ಭಾನುವಾರ, ಜುಲೈ 3, 2022
25 °C
ಶತಮಾನ ಕಂಡ ಜಿಲ್ಲಾ ಕ್ರೀಡಾಂಗಣಕ್ಕೆ ಸಿಗದ ಸೌಕರ್ಯ

ಶಿರಸಿ: ಕ್ರೀಡಾಪಟುಗಳಿಗೆ ಸಿಂಥೆಟಿಕ್ ಟ್ರ್ಯಾಕ್ ಕನಸು

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ರಾಜ್ಯದ ಹಳೆಯ ಜಿಲ್ಲಾ ಕ್ರೀಡಾಂಗಣಲ್ಲಿ ಒಂದೆನಿಸಿರುವ ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಬೇಕು ಎಂಬ ಕ್ರೀಡಾಸಕ್ತರ ಬೇಡಿಕೆ ಇನ್ನೂ ಈಡೇರಿಲ್ಲ.

ರಾಷ್ಟ್ರಮಟ್ಟದ ಖೇಲೊ ಇಂಡಿಯಾ ಕ್ರೀಡಾಕೂಟ ರಾಜ್ಯದಲ್ಲೇ ನಡೆಯುತ್ತಿದ್ದು, ಅಲ್ಲಿ ಪಾಲ್ಗೊಂಡವರ ಪೈಕಿ ಇಲ್ಲಿನ ಕ್ರೀಡಾ ಪ್ರತಿಭೆಗಳಿಲ್ಲ ಎಂಬ ಕೊರಗು ಜಿಲ್ಲೆಯ ಜನರನ್ನು ಕಾಡುತ್ತಿದೆ. ಹೀಗಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಸೌಲಭ್ಯ ಒದಗಿಸಬೇಕು ಎಂಬ ಆಗ್ರಹವೂ ಮುನ್ನೆಲೆಗ ಬಂದಿದೆ.

1908ರ ದಶಕದಲ್ಲಿ ಸ್ಥಾಪನೆಯಾಗಿದ್ದ ಕ್ರೀಡಾಂಗಣಕ್ಕೆ ಗ್ಯಾಲರಿ ಸೇರಿದಂತೆ ಸುಸಜ್ಜಿತ ಆಸನದ ವ್ಯವಸ್ಥೆ ಸಿಗಲು 2002ರ ವರೆಗೆ ಕಾಯಬೇಕಾಯಿತು. ಎರಡೂವರೆ ವರ್ಷದ ಹಿಂದೆ ಮಂಜೂರಾಗಿದ್ದ ಮಣ್ಣಿನ ಟ್ರ್ಯಾಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಲೂ ಅದು ನಿರ್ಮಾಣ ಹಂತದಲ್ಲಿದೆ.

ಆದರೆ, ಮಳೆಗಾಲದಲ್ಲಿ ಹೆಚ್ಚಿನ ಕ್ರೀಡಾಕೂಟಗಳು ನಡೆಯುತ್ತವೆ. ಈ ವೇಳೆ ಕ್ರೀಡಾಂಗಣ ಕೆಸರು ಗದ್ದೆಯಂತಾದರೂ ಅನಿವಾರ್ಯವಾಗಿ ಅಲ್ಲಿಯೇ ಆಟೋಟಗಳನ್ನು ನಡೆಸುವ ಸ್ಥಿತಿ ಇದೆ.

‘ಸುಸಜ್ಜಿತ ಕ್ರೀಡಾಂಗಣವಿದ್ದರೂ ಸಿಂಥೆಟಿಕ್ ಟ್ರ್ಯಾಕ್ ಇಲ್ಲದ ಕಾರಣ ಗುಣಮಟ್ಟದ ಕ್ರೀಡಾಪ್ರತಿಭೆಗಳನ್ನು ರೂಪಿಸಲು ಅಡ್ಡಿಯಾಗುತ್ತಿದೆ. ಮಣ್ಣಿನ ಟ್ರ್ಯಾಕ್‍ನಲ್ಲಿ ತರಬೇತಿ ಪಡೆದವರು ರಾಷ್ಟ್ರ, ಅಂತರಾಷ್ಟ್ರೀಯಮಟ್ಟದಲ್ಲಿ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಎಡವುತ್ತಾರೆ. ಹೀಗಾಗಿ ಅವಕಾಶ ವಂಚಿತರಾಗುತ್ತಾರೆ’ ಎನ್ನುತ್ತಾರೆ ಕ್ರೀಡಾ ತರಬೇತುದಾರರೊಬ್ಬರು.

‘ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದರೆ ಅಥ್ಲೆಟಿಕ್ಸ್ ತರಬೇತಿ ಪಡೆಯುವವರಿಗೆ ಅನುಕೂಲವಾಗುತ್ತದೆ. ಮಳೆಗಾಲದಲ್ಲೂ ತರಬೇತಿ ಪಡೆಯಲು, ಕ್ರೀಡಾಕೂಟ ನಡೆಸಲು ಸಮಸ್ಯೆ ಉಂಟಾಗದು’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲಾ ಕ್ರೀಡಾಂಗಣದ ಪಕ್ಕ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಅಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಯಾಗಲಿದೆ. ಹೀಗಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಆ ಸೌಲಭ್ಯ ಒದಗಿಸುವುದು ಅನುಮಾನ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಅನುದಾನ ಪಡೆಯಲು ಅವಕಾಶ:

‘ಶಿರಸಿಯ ಜಿಲ್ಲಾ ಕ್ರೀಡಾಂಗಣ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕೆಲವೇ ಕ್ರೀಡಾಂಗಣಗಳ ಪೈಕಿ ಇದೂ ಒಂದು. ಕೇಂದ್ರ, ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಕ್ರೀಡಾಂಗಣ ಅಭಿವೃದ್ಧಿಗೆ ನೀಡುವ ಅನುದಾನ ಪಡೆಯಲು ನಗರ ವ್ಯಾಪ್ತಿಯ ಕ್ರೀಡಾಂಗಣಗಳ ನಡುವೆ ಪೈಪೋಟಿ ಏರ್ಪಡುತ್ತದೆ. ಆದರೆ ಇಲ್ಲಿನ ಕ್ರೀಡಾಂಗಣಕ್ಕೆ ನೆರವು ಪಡಯಬಹುದು’ ಎನ್ನುತ್ತಾರೆ ಅಂರಾಷ್ಟ್ರೀಯಮಟ್ಟದ ಕ್ರೀಡಾ ತರಬೇತುದಾರರೊಬ್ಬರು.

------------

ಜಿಲ್ಲಾ ಕ್ರೀಡಾಂಗಣಕ್ಕೆ ಎರಡು ವರ್ಷದ ಹಿಂದಷ್ಟೆ ಮಣ್ಣಿನ ಟ್ರ್ಯಾಕ್ ಅಳವಡಿಕೆಗೆ ಅನುದಾನ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ.

ಮನೀಷ್ ನಾಯಕ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ

*********

ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಯಾದರೆ ಸ್ಥಳೀಯ ಕ್ರೀಡಾ ಪ್ರತಿಭೆಗಳು ಗುಣಮಟ್ಟದ ತರಬೇತಿ ಪಡೆದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅನುಕೂಲವಾಗುತ್ತದೆ.

ರವೀಂದ್ರ ನಾಯ್ಕ

ಸ್ಪಂದನಾ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ

–––––––––––

ಅಂಕಿ–ಅಂಶ

1908

ಕ್ರೀಡಾಂಗಣ ಸ್ಥಾಪನೆ ಅವಧಿ

18 ಎಕರೆ

ಕ್ರೀಡಾಂಗಣಕ್ಕೆ ನೀಡಿರುವ ಜಾಗ

₹1 ಕೋಟಿ

ಮಣ್ಣಿನ ಟ್ರ್ಯಾಕ್ ಅಳವಡಿಕೆಗೆ ಮಂಜೂರಾದ ಅನುದಾನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು