ಮಂಗಳವಾರ, ಮಾರ್ಚ್ 9, 2021
31 °C
ಕುಗ್ರಾಮಗಳಲ್ಲಿ ಆರೋಗ್ಯ ಸೇವೆಗೆ ಜಿ.ಪಂ ರೂಪಿಸಿದ ಯೋಜನೆಗೆ ಪ್ರತಿಷ್ಠಿತ ‘ಸ್ಕಾಚ್’ ಗೌರವ

‘ಬೆನ್ನಮೇಲೆ ಆರೋಗ್ಯ ಕೇಂದ್ರ’ಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಕುಗ್ರಾಮಗಳ ಜನರ ಮನೆ ಬಾಗಿಲಿಗೇ ಆರೋಗ್ಯ ಸೇವೆಗಳನ್ನು ತಲುಪಿಸುವ ಮಹತ್ವಾಕಾಂಕ್ಷೆಯಿಂದ ಜಿಲ್ಲಾ ಪಂಚಾಯಿತಿಯು ಕಳೆದ ವರ್ಷ ರೂಪಿಸಿದ್ದ ‘ಕ್ಲಿನಿಕ್ ಇನ್ ಎ ಬ್ಯಾಕ್‌ಪ್ಯಾಕ್’, ಪ್ರತಿಷ್ಠಿತ ‘ಸ್ಕಾಚ್’ ಪ್ರಶಸ್ತಿಗೆ ಭಾಜನವಾಗಿದೆ.

ಪ್ರವಾಹದಂಥ ತುರ್ತು ಸಂದರ್ಭಗಳಲ್ಲಿ ಗುಡ್ಡಗಾಡು ಜನರಿಗೆ ಆರೋಗ್ಯ ಸೇವೆ ನೀಡಲು ಭಾರಿ ಸಮಸ್ಯೆಯಾಗುತ್ತದೆ. ಗರ್ಭಿಣಿಯರು ಮತ್ತು ಹಿರಿಯ ನಾಗರಿಕರು ಪರದಾಡಬೇಕಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಾ.ಸಂಗೀತಾ ಭಟ್, ಸಂಚಾರಿ ಆಸ್ಪತ್ರೆಯ ಸುಧಾರಿತ ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಿದರು. ಅಂದಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅವರೊಂದಿಗೆ ಚರ್ಚಿಸಿದರು. ತಂತ್ರಜ್ಞಾನ ಬಳಸಿ ಆರೋಗ್ಯ ಸೇವೆಗಳನ್ನು ನೀಡಲು ಯೋಜನೆ ರೂಪಿಸಿದರು.

ಕುಗ್ರಾಮಗಳಲ್ಲಿ ಆರೋಗ್ಯ ಸೇವೆ ನೀಡುವ ಸಿಬ್ಬಂದಿಯ ಬೆನ್ನಿನಲ್ಲಿರುವ ಚೀಲದಲ್ಲಿ ತುರ್ತು ಚಿಕಿತ್ಸೆಯ ಎಲ್ಲ ಸಲಕರಣೆಗಳೂ ಇರುವಂತೆ ನೋಡಿಕೊಳ್ಳಲಾಯಿತು. ರೋಗಿಯ ದತ್ತಾಂಶಗಳನ್ನು ಟ್ಯಾಬ್ ಮೂಲಕ ಸಂಗ್ರಹಿಸಲಾಯಿತು. ಇದಕ್ಕಾಗಿ ಸರ್ಕಾರದ ಅಂಗಸಂಸ್ಥೆ ಎನ್.ಐ.ಸಿ.ಯೊಂದಿಗೂ ಜಿಲ್ಲಾ ಪಂಚಾಯಿತಿ ಒಪ್ಪಂದ ಮಾಡಿಕೊಂಡು ಕಾರ್ಯಾರಂಭ ಮಾಡಿತು.

ಯಾವುದೇ ಸೌಕರ್ಯಗಳೂ ಇಲ್ಲದ ಹಳ್ಳಿಗಳಲ್ಲಿಯೂ ಗರ್ಭಿಣಿಯ ಆರೋಗ್ಯ, ಮಗುವಿನ ಹೃದಯ ಬಡಿತ, ಚಲನವಲನ ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಯಿತು. 2019ರಲ್ಲಿ ರೂಪುಗೊಂಡ ಈ ಯೋಜನೆಯಲ್ಲಿ ವಾರಕ್ಕೆ ಎರಡು ದಿನದಂತೆ 545 ರೋಗಿಗಳ ಆರೋಗ್ಯ ಪರಿಶೀಲನೆ ಮಾಡಲಾಗಿದೆ. 49 ತಾಯಂದಿರೂ ಇದರ ಪ್ರಯೋಜನ ಪಡೆದಿದ್ದಾರೆ. ಆದರೆ, ಕೋವಿಡ್ ಕಾರಣದಿಂದ ಒಂಬತ್ತು ತಿಂಗಳಿನಿಂದ ಬಳಕೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಕಷ್ಟದಲ್ಲಿರುವ, ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಎರಡು ವರ್ಷಗಳ ಹಿಂದೆ ರೂಪಿಸಿದ್ದ ಚಿಕ್ಕಿ ತಯಾರಿಕಾ ಘಟಕ ಯೋಜನೆಯೂ ‘ಸ್ಕಾಚ್’ ಪ್ರಶಸ್ತಿಗೆ ಪಾತ್ರವಾಗಿತ್ತು.

ಚೀಲದಲ್ಲಿ ಏನೇನಿವೆ?

ಕಾರವಾರ ತಾಲ್ಲೂಕಿನ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2019ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ‘ಕ್ಲಿನಿಕ್ ಇನ್ ಬ್ಯಾಕ್‌ಪ್ಯಾಕ್’ ಆರಂಭಿಸಲಾಯಿತು.

ಚೀಲದಲ್ಲಿ ದೇಹದ ತೂಕ, ಎತ್ತರ ನೋಡುವ ಸಲಕರಣೆಗಳು, ದೇಹದ ಸುತ್ತಳತೆ ನೋಡುವ ಮಾಪಕ, ಅಲ್ಟ್ರಾಸಾನಿಕ್, ಕೆಂಪು ರಕ್ತದ ಕಣ ಅಳೆಯುವ, ರಕ್ತದೊತ್ತಡ ತಿಳಿಸುವ ಉಪಕರಣ, ಥರ್ಮಮೀಟರ್, ಸಂಚಾರಿ ಇ.ಸಿ.ಜಿ ಯಂತ್ರ, ‍ಪಲ್ಸ್ ಆಕ್ಸಿಮೀಟರ್ ಮುಂತಾದ 15 ವೈದ್ಯಕೀಯ ಉಪಕರಣಗಳಿವೆ. ಇದರಲ್ಲಿರುವ ಆಂಡ್ರಾಯ್ಡ್ ಟ್ಯಾಬ್ಲೆಟ್ ಮೂಲಕ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ‘ಕ್ಲೌಡ್ ತಂತ್ರಾಂಶ’ದಲ್ಲಿ ಸಂಗ್ರಹಿಸಲಾಗುತ್ತದೆ.

***

ಗರ್ಭಿಣಿಯರ ಆರೋಗ್ಯ ಪರಿಶೀಲನೆಯು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಂಕೋಲಾ ಹಾಗೂ ಹಳಿಯಾಳ ತಾಲ್ಲೂಕಿನಲ್ಲೂ ಜಾರಿ ಮಾಡಲು ಉದ್ದೇಶಿಸಲಾಗಿದೆ.

– ಡಾ.ಸಂಗೀತಾ ಭಟ್, ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.