ಸೋಮವಾರ, ಜೂನ್ 14, 2021
23 °C

ಗೆದ್ದು ಬಂದವರು | ‘ಆಸ್ಪತ್ರೆಯಲ್ಲೂ ಆನ್‌ಲೈನ್‌ನಲ್ಲಿ ಕೆಲಸ ಮಾಡಿದ್ದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾವರ: ‘ಕೋವಿಡ್ ಸೋಂಕು ಖಾತ್ರಿಯಾಗಿ ಆಸ್ಪತ್ರೆಗೆ ದಾಖಲಾದ ನಂತರವೂ ನಾನು ಆನ್‌ಲೈನ್ ಮೂಲಕ ಕೆಲಸದಲ್ಲಿ ಮಗ್ನನಾಗಿದ್ದೆ. ನನಗೆ ರೋಗ ಬಂದು ಹೋಗಿದ್ದು, ವೈದ್ಯಕೀಯ ವರದಿಯಿಂದಷ್ಟೇ ತಿಳಿಯಿತು...!’

ಸಂಪೂರ್ಣವಾಗಿ ಸೋಂಕುಮುಕ್ತರಾದ ಕರ್ಕಿಯ ಕೃಷ್ಣಕುಮಾರ ಶೇಟ್ ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡರು.

‘ಆಸ್ಪತ್ರೆಗೆ ದಾಖಲಾಗುವ ಮೊದಲು ನನ್ನ ಸಂಪರ್ಕದಲ್ಲಿದ್ದ ಕುಟುಂಬದ ಯಾರೊಬ್ಬರಿಗೂ ನನ್ನಿಂದ ಸೋಂಕು ತಗುಲಿಲ್ಲ. ಅಷ್ಟೇ ಏಕೆ ಜೊತೆಗೆ ಮಲಗಿದ್ದ ನನ್ನ ಮಗನಿಗೂ ತೊಂದರೆಯಾಗಲಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕೆಲವು ದಿನಗಳ ಕಾಲ ಸಮಾಜ ನನ್ನನ್ನು ನೋಡಿದ ರೀತಿ ಅರಿವಿಗೆ ಬಂದಾಗ ಮಾತ್ರ ಮುಜುಗರ ಉಂಟಾಯಿತು’

‘ಕೊಂಕಣ ರೈಲ್ವೆಯಲ್ಲಿ ಲೆಕ್ಕಪತ್ರ ವಿಭಾಗದ ನೌಕರನಾಗಿದ್ದೇನೆ. ಎನ್.ಆರ್.ಎಂ. ಯೂನಿಯನ್‌ನ ಕಾರ್ಯಾಧ್ಯಕ್ಷನೂ ಹೌದು. ಕಚೇರಿ ಕೆಲಸಕ್ಕೆಂದು ಮಹಾರಾಷ್ಟ್ರದ ರತ್ನಗಿರಿಗೆ ಹೋಗಿದ್ದೆ. ವಾಪಸ್ ಬಂದಾಗ ಕಾರವಾರದಲ್ಲಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆದರೆ, ಅಧಿಕಾರಿಗಳು ಕ್ವಾರಂಟೈನ್ ಬೇಡ ಎಂದಿದ್ದರು. ಆದರೆ, ಬೇರೆ ರಾಜ್ಯದಿಂದ ಬಂದಿದ್ದ ಕಾರಣ ಹೊನ್ನಾವರ ತಹಶೀಲ್ದಾರ್‌ ವಿವೇಕ ಶೇಣ್ವಿ ಸೂಚನೆ ನೀಡಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿದರು.’

‘ಈ ನಡುವೆ ಎರಡು ದಿನ ನಾನು ಹೊರಗಿನವರ ಸಂಪರ್ಕಕ್ಕೆ ಬರದೇ ಮನೆಯಲ್ಲೇ ಉಳಿದಿದ್ದೆ. ವರದಿ ಪಾಸಿಟಿವ್ ಬಂದಾಗ  ಚಿಕಿತ್ಸೆಗಾಗಿ ಹೊನ್ನಾವರದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಯಿತು. ನನಗೆ ರೋಗದ ಯಾವುದೇ ಲಕ್ಷಣಗಳೂ ಇರಲಿಲ್ಲ. ಆಸ್ಪತ್ರೆಯಲ್ಲಿ ಇರುವಷ್ಟು ದಿನ ವೈದ್ಯರು ನೀಡಿದ ವಿಟಮಿನ್ ಮಾತ್ರೆ ಸೇವಿಸಿದೆ. ಆತ್ಮವಿಶ್ವಾಸ ನನ್ನಲ್ಲಿ ಪ್ರಬಲವಾಗಿತ್ತು. ಏಳು ದಿನ ಆಸ್ಪತ್ರೆಯಲ್ಲಿ ಉಳಿದು ನೆಗೆಟಿವ್ ವರದಿಯೊಂದಿಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ವಾಪಸ್ಸಾದೆ.’

‘ಕೋವಿಡ್ ಸೋಂಕನ್ನು ಭಯಂಕರವಾಗಿ ಚಿತ್ರಿಸಿ ಭೀತಿ ಹರಡುತ್ತಿರುವುದು ಸರಿ ಕಾಣುತ್ತಿಲ್ಲ. ರೋಗ ಲಕ್ಷಣವಿಲ್ಲದ ಕೋವಿಡ್ ರೋಗಿಗಳು ಮನೆಯಲ್ಲೇ ಇದ್ದು ಕುಟುಂಬದ ಪ್ರೀತಿಯ ಆರೈಕೆಯಲ್ಲಿ ಹಾಗೂ ಹಣ್ಣು, ತರಕಾರಿ ಮೊದಲಾದ ಪೌಷ್ಟಿಕ ಆಹಾರ ಸೇವಿಸಿ ಗುಣಮುಖರಾಗಬಹುದು. ಕೋವಿಡ್ ತಡೆಯಲು  ಮುಂಜಾಗ್ರತೆ ತೆಗೆದುಕೊಳ್ಳಬೇಕಷ್ಟೆ. ಈ ಸೋಂಕಿಗೆ ಔಷಧಿ ಇಲ್ಲದಿದ್ದರೂ ಆತ್ಮವಿಶ್ವಾಸ ಒಂದಿದ್ದರೆ ಸಂಪೂರ್ಣ ಗುಣವಾಗುವ ಸಾಮಾನ್ಯ ರೋಗ.

ನಿರೂಪಣೆ: ಎಂ.ಜಿ.ಹೆಗಡೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು