ಶುಕ್ರವಾರ, ಜುಲೈ 30, 2021
26 °C

ಕಾರವಾರ: ತಾಯಿಯ ಶವ ಸಂಸ್ಕಾರಕ್ಕೆ ಪರದಾಡಿದ ನೌಕಾ ಸಿಬ್ಬಂದಿ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕಿಡ್ನಿ ವೈಫಲ್ಯದಿಂದ ಮೃತಪಟ್ಟ ತಾಯಿಯ ಶವ ಸಂಸ್ಕಾರಕ್ಕೆ ಸೀಬರ್ಡ್ ನೌಕಾಪಡೆಯ ಸಿಬ್ಬಂದಿಯೊಬ್ಬರು ಮಂಗಳವಾರ ತಡರಾತ್ರಿ ಪರದಾಡಿದರು.

ಎರಡು ಸ್ಮಶಾನಗಳಿಗೆ ತೆರಳಿದರೂ ಸ್ಥಳೀಯರು ವಿರೋಧಿಸಿದರು. ಕೊನೆಗೆ, ಪೊಲೀಸರು ಮತ್ತು ಸಂಘಟನೆಗಳ ಸಹಾಯ ಪಡೆದು ಕಾರವಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.

ಜಾರ್ಖಂಡ್‌ನ ಸುಮಿತ್ ಕುಮಾರ್ ಸೆಹಗಲ್ ಅವರ ತಾಯಿ ಅನಿತಾ ದೇವಿ (48), ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದರು. ಲಾಕ್‌ಡೌನ್ ಕಾರಣದಿಂದ ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ.

ಹಾಗಾಗಿ ಪಾರ್ಥಿವ ಶರೀರವನ್ನು ನೌಕಾನೆಲೆಯ ಸಮೀಪದ ಅರಗಾ ಸ್ಮಶಾನಕ್ಕೆ ತೆಗೆದುಕೊಂಡು ಹೋದರು. ಅಲ್ಲಿನ ಕೆಲವರು,  ಎಲ್ಲೆಡೆ ಕೊರೊನಾ ವೈರಸ್ ಹರಡಿದ್ದು, ತಮ್ಮೂರಿನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡದಂತೆ ತಿಳಿಸಿದರು. ಹಾಗಾಗಿ ಸುಮಿತ್ ಕುಮಾರ್, ತಾಯಿಯ ಮೃತದೇಹದೊಂದಿಗೆ ಚೆಂಡಿಯಾದ ಸ್ಮಶಾನಕ್ಕೆ ಹೋದರು. ಅಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಅನುಮತಿಯನ್ನೂ ಪಡೆದಿದ್ದರು. ತಾಯಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಬಂದಿದೆ ಎಂದು ತಿಳಿಸಿದರೂ ಅಲ್ಲಿನ ಸ್ಥಳೀಯರು ವಿರೋಧಿಸಿದರು.

ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಊರಿನವರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರು, ಅಧಿಕಾರಿಗಳು ಮತ್ತು ಜನಶಕ್ತಿ ವೇದಿಕೆಯ ಮುಖಂಡರ ಸಹಕಾರದಿಂದ ಕಾರವಾರದ ಕೋಡಿಬಾಗದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಿದರು. ಚಿತಾಭಸ್ಮವನ್ನು ಜುಲೈ 9ರಂದು ಹುಟ್ಟೂರಿಗೆ ತೆಗೆದುಕೊಂಡು ಹೋಗಿ ಅಂತಿಮ ಕ್ರಿಯೆಗಳನ್ನು ನೆರವೇರಿಸಲು ಅವರು ಸಿದ್ಧತೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಪ್ರಮುಖರಾದ ರಾಮ ನಾಯ್ಕ, ಬಾಬು ಶೇಖ್, ಅರವಿಂದ ಕೊಮಾರ ನಾಯ್ಕ, ವಿನಾಯಕ ಆಚಾರಿ, ಸುಧಾಕರ ಸದಾನಂದ ನಾಯ್ಕ, ನೌಕಾದಳದ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು