ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕ್ವಾರಂಟೈನ್‌ ನಿಗಾಕ್ಕೆ ಮೂವರ ತಂಡ

ಪ್ರತಿ ತಾಸಿಗೊಮ್ಮೆ ಸೆಲ್ಫಿ ಕಳುಹಿಸದಿದ್ದರೆ ಜಿಲ್ಲಾಡಳಿತ ಗುರುತಿಸಿದ ಜಾಗದಲ್ಲಿ ಪ್ರತ್ಯೇಕ ವಾಸ
Last Updated 1 ಏಪ್ರಿಲ್ 2020, 11:48 IST
ಅಕ್ಷರ ಗಾತ್ರ

ಕಾರವಾರ:ವಿದೇಶಗಳಿಂದ ಬಂದವರೂ ಸೇರಿದಂತೆ ಮನೆಯಲ್ಲೇ ಕ್ವಾರಂಟೈನ್‌ ಆಗಿರುವವರು ಪ್ರತಿ ತಾಸಿಗೊಮ್ಮೆ ತಮ್ಮ ಸೆಲ್ಫಿಯನ್ನು ‘ಕ್ವಾರಂಟೈನ್ ವಾಚ್’ ಮೊಬೈಲ್ ಆ್ಯಪ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಇದರ ಮೇಲೆ ನಿಗಾ ಇರಿಸಲು ಜಿಲ್ಲಾಡಳಿತವು ತಂಡವೊಂದನ್ನು ರಚಿಸಿದೆ.

‘ಉತ್ತರ ಕನ್ನಡ ಸೆಲ್ಫಿ ಪರಿಶೀಲನಾ ತಂಡ’ ಎಂದು ಇದನ್ನು ಗುರುತಿಸಲಾಗಿದ್ದು, ಮೂವರು ಇದರಲ್ಲಿದ್ದಾರೆ. ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಪೂಜಾರಿ ತಂಡದ ಉಸ್ತುವಾರಿಯಾಗಿದ್ದಾರೆ. ‘ಭೂಮಿ’ ವಿಭಾಗದ ವಿನೋದ ಗಾಂವ್ಕರ್ತಾಂತ್ರಿಕ ಸಹಾಯಕರಾಗಿ ಮತ್ತು ಡಾಟಾ ಎಂಟ್ರಿ ಆಪರೇಟರ್ ನಾಗರಾಜ ನಾಯ್ಕ ಆಪರೇಟರ್ ಆಗಿ ಕೆಲಸ ನಿರ್ವಹಿಸಲಿದ್ದಾರೆ.

ಈ ತಂಡವು ಮನೆಗಳಲ್ಲೇ ಕ್ವಾರಂಟೈನ್ ಆದವರ ಪಟ್ಟಿ ತಯಾರಿಸಿ, ಆ್ಯಪ್‌ನಲ್ಲಿಪ್ರತಿದಿನ ಮಾಹಿತಿ ನಮೂದಿಸಬೇಕು. ಆ್ಯಪ್‌ಗೆ ಸಂಬಂಧಿಸಿದ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು. ಕ್ವಾರಂಟೈನ್ ಆದವರು ರಾತ್ರಿ 10ರಿಂದ ಬೆಳಿಗ್ಗೆ 7ರ ಅವಧಿಯನ್ನು ಹೊರತು ಪಡಿಸಿ ಪ್ರತಿ ತಾಸಿಗೊಮ್ಮೆ ಸೆಲ್ಫಿ ಅಪ್‌ಲೋಡ್ ಮಾಡುವಂತೆ ತಂಡವು ನೋಡಿಕೊಳ್ಳಬೇಕು.

ಹೆಚ್ಚುವರಿ ಜಿಲ್ಲಾಧಿಕಾರಿ ನೀಡುವ ಸೂಚನೆಗಳ ಪ್ರಕಾರ ಈ ತಂಡವು ಕಾರ್ಯ ನಿರ್ವಹಿಸಲಿದೆ. ಆ್ಯಪ್‌ಗೆ ಸಂಬಂಧಿಸಿ ಎಲ್ಲ ವರದಿಗಳನ್ನೂ ಸರ್ಕಾರಕ್ಕೆ ಸಲ್ಲಿಸುವ ಜವಾಬ್ದಾರಿಯನ್ನೂ ನೀಡಲಾಗಿದೆ. ಸೆಲ್ಫಿ ಅಪ್‌ಲೋಡ್ ಮಾಡುವ ನಿಯಮವನ್ನು ಉಲ್ಲಂಘಿಸುವವರ ಮಾಹಿತಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೆ ನೀಡುವಂತೆ ಈ ತಂಡಕ್ಕೆ ಸೂಚಿಸಲಾಗಿದೆ.

ಮನೆಗಳಿಗೆ ಆಹಾರ ಪೂರೈಕೆ:ಜೀವನಾವಶ್ಯಕ ವಸ್ತುಗಳನ್ನು ಜಿಲ್ಲೆಯ ಗ್ರಾಮೀಣಪ್ರದೇಶಗಳ ನಿವಾಸಿಗಳಿಗೆ ತಲುಪಿಸುವ ಕಾರ್ಯವೂ ಆರಂಭವಾಗಿದೆ. ಹಲವಾರು ಮನೆಗಳಿಗೆ ಜಿಲ್ಲಾಡಳಿತ ಗುರುತಿಸಿದ ವಾಹನಗಳಲ್ಲಿ ಸಾಮಗ್ರಿಗಳನ್ನು ಈಗಾಗಲೇ ತಲುಪಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯ ಆರಂಭವಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಉಪ ವಿಭಾಗಾಧಿಕಾರಿಗಳು, ತಾಲ್ಲೂಕು ಪಂಚಾಯ್ತಿಗಳ ಕಾರ್ಯ ನಿರ್ವಹಣಾ ಅಧಿಕಾರಿಗಳು ಮತ್ತು ತಹಸೀಲ್ದಾರರು ಕೂಡ ತೊಡಗಿಕೊಂಡಿದ್ದಾರೆ.

ದೆಹಲಿಗೆ ಹೋದವರು ಇಬ್ಬರು: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್ ಜಮಾತ್ ಕೇಂದ್ರದಲ್ಲಿ ಮಾರ್ಚ್ 13ರಿಂದ 15ರವರೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಉತ್ತರ ಕನ್ನಡದ ಇಬ್ಬರು ಭಾಗವಹಿಸಿದ್ದರು.

ಅವರನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, 14 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದಾರೆ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ. ಆದರೂ ಮತ್ತೊಮ್ಮೆ ದೃಢಪಡಿಸಿಕೊಳ್ಳುವ ಸಲುವಾಗಿ ಅವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಕೋವಿಡ್ 19 ಪತ್ತೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT