ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ‘ಬಾಲ ಆಧಾರ್’ಗೆ ಟ್ಯಾಬ್ ಬೆಂಬಲ

ತರಬೇತಿ ‍ಪೂರ್ಣಗೊಳಿಸಿ ಕಾರ್ಯಾರಂಭಿಸಿದ 22 ಗ್ರಾಮ ಪಂಚಾಯಿತಿಗಳ ಸಿಬ್ಬಂದಿ
Last Updated 15 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕಾರವಾರ:‌ ಆಧಾರ್ ಕಾರ್ಡ್‌ನ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಗ್ರಾಮೀಣ ಭಾಗದಲ್ಲಿ ನಾನಾ ಕಾರಣಗಳಿಂದ ಬಹಳ ಸಮಸ್ಯೆಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ನಾಗರಿಕರ ಮಾಡಿದ ಒತ್ತಾಯಕ್ಕೆ ಸರ್ಕಾರ ಕೊನೆಗೂ ಸ್ಪಂದಿಸಿದೆ. ಜಿಲ್ಲೆಗೆ 22 ವಿಶೇಷ ‘ಟ್ಯಾಬ್’ಗಳು ಹಂಚಿಕೆಯಾಗಿದ್ದು, ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ತರಬೇತಿ ಪಡೆದು ಬಳಕೆ ಆರಂಭಿಸಿದ್ದಾರೆ.

ಇದರಿಂದ ಐದು ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್‌ ನೋಂದಣಿಗೆ ಅನುಕೂಲವಾಗಲಿದೆ. ಹೆಚ್ಚು ಮಕ್ಕಳು ಇರುವ ಪ್ರದೇಶಗಳಿಗೆ, ಮನೆಗಳಿಗೆ ತೆರಳಿಯೂ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಲಿದೆ.

ರಾಜ್ಯದಾದ್ಯಂತ ಮೊದಲ ಹಂತದಲ್ಲಿ 28 ಜಿಲ್ಲೆಗಳಿಗೆ ‘ಚೈಲ್ಡ್ ಎನ್‌ರೋಲ್‌ಮೆಂಟ್ ಲೈಫ್ ಕ್ಲಯಂಟ್’ (ಸಿ.ಇ.ಎಲ್.ಸಿ) ತಂತ್ರಾಂಶವಿರುವ 630 ‘ಟ್ಯಾಬ್‌’ಗಳನ್ನು ನೀಡಲಾಗಿದೆ. ಅದರಲ್ಲಿ ಆರು ತಿಂಗಳ ಅವಧಿಗೆ ರಿಚಾರ್ಜ್ ಮಾಡಿದ, ಬಿ.ಎಸ್.ಎನ್.ಎಲ್ ಸಿಮ್‌ಗಳನ್ನು ಅಳವಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು 28 ಜಿಲ್ಲೆಗಳಿಗೆ ವಿತರಿಸಿದೆ.

ಕೋವಿಡ್ 19 ಲಸಿಕೆ ನೀಡುವುದು ಆರಂಭವಾದ ಬಳಿಕ ಬಹಳ ಮಂದಿ ಆಧಾರ್ ಕಾರ್ಡ್ ಮಾಹಿತಿ ತಿದ್ದುಪಡಿಗೆ ಮುಂದಾಗಿದ್ದರು. ಲಸಿಕೆ ಪಡೆಯಲು ಆಧಾರ್ ಕಾರ್ಡ್ ಸಂಖ್ಯೆಯ ದೃಢೀಕರಣದ ಅಗತ್ಯವಿದೆ. ಮೊಬೈಲ್ ಫೋನ್‌ಗೆ ಬರುವ ‘ಒ.ಟಿ.ಪಿ’ಯನ್ನು ಆಧರಿಸಿ ಲಸಿಕೆ ಪಡೆಯುವವರ ಹೆಸರು ನೋಂದಣಿ ಆಗುತ್ತದೆ. ಹಾಗಾಗಿ, ಬಹುತೇಕರು ಮೊಬೈಲ್ ಫೋನ್ ಸಂಖ್ಯೆ ಬದಲಾವಣೆಗೆ ಹೆಚ್ಚಿನ ತರಾತುರಿ ತೋರಿದ್ದರು. ಆದರೆ, ಆಧಾರ್ ತಿದ್ದುಪಡಿ ಕೇಂದ್ರಗಳಲ್ಲಿ ಉಪಕರಣಗಳು ಬೇಡಿಕೆಗೆ ಅನುಗುಣವಾಗಿ ಇರಲಿಲ್ಲ. ಇವುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ನಾಗರಿಕರು ಸರ್ಕಾರವನ್ನು ಮೇಲೆ ಒತ್ತಾಯಿಸುತ್ತಲೇ ಬಂದಿದ್ದರು.

ಈ ಟ್ಯಾಬ್‌ಗಳನ್ನು ಬಳಸಿಕೊಂಡು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಮಾಡುವ ಪ್ರಕ್ರಿಯೆಗಳ ಬಗ್ಗೆ ಆಯಾ ಗ್ರಾಮ
ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ತರಬೇತಿ ನೀಡಬೇಕು. ಇದನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಆಧಾರ್ ಸಮಾಲೋಚಕರು ನಿರ್ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚನೆ ನೀಡಿದ್ದರು.

ಕುಗ್ರಾಮಗಳಿಗೆ ಅನುಕೂಲ:‘22 ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆಯಾಗಿರುವ ಟ್ಯಾಬ್‌ಗಳಲ್ಲಿ ಐದು ವರ್ಷದ ಒಳಗಿನ ಮಕ್ಕಳಬಾಲ ಆಧಾರ್ ನೋಂದಣಿಯನ್ನೂ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಸಣ್ಣ ಮಕ್ಕಳನ್ನು ಕರೆದುಕೊಂಡು ಪಾಲಕರು ಆಧಾರ್ ನೋಂದಣಿ ಕೇಂದ್ರದ ಮುಂದೆ ಗಂಟೆಗಟ್ಟಲೆ ನಿಲ್ಲುವ ಪ್ರಮೇಯ ಬರುವುದಿಲ್ಲ. ಕುಗ್ರಾಮಗಳಿಗೂ ಅನುಕೂಲವಾಗಲಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಕಚೇರಿಯ ಆಧಾರ್ ಸಮನ್ವಯಾಧಿಕಾರಿ ಮಹಾಬಲೇಶ್ವರ ದೇಸಾಯಿ.

‘ಸುಧಾರಿತ ತಂತ್ರಾಂಶವಿರುವ ಈ ಟ್ಯಾಬ್‌ಗಳಲ್ಲಿ, ಮೊಬೈಲ್ ದೂರವಾಣಿ ಸಂಖ್ಯೆಗಳ ಬದಲಾವಣೆಗೂ ಸಾಧ್ಯವಾಗಲಿದೆ. ಹಾಗಾಗಿ ಆಧಾರ್ ತಿದ್ದುಪಡಿಗೆ ವೇಗ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಐದು ವರ್ಷದ ಒಳಗಿನ ಮಕ್ಕಳ ನೋಂದಣಿಯು ಉಚಿತವಾಗಿದೆ. ಮೊಬೈಲ್ ಫೋನ್ ನಂಬರ್ ಬದಲಾವಣೆಗೆ ₹ 50 ಶುಲ್ಕ ವಿಧಿಸಲಾಗುತ್ತದೆ. ಒಂದುವೇಳೆ ಈ ನಿಯಮವನ್ನು ಪಿ.ಡಿ.ಒ ಅಥವಾ ಡಾಟಾ ಎಂಟ್ರಿ ಆಪರೇಟರ್‌ಗಳು ಉಲ್ಲಂಘಿಸಿದರೆ ಅವರಿಗೆ ದಂಡ ವಿಧಿಸಿ ಶಿಸ್ತು ಕ್ರಮ ಜರುಗಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

***

* ನೂತನ ‘ಟ್ಯಾಬ್‌’ಗಳನ್ನು ಹೆಚ್ಚು ಅಗತ್ಯವಿರುವ 22 ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ತರಬೇತಿ ಪಡೆದ ಸಿಬ್ಬಂದಿ ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ.

- ಎಂ.ಪ್ರಿಯಾಂಗಾ, ಜಿ.ಪಂ ಸಿ.ಇ.ಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT