ಸೋಮವಾರ, ಸೆಪ್ಟೆಂಬರ್ 20, 2021
21 °C
ಗುತ್ತಿಗೆದಾರ ಕಂಪನಿ ಸಿಬ್ಬಂದಿ ಹೆಸ್ಕಾಂ ಸೂಚನೆ ಮೀರಿ ಶುಲ್ಕ ವಿಧಿಸುತ್ತಿರುವ ಆರೋಪ

ಹೊಸ ಮೀಟರ್ ನೆಪದಲ್ಲಿ ಗುತ್ತಿಗೆ ಕಂಪನಿಯಿಂದ ಹಣ ವಸೂಲಿ: ಭಟ್ಕಳದಲ್ಲಿ ಜನರ ಆಕ್ರೋಶ

ಮೋಹನ ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಮನೆಗಳಿಗೆ ಅಳವಡಿಸಲಾಗಿರುವ ಹಳೆಯ ವಿದ್ಯುತ್ ಮೀಟರ್‌ಗಳನ್ನು ಹೆಸ್ಕಾಂ ಉಚಿತವಾಗಿ ಬದಲಿಸಿಕೊಡುತ್ತಿದೆ. ಆದರೆ, ಗುತ್ತಿಗೆ ವಹಿಸಿಕೊಂಡ ಕಂಪನಿಯ ಸಿಬ್ಬಂದಿ ತಾಲ್ಲೂಕಿನಲ್ಲಿ ಗ್ರಾಹಕರಿಂದ ಹಣ ಪಡೆಯುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 52 ಸಾವಿರ ವಿದ್ಯುತ್ ಮೀಟರ್‌ಗಳ ಬದಲಾವಣೆ ಆಗಬೇಕಿದೆ. ಈಗಾಗಲೇ ಸುಮಾರು 4 ಸಾವಿರ ಬದಲಾಯಿಸಿ ಹೊಸದಕ್ಕೆ ಸಂಪರ್ಕ ನೀಡಲಾಗಿದೆ. ದಾವಣಗೆರೆಯ ಸಂಸ್ಥೆಯೊಂದು ಜಿಲ್ಲೆಯಲ್ಲಿ ಇದರ ಗುತ್ತಿಗೆ ಪಡೆದುಕೊಂಡಿದೆ.

ಇದು ಗ್ರಾಹಕರಿಗೆ ಉಚಿತವಾಗಿದ್ದು, ಹೆಸ್ಕಾಂನಿಂದಲೇ ಹಣ ಪಾವತಿಯಾಗಲಿದೆ. ಆದರೆ, ವಿದ್ಯುತ್ ಬಳಕೆದಾರರಿಂದ ₹100, ₹200 ವಸೂಲಿ ಮಾಡುತ್ತಿದ್ದಾರೆ. ಅದರಲ್ಲೂ ಮನೆಯಲ್ಲಿ ಹೆಂಗಸರು ಮಾತ್ರವಿದ್ದರೆ, ಹಣ ಕಡ್ಡಾಯವಾಗಿ ಕೊಡುವಂತೆ ಒತ್ತಾಯಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. 

ಕಾರವಾರ, ಅಂಕೋಲಾ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಕೂಡ ಇದೇ ರೀತಿಯ ಆರೋಪಗಳಿವೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಸಭೆಗಳಲ್ಲೇ ಹೆಸ್ಕಾಂ ಅಧಿಕಾರಿಗಳು ಸ್ಪಷ್ಟನೆ ನೀಡಿ ಹಣ ನೀಡದಂತೆ ತಿಳಿಸಿದ್ದರು. ಆದರೂ, ಸಾರ್ವಜನಿಕರಿಂದ ಹಣ ಪಡೆಯುವುದು ನಿಂತಿಲ್ಲ. ಸಂಸ್ಥೆಯ ಕೆಲವು ಸಿಬ್ಬಂದಿ, ಹಳೆಯ ಮೀಟರನ್ನು ಬದಲಾಯಿಸಿದ್ದು, ಅದು ಮುಂದೆ ಹಾಳಾಗದಂತೆ ಕವರ್ ಅಳವಡಿಸಿದ್ದೇವೆ. ಅದರ ಶುಲ್ಕ ಕೊಡಬೇಕು ಎಂದು ಹಣ ಪಡೆಯುತ್ತಿದ್ದಾರೆ.

ಈ ಬಗ್ಗೆ ದೂರುಗಳನ್ನು ಆಧರಿಸಿ ಹೆಸ್ಕಾಂ ಅಧಿಕಾರಿಗಳು ಗುತ್ತಿಗೆದಾರ ಕಂಪನಿಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. ಆದರೂ, ಮುರ್ಡೇಶ್ವರದ ಗ್ರಾಮೀಣ ಭಾಗದಲ್ಲಿ ಮಾರ್ಚ್ 27ರಂದು ಹಣ ವಸೂಲಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಕ್ರಮ ಜರುಗಿಸಿ‌’

‘ಭಟ್ಕಳದ ಪಟ್ಟಣದ ಆಸರಕೇರಿಯಲ್ಲಿರುವ ನಮ್ಮ ಮನೆಯ ಮೀಟರ್ ಅನ್ನು ಕೆಲವು ದಿನಗಳ ಹಿಂದೆ ಬದಲಾಯಿಸಲು ಗುತ್ತಿಗೆದಾರ ಕಂಪನಿಯ ಸಿಬ್ಬಂದಿ ಬಂದಿದ್ದರು. ನನ್ನ ಪತ್ನಿಯಿಂದ ಮೀಟರ್‌ನ ಕವರ್ ಶುಲ್ಕವೆಂದು ₹100 ವಸೂಲಿ ಮಾಡಿದ್ದಾರೆ. ಅವರ ವಿರುದ್ಧ ಅಧಿಕಾರಿಗಳು ಕ್ರಮ ಜರುಗಿಸಬೇಕು’ ಎಂದು ಆಸರಕೇರಿಯ ವೆಂಕಟೇಶ ನಾಯ್ಕ ಆಗ್ರಹಿಸಿದ್ದಾರೆ.

‘ಹೆಸ್ಕಾಂಗೆ ದೂರು ನೀಡಿ’

ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ ನಾಯ್ಕ, ‘ಹೊಸ ಮೀಟರ್ ಹಾಗೂ ಅದರ ಕವರ್ ಅಳವಡಿಸುವ ಕಾರ್ಯಕ್ಕೆ ಗ್ರಾಹಕರು ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಗ್ರಾಹಕರಿಗೆ ಇದು ಸಂಪೂರ್ಣ ಉಚಿತವಾಗಿರುತ್ತದೆ. ಮೀಟರ್ ಬದಲಾಯಿಸಲು ಬಂದ ಗುತ್ತಿಗೆದಾರ ಕಂಪನಿಯ ಸಿಬ್ಬಂದಿ ಹಣ ಕೇಳಿದಲ್ಲಿ ನೇರವಾಗಿ ನಮಗೆ ದೂರು ನೀಡಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು