ಗುರುವಾರ , ಫೆಬ್ರವರಿ 25, 2021
20 °C

ಕಾರವಾರ: ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆಗೆ ನಿಷೇಧ, ಮರು ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಾರವಾರ: ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆಯ ಮೇಲಿನ ನಿಷೇಧವನ್ನು ತೆರವು ಮಾಡಲು ಸಾಧ್ಯವೇ ಎಂದು ಪರಾಮರ್ಶಿಸಲು ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝೆಡ್) ಅಧಿಕಾರಿಗಳ ತಂಡ ಗುರುವಾರ ಮರು ಪರಿಶೀಲನೆ ನಡೆಸಿತು.

ನದಿಯ ಕೆಲವು ಪ್ರದೇಶಗಳಲ್ಲಿ ದೋಣಿಯಲ್ಲಿ ಪ್ರಯಾಣಿಸಿದ ಅಧಿಕಾರಿಗಳು, ಮರಳು ತುಂಬಿರುವ ಜಾಗವನ್ನು ವೀಕ್ಷಿಸಿದರು. ಜೈವಿಕ ಸೂಕ್ಷ್ಮ ಪ್ರದೇಶವೆಂಬ ಕಾರಣದಿಂದ ಈ ನದಿಯಲ್ಲಿ ಮರಳು ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಇಲ್ಲಿ ಜಿಲ್ಲೆಯ ಇತರ ನದಿಗಳಂತೆಯೇ ಮರಳು ತೆಗೆಯಲು ಅವಕಾಶ ನೀಡಬೇಕು ಎಂದು ಈಚೆಗೆ ಕೆಲವು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಬಗ್ಗೆ ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ಅವರೂ ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ಗಮನಕ್ಕೂ ತಂದಿದ್ದರು. ಕಾಳಿ ನದಿಯು ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದ್ದರಿಂದ ನಿಷೇಧವನ್ನು ಮರು‍ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದರು.

ನದಿಯಲ್ಲಿ ಮರಳು ದಿಬ್ಬಗಳನ್ನು ಗುರುತಿಸಲು ವಾಸ್ತವ ಪರಿಸ್ಥಿತಿ ಅರಿತುಕೊಳ್ಳುವಂತೆ ಸಚಿವರು ಸಿಆರ್‌ಝೆಡ್ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಆರ್‌ಎಫ್‌ಒ ಪ್ರಸನ್ನ ಪಟಗಾರ್ ಅವರ ನೇತೃತ್ವದ ತಂಡವು ಭೇಟಿ ನೀಡಿತು. ಈ ತಂಡವು ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಯೋಜನೆಯ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಿದೆ. ಅದನ್ನು ಆಧರಿಸಿ ಕಾಳಿ ನದಿಯಿಂದ ಮರಳು ತೆಗೆಯಲು ಅನುಮತಿ ನೀಡುವುದು ಅಥವಾ ನಿಷೇಧ ಮುಂದುವರಿಸುವ ಬಗ್ಗೆ ನಿರ್ಧಾರವಾಗಲಿದೆ.

ಪರಿಶೀಲನೆಯ ಸಂದರ್ಭ ಸತೀಶ್ ಸೈಲ್, ಕಾರವಾರ ಮರಳು ಹೋರಾಟಗಾರರ ಸಮಿತಿ ಅಧ್ಯಕ್ಷ ದಿಗಂಬರ ಶೇಟ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು