ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ಕಸ ಸಂಗ್ರಹಣೆ ಶುಲ್ಕ ಏರಿಕೆ: ವಿರೋಧ

ಡಾ.ನಿತಿನ್ ಅಧ್ಯಕ್ಷತೆಯಲ್ಲಿ ನಡೆದ ಕಾರವಾರ ನಗರಸಭೆಯ ಸಾಮಾನ್ಯ ಸಭೆ
Last Updated 16 ಜುಲೈ 2021, 15:24 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಸಂಕಷ್ಟದಿಂದ ಜನರು ಬಸವಳಿದಿರುವ ನಡುವೆಯೇ ನಗರಸಭೆ ನೀರು, ಕಸ ಸಂಗ್ರಹಣೆ ಶುಲ್ಕ ಏರಿಕೆ ಮಾಡಿದೆ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರು ಅಸಮಾಧಾನ ಹೊರಹಾಕಿದರು.

ಡಾ.ನಿತಿನ್ ಪಿಕಳೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಶುಲ್ಕ ಏರಿಕೆ ವಿರುದ್ಧ ಹಲವು ಸದಸ್ಯರು ಧ್ವನಿ ಎತ್ತಿದರು. ‘ತೈಲಬೆಲೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಶುಲ್ಕವನ್ನು ಮೂರುಪಟ್ಟು ಹೆಚ್ಚಿಸಿ ನಗರಸಭೆ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ’ ಎಂದು ಸದಸ್ಯ ಗಣಪತಿ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

‘ತ್ಯಾಜ್ಯ ವಿಲೇವಾರಿ ಕರವನ್ನು ₹180ರ ಬದಲು ₹780ಕ್ಕೆ ಏರಿಕೆ ಮಾಡಲಾಗಿದೆ. ನೀರಿನ ಕರವನ್ನೂ ಏರಿಸಿದ್ದು ದಿನಕ್ಕೆ ಒಂದು ತಾಸು ನೀರು ಸರಿಯಾಗಿ ಬರುತ್ತಿಲ್ಲ’ ಎಂದು ಸದಸ್ಯರಾದ ಸಂದೀಪ ತಳೇಕರ, ಮಕ್ಬುಲ್ ಶೇಖ್, ಪ್ರೇಮಾನಂದ ಗುನಗಾ, ಪಾಂಡುರಂಗ ರೇವಂಡಿಕರ್ ಹೇಳಿದರು. ಕೂಡಲೆ ಶುಲ್ಕ ಇಳಿಕೆ ಮಾಡಿ ಎಂದು ಪಟ್ಟು ಹಿಡಿದರು.

‘ಕೋವಿಡ್ ಕಾರಣದಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿಲ್ಲ. ಕರ ಸಂಗ್ರಹಣೆ ನಗರಸಭೆಗೆ ಅಭಿವೃದ್ಧಿ ಕಾರ್ಯಕ್ಕೆ ದೊಡ್ಡ ಮೂಲವಾಗಿದೆ. ಸರ್ಕಾರದ ಸೂಚನೆಯಂತೆ ಕರ ಏರಿಕೆ ಮಾಡಿದ್ದೇವೆ’ ಎಂದು ಪೌರಾಯುಕ್ತ ಆರ್.ಪಿ.ನಾಯ್ಕ ಸ್ಪಷ್ಟನೆ ನೀಡಿದರು. ತೆರಿಗೆ ಶುಲ್ಕ ಪರಿಷ್ಕರಣೆ ಸಂಬಂಧ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಡಾ.ನಿತಿನ್ ಪಿಕಳೆ ಹೇಳಿದ ಬಳಿಕ ಸದಸ್ಯರು ಸುಮ್ಮನಾದರು.

ನಗರದ ಸರ್ವೋದಯ ನಗರದಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‍ಗೆ ನಗರಸಭೆ ಖರ್ಚಿನಲ್ಲಿ ರಸ್ತೆ ಮಾಡಿದ್ದಕ್ಕೆ ಸದಸ್ಯೆ ಶಿಲ್ಪಾ ನಾಯ್ಕ ಆಕ್ಷೇಪಿಸಿದರು. ನಗರಸಭೆಯ ಮೂಲ ರಸ್ತೆಯಾಗಿದ್ದರಿಂದ ಕಾಮಗಾರಿ ಮಾಡಲಾಗಿದೆ ಎಂದು ಆರ್.ಪಿ.ನಾಯ್ಕ ಸ್ಪಷ್ಟಪಡಿಸಿದರು.

ಹೂವಿನ ಚೌಕಕ್ಕೆ ಸೇನಾನಿ ಹೆಂಜಾ ನಾಯ್ಕ ಹೆಸರಿಡಬೇಕು ಎಂದು ಹಿಂದಿನ ಸಭೆಯಲ್ಲಿ ಒತ್ತಾಯಿಸಿದ್ದು, ಠರಾವಿನಲ್ಲಿ ದಿ.ಎ.ಪಿ.ಜೆ.ಅಬ್ದುಲ್ ಕಲಾಂ ಹೆಸರು ತಪ್ಪಾಗಿ ಪ್ರಕಟವಾಗಿದೆ. ಅದನ್ನು ಸರಿಪಡಿಸಿ ಎಂದು ಗಣಪತಿ ನಾಯ್ಕ ಒತ್ತಾಯಿಸಿದರು.

ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡಕರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT