಡ, ಮಂಜುಗುಣಿ ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ, ಪ್ರಮುಖರಾದ ಪ್ರವೀಣ ಗೌಡ, ದೇವರಾಜ ಮರಾಠಿ, ಹಳಿಯಾಳ ವಿಭಾಗದ ಡಿಸಿಎಫ್ ಅಜ್ಜಯ್ಯ, ಮಂಜುಗುಣಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಣಪತಿ ನಾಯ್ಕ ಇದ್ದರು.

ಶಿರಸಿ ಡಿಸಿಎಫ್ ಎಸ್.ಜಿ.ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಜಾನ್ಮನೆ ಆರ್‌ಎಫ್‌ಒ ಪವಿತ್ರಾ ಯು.ಜೆ. ಸ್ವಾಗತಿಸಿದರು. ಎಸಿಎಫ್ ಡಿ.ರಘು ನಿರೂಪಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು