ಬುಧವಾರ, ಸೆಪ್ಟೆಂಬರ್ 22, 2021
28 °C
ಈ ಬಾರಿ ಸರಳವಾಗಿ, ನಿಯಮದ ಪ್ರಕಾರ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ

ಕಾರವಾರ: ಕೊರೊನಾ ಯೋಧರ ಗೌರವಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಈ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಕೊರೋನಾ ಯೋಧರನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಗುರುತಿಸಬೇಕು. ವಿವಿಧ ಇಲಾಖೆಗಳಲ್ಲಿ ಒಬ್ಬರನ್ನು ಪ್ರತಿನಿಧಿಯನ್ನಾಗಿ ಗೌರವಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೊರೊನಾ ಬಗ್ಗೆ ಜನಜಾಗೃತಿಯಲ್ಲಿ ತೊಡಗಿಕೊಂಡಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಸರ್ಕಾರಿ ವೈದ್ಯರು, ಶುಶ್ರೂಷಕಿಯರು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಪೌರಕಾರ್ಮಿಕರು, ಮತ್ತಿತರ ಸೇವೆಗಳಲ್ಲಿ ತೊಡಗಿಕೊಂಡಿರುವವರನ್ನು ಗೌರವಿಸಬೇಕು‌’ ಎಂದು ಅವರು ಹೇಳಿದರು.

‘ಈ ಬಾರಿ ಆ.15ರಂದು ಸ್ವಾತಂತ್ರ್ಯೋತ್ಸವವನ್ನು ಕೋವಿಡ್ ನಿಯಮಾವಳಿಗಳ ಪಾಲನೆಯೊಂದಿಗೆ ಅಚರಿಸಬೇಕಿದೆ. ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಹಾಗೂ ಮುಖಗವಸು ಬಳಕೆ ಕಡ್ಡಾಯವಾಗಿದೆ’ ಎಂದು ತಿಳಿಸಿದರು.

‘ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಸುರಕ್ಷತೆಯೊಂದಿಗೆ ಸ್ವಾತಂತ್ರ್ಯೋತ್ಸವ ಆಚರಣೆ ಕುರಿತು ಕೇಂದ್ರ ಸರ್ಕಾರವು ಕೆಲವು ಮಾರ್ಗದರ್ಶನಗಳನ್ನು ನೀಡಿದೆ. ಅವುಗಳ ಪ್ರಕಾರ ಜಿಲ್ಲಾಮಟ್ಟದಲ್ಲಿ ಪರೇಡ್, ರಾಷ್ಟ್ರಧ್ವಜಾರೋಹಣ, ಜಿಲ್ಲಾ ಉಸ್ತುವಾರಿ ಸಚಿವರಿಂದ ಭಾಷಣ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಡಿಮೆ ಸಂಖ್ಯೆಯಲ್ಲಿ ಜನ ಸೇರಿ ರಾಷ್ಟ್ರಕ್ಕೆ ಗೌರವವನ್ನು ಸಲ್ಲಿಸಬೇಕು. ಯಾವುದೇ ರೀತಿಯಿಂದಲೂ ಚ್ಯುತಿ ಬಾರದಂತೆ ಜಾಗ್ರತೆ ವಹಿಸಬೇಕು’ ಎಂದು ಸೂಚಿಸಿದರು.

‘ಸರ್ಕಾರದ ಮಾರ್ಗಸೂಚಿಯ ಅನ್ವಯ ಬೆಳಿಗ್ಗೆ 7.15ಕ್ಕೆ ಜಿಲ್ಲಾಧಿಕಾರಿ ಗೃಹ ಕಚೇರಿಯಲ್ಲಿ, 7.30ಕ್ಕೆ ಎಲ್ಲಾ ಶಾಲಾ, ಕಾಲೇಜು ಸರ್ಕಾರಿ ಕಚೇರಿಗಳಲ್ಲಿ, 8.15ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, 9ಕ್ಕೆ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಬೇಕು’ ಎಂದು ತಿಳಿಸಿದರು.

‘ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ’

‘ಕೊರೊನಾ ಕಾರಣದಿಂದ ಪರಸ್ಪರ ಅಂತರ ಕಾಯ್ದುಕೊಳ್ಳಬೇಕಾಗಿರುವ ಕಾರಣ ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮ ಹಾಗೂ ಪಥಸಂಚಲನ ಇರುವುದಿಲ್ಲ. ಕೇವಲ ಪೊಲೀಸ್, ಗೃಹ ರಕ್ಷಕದಳ, ಅರಣ್ಯ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ನಾಲ್ಕು ತಂಡಗಳಿಂದ ಪಥಸಂಚಲನ ಹಮ್ಮಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು