ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಗ ಅಪರಾಧಿ ಪ್ರಜ್ಞೆ, ಈಗ ಹೆಮ್ಮೆ’

Last Updated 17 ಜುಲೈ 2020, 16:49 IST
ಅಕ್ಷರ ಗಾತ್ರ

ಕುಮಟಾ: ‘ನನಗೆ ಕೋವಿಡ್ ಪಾಸಿಟಿವ್ ಬಂದಾಗ ರಕ್ತದೊತ್ತಡ ಒಮ್ಮೆ ಹೆಚ್ಚಾಗಿ ಕೊಂಚ ಅಸ್ತವ್ಯಸ್ಥಗೊಂಡಿದ್ದೆ. ಮನೆಯವರೆಲ್ಲ ಗಾಬರಿಯಾದರು. ಆಸ್ಪತ್ರೆ ಸಿಬ್ಬಂದಿ ವೈಜ್ಞಾನಿಕ ರೀತಿಯಲ್ಲಿ ನನ್ನನ್ನು ಕರೆದುಕೊಂಡು ಹೋಗಿ ಕುಮಟಾ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ದಾಖಲಿಸಿದರು. ಅಲ್ಲಿಯ ಉತ್ತಮ ವ್ಯವಸ್ಥೆ, ಆರೈಕೆಯಿಂದ ಎರಡು ದಿನ ಕಳೆದ ನಂತರ ನಿರಾಳ ಎನಿಸಿತು..’

ಏಳು ದಿವಸಗಳಲ್ಲಿ ಕೋವಿಡ್ ವಿರುದ್ಧ ಜಯಿಸಿ ಮನೆಗೆ ಬಂದ 62 ವರ್ಷ ವಯಸ್ಸಿನ ಪಟ್ಟಣದ ನಿವೃತ್ತ ಉದ್ಯೋಗಿಯೊಬ್ಬರ ಮನದಾಳದ ಮಾತು ಇದು.

‘ಆಸ್ಪತ್ರೆಯಲ್ಲಿದ್ದಾಗ ನನಗೆ ಔಷಧ ಕೊಡಲುವೈಯಕ್ತಿಕ ರಕ್ಷಣಾ ಸಲಕರಣೆಯ (ಪಿ.ಪಿ.ಯ) ಕಿಟ್ ಧರಿಸಿ ಬರುವ ವೈದ್ಯರು, ಆಸ್ಪತ್ರೆ ಸಿಬ್ಬಂದಿ ನೋಡಿ ತುಂಬಾ ನೋವಾಗುತ್ತಿತ್ತು. ಆರೋಗ್ಯದಿಂದ ಇರುವ ಅವರಿಗೆ ನನ್ನಿಂದ ಸೋಂಕು ತಗುಲಿದರೆ ಎಂದೆನ್ನಿಸುತ್ತಿತ್ತು. ನಾನು ಎಚ್ಚರಿಕೆಯಿಂದ ಇದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲವಲ್ಲ ಎಂದು ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಆಗೆಲ್ಲ ಅವರು ಸಮಾಧಾನ ಮಾಡುತ್ತಿದ್ದರು’ ಎಂದು ಹೇಳಿದರು.

‘ಕೋವಿಡ್ ಪಾಸಿಟಿವ್ಬಂದ ನಂತರ ಕೊಂಚ ಜ್ವರದ ಲಕ್ಷಣ ಹೊರತಾಗಿ ನನ್ನ ಆರೋಗ್ಯದಲ್ಲಿ ಯಾವ ಏರುಪೇರೂ ಆಗಲಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಗಂಟಲು ದ್ರವ ಪರೀಕ್ಷೆ ವರದಿ ನೆಗೆಟಿವ್ ಬರುವಂತೆ ಮಾಡಲು ಹೆಣಗಾಡುತ್ತಿದ್ದರು’ ಎಂದರು.

‘ಏಳು ದಿವಸಗಳ ನಂತರ ಗುಣಮುಖನಾಗಿ ಆಸ್ಪತ್ರೆಯಿಂದ ಮನೆಗೆ ಬಂದ ನಂತರವೂ ಮನೆಯಲ್ಲಿ ಮತ್ತೆ ಏಳು ದಿನ ಸ್ವಯಂ ಕ್ವಾರಂಟೈನ್ ಇದ್ದೆ. ಇನ್ನೂ ಹೊರಗಡೆ ಹೋಗಿಲ್ಲ, ನನ್ನಿಂದ ಬೇರೆಯವರಿಗೆ ತೊಂದರೆ ಆಗಬಹುದೆಂದು ಕಸಿವಿಸಿಯಾಗುತ್ತಿದೆ. ಏನಾದರೂ ತೊಂದರೆಯಾದರೆ ಸಂಪರ್ಕಿಸುವಂತೆ ವೈದ್ಯರು ತಿಳಿಸಿದ್ದಾರೆ’ ಎಂದು ಹೇಳಿದರು.

‘ಈಗ ಆರಾಮವಾಗಿರುವ ನನಗೆ ಕೋವಿಡ್ ಜಯಿಸಿದ ಹೆಮ್ಮೆಯೂ ಇದೆ. ಸಮಸ್ಯೆ ಬರುವವರೆಗೆ ನಿರ್ಲಕ್ಷ್ಯ ವಹಿಸುವುದನ್ನು ನಾವು ನಿಲ್ಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿಗತ ಅಂತರ ಕಾಪಾಡಿಕೊಂಡರೆ ಸಮಸ್ಯೆಯ ಪ್ರಶ್ನೆ ಉದ್ಭವಿಸದು’ ಎಂದು ಕೋವಿಡ್‌ ಗೆದ್ದ ಅನುಭವವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ವರದಿ: ಎಂ.ಜಿ.ನಾಯಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT