ಬುಧವಾರ, ಮಾರ್ಚ್ 22, 2023
32 °C
ಚಾತಕಪಕ್ಷಿಯಂತೆ ಕಾಯುತ್ತಿರುವ ಗಾಂಧಿನಗರ ನಿವಾಸಿಗಳು

ಮುಂಡಗೋಡ: ಕೆ.ಜೆ.ಪಿ.ಗಾಗಿ ನಾಲ್ಕು ದಶಕದ ಹೋರಾಟ

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ನಾಲ್ಕೂವರೆ ದಶಕಗಳ ಹಿಂದೆ, ವಸತಿ ರಹಿತರಿಗೆ ಭೂಮಿ ಮಂಜೂರು ಮಾಡಿ, ಮನೆ ಕಟ್ಟಿಕೊಳ್ಳಲು ಆರ್ಥಿಕ ಸಹಾಯ ಮಾಡಿದ ದಾಖಲೆಗಳಿವೆ. ಆದರೆ, ಇನ್ನೂ ಫಲಾನುಭವಿಗಳ ಹೆಸರಿನಲ್ಲಿ ಪ್ರತ್ಯೇಕ ಉತಾರ ಬರುತ್ತಿಲ್ಲ.

ಅರಣ್ಯ ಇಲಾಖೆಯಿಂದ ಹಲವು ವರ್ಷಗಳ ಹಿಂದೆಯೇ ಸ್ಥಳೀಯ ಸಂಸ್ಥೆಗೆ ಹಸ್ತಾಂತರವಾಗಿದ್ದರೂ ಮುಂದೆ ಉತಾರದಲ್ಲಿ ಬದಲಾವಣೆ ಆಗಿಲ್ಲ. ಇದರಿಂದ ಮನೆ ಕಟ್ಟಿಕೊಳ್ಳಲು ಬ್ಯಾಂಕ್‌ ಸಾಲ ಪಡೆಯಲು ಆಗದೇ ಜಾಗವನ್ನು ಖರೀದಿಸಲು ಅಥವಾ ಮಾರಲು ಆಗದೇ ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್‌ ನಂಬರ್ 12ರಲ್ಲಿ ಬರುವ, ಗಾಂಧಿನಗರ ನಿವಾಸಿಗಳ ಗೋಳಿಗೆ ದಶಕಗಳ ನೋವಿದೆ. ಇನ್ನೈದು ವರ್ಷ ಗತಿಸಿದರೆ ಬರೋಬ್ಬರಿ ಅರ್ಧ ಶತಕವಾಗುತ್ತದೆ. ಅಲ್ಲಿನ ನಿವಾಸಿಗಳ ಕಣ್ಣೀರ ಕಥೆಗೆ ಸಾಕ್ಷಿಯಾಗುತ್ತದೆ. ಹೆಚ್ಚು ಕಡಿಮೆ ಒಂದು ತಲೆಮಾರು ಸಮಸ್ಯೆಗಳನ್ನು ಅನುಭವಿಸಿಯೇ ಜೀವನ ಕಳೆದಿದೆ. ಮುಂದಿನ ತಲೆಮಾರು ಆದರೂ ನೆಮ್ಮದಿಯ ಜೀವನ ಕಳೆಯಲು ಹಾಗೂ ಸಮಸ್ಯೆಗೆ ಮುಕ್ತಿ ಸಿಗಲಿ ಎಂದು, ಗಾಂಧಿನಗರ ಅಭಿವೃದ್ಧಿ ಹೋರಾಟ ಸಮಿತಿಯನ್ನು ಕಟ್ಟಿಕೊಂಡು, ನಿವಾಸಿಗಳು ಹೋರಾಟ ಮುಂದುವರಿಸಿದ್ದಾರೆ.

‘ನಿವೇಶನದ ಹಕ್ಕು ಪತ್ರ ನೀಡಿದ, ಕೆಲವು ವರ್ಷಗಳ ನಂತರದಿಂದಲೇ ಪ್ರತ್ಯೇಕ ಉತಾರಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಹೋರಾಟ ಸಮಿತಿಯಲ್ಲಿದ್ದ ಕೆಲವರು ಈಗಾಗಲೇ ಮೃತಪಟ್ಟಿದ್ದಾರೆ. ಆದರೂ ಗಾಂಧಿನಗರ ನಿವಾಸಿಗಳ ಸಮಸ್ಯೆ ಬಗೆಹರಿದಿಲ್ಲ. ಕೆಲವು ವರ್ಷಗಳ ಹಿಂದೆಯೇ ವಸತಿಪ್ರದೇಶ ಎಂದು ಬದಲಾವಣೆ ಮಾಡಿ, ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇಲ್ಲಿನ ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯವರು ಜಂಟಿಯಾಗಿ ಸಮೀಕ್ಷೆ ಮಾಡಬೇಕಾಗಿದೆ’ ಎನ್ನುತ್ತಾರೆ ಗಾಂಧಿನಗರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಎನ್‌.ಡಿ.ಕಿತ್ತೂರ.

‘ಫಲಾನುಭವಿಗಳ ಜಾಗದ ಗುರುತು ಮಾಡಿ, ಪ್ರತ್ಯೇಕ ಉತಾರ ಸಿಗುವಂತೆ ಮಾಡಬೇಕಾಗಿದೆ. ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳಿಗೂ ಸಮಸ್ಯೆಯನ್ನು ಹೇಳಿಕೊಳ್ಳಲಾಗಿದೆ. ಯಾವಾಗ ಬಗೆಹರಿಯುತ್ತದೆ ಎಂಬುದನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ’ ಎಂದು ಅವರ ಹೇಳುತ್ತಾರೆ.

‘ಗಾಂಧಿನಗರ ಪ್ರದೇಶವನ್ನು ಕೆ.ಜೆ.ಪಿ ಮಾಡಿಕೊಡಲು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಮುಖ್ಯಾಧಿಕಾರಿಗಳು ಪ್ರಯತ್ನಿಸಿ, ಅಲ್ಲಿನ ನಿವಾಸಿಗಳಿಗೆ ನ್ಯಾಯ ಕೊಡಿಸಬೇಕು. ಗಾಂಧಿನಗರದಲ್ಲಿ ಬಹುತೇಕ ಬಡಜನರೇ ವಾಸಿಸುತ್ತಿದ್ದಾರೆ. ಹಲವು ವರ್ಷಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಬಸವರಾಜ ಹಳ್ಳಮ್ಮನವರ್‌ ಒತ್ತಾಯಿಸಿದ್ದಾರೆ.

‘ಸರ್ವೆ ಮಾಡಿ ಗುರುತಿಸಿ’:

‘1976ರಲ್ಲಿ ವಸತಿ ರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಗಾಂಧಿನಗರದ ಸರ್ವೆ ನಂ.‘186/ಅ’ರಲ್ಲಿ ಒಟ್ಟು 25 ಎಕರೆ ಭೂಮಿ ಮಂಜೂರು ಮಾಡಿದ್ದರು. ಆಗ, ಅರಣ್ಯ ವಲಯ ಅಧಿಕಾರಿಗಳು ನಿವೇಶನದ ಸಲುವಾಗಿ ಅಗತ್ಯವಿದ್ದ ಭೂಮಿಯನ್ನು ಕಂದಾಯ ನಿರೀಕ್ಷಕರಿಗೆ ಹಸ್ತಾಂತರಿಸಿದ್ದರು. ಮುಂದೆ ಪಟ್ಟಣ ಪಂಚಾಯಿತಿಯವರು, 254 ಕುಟುಂಬಗಳಿಗೆ 60x40ರ ಅಳತೆಯ ನಿವೇಶನ ಹಂಚಿಕೆ ಮಾಡಿ, ಹಕ್ಕು ಪತ್ರ ನೀಡಿದ್ದರು’ ಎನ್ನುತ್ತಾರೆ ವಾರ್ಡ್‌ ನಂ.12ರ ಪಟ್ಟಣ ಪಂಚಾಯಿತಿ ಸದಸ್ಯ ಅಶೋಕ ಚಲವಾದಿ. 

‘ಆಶ್ರಯ ಯೋಜನೆಯಡಿ ಫಲಾನುಭವಿಗಳು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ತೀರಾ ಇತ್ತೀಚೆಗೆ ಕೆಲವರು ಮನೆಯನ್ನು ದುರಸ್ತಿ ಮಾಡಿಸಿಕೊಂಡಿದ್ದಾರೆ. ಆದರೆ, ಈ ಹಿಂದೆ ಕಂದಾಯ ನಿರೀಕ್ಷಕರು ನಿವೇಶನದ ಭೂಮಿಯನ್ನು ಟೌನ್‌ ಸೆಕ್ರೆಟರಿ ಅವರಿಗೆ (ಹಿಂದಿನ ಪುರಸಭೆ) ಹಸ್ತಾಂತರಿಸಿದರೂ ಉತಾರದಲ್ಲಿ ಕಂದಾಯ ಭೂಮಿ ಅಂತ ಪರಿವರ್ತನೆ ಆಗಲಿಲ್ಲ. ಉತಾರದ ಮಾಲೀಕರ ಕಾಲಂನಲ್ಲಿ ಅರಣ್ಯ ಎಂದೇ ನಮೂದಾಗಿತ್ತು. ಇತ್ತೀಚೆಗೆ ಕಂದಾಯ ಭೂಮಿ ಆಗಿ ಬಿಡುಗಡೆ ಆಗಿದೆ. ಆದರೆ, ಇಡೀ ಪ್ರದೇಶವನ್ನು ಸರ್ವೆ ಮಾಡಿಸಿ, ಫಲಾನುಭವಿಗಳ ನಿವೇಶನ ಗುರುತು ಮಾಡಿಕೊಡಬೇಕಾಗಿದೆ’ ಎಂದು ಅವರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು