ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಸ್ರಲಿಂಗ: ಸಂಕ್ರಾಂತಿ ಪುಣ್ಯಸ್ನಾನಕ್ಕೆ ಸಿಗದ ಅವಕಾಶ

ಬೇಸರದಿಂದ ಮರಳಿದ ಭಕ್ತರು
Last Updated 14 ಜನವರಿ 2022, 16:30 IST
ಅಕ್ಷರ ಗಾತ್ರ

ಶಿರಸಿ: ಪುಣ್ಯಕ್ಷೇತ್ರದಲ್ಲಿ ಒಂದಾದ ತಾಲ್ಲೂಕಿನ ಸಹಸ್ರಲಿಂಗದಲ್ಲಿ ಮಕರ ಸಂಕ್ರಾಂತಿಯ ಪುಣ್ಯಸ್ನಾನಕ್ಕೆ ಈ ಬಾರಿ ಅವಕಾಶ ನೀಡಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡ ಬಿಗು ನಿಯಮದಿಂದಾಗಿ ದೂರದ ಊರುಗಳಿಂದ ಬಂದಿದ್ದ ಭಕ್ತರು ನಿರಾಸೆ ಅನುಭವಿಸಿದರು.

ಸಂಕ್ರಾಂತಿ ಆಚರಣೆ ನಡೆಯುವ ಜ.14 ಮತ್ತು 15ರಂದು ಸಹಸ್ರಲಿಂಗಕ್ಕೆ ಪ್ರವೇಶ ನಿಷೇಧಿಸಿ ಭೈರುಂಬೆ ಗ್ರಾಮ ಪಂಚಾಯ್ತಿ ಮೂರು ದಿನಗಳ ಹಿಂದೆಯೇ ಆದೇಶ ಹೊರಡಿಸಿತ್ತು. ಅದಾಗ್ಯೂ, ನೆರೆಯ ಹಾವೇರಿ, ಸೊರಬ ಭಾಗದಿಂದ ನೂರಾರು ಭಕ್ತರು ಶುಕ್ರವಾರ ಪುಣ್ಯಸ್ನಾನ ಮಾಡಿ ಶಿವಲಿಂಗಗಳ ದರ್ಶನ ಪಡೆಯಲು ಧಾವಿಸಿದ್ದರು.

ಮಹಿಳೆಯರು, ವೃದ್ಧರು ಸೇರಿದಂತೆ ಹತ್ತಾರು ಭಕ್ತರನ್ನು ತುಂಬಿಕೊಂಡಿರುವ ಹಲವು ವಾಹನಗಳು ಸಹಸ್ರಲಿಂಗದತ್ತ ಪ್ರಯಾಣಿಸುತ್ತಿದ್ದವು. ಮುಖ್ಯರಸ್ತೆಯ ಬಳಿಯೇ ಕಾವಲು ನಿಂತಿದ್ದ ಪೊಲೀಸರು ಅವುಗಳನ್ನು ತಡೆದರು. ಸಹಸ್ರಲಿಂಗ ಕ್ರಾಸ್ ಮತ್ತು ಸೋಂದಾ ರಸ್ತೆ ಕಡೆಯಲ್ಲಿರುವ ತೂಗು ಸೇತುವೆ ಬಳಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆಚರಣೆಗೆ ಅವಕಾಶ ಸಿಗದ ಕಾರಣ ಭಕ್ತರು ಬೇಸರಗೊಂಡು ಮರಳಿದರು.

‘ಹಲವು ವರ್ಷಗಳಿಂದ ಪ್ರತಿ ಸಂಕ್ರಾಂತಿಗೆ ಸಹಸ್ರಲಿಂಗದಲ್ಲಿ ಪುಣ್ಯಸ್ನಾನ ಮಾಡುವ ವಾಡಿಕೆ ಇತ್ತು. ಈ ಬಾರಿ ಅದಕ್ಕೆ ಅವಕಾಶ ಸಿಗದಿರುವುದು ಬೇಸರ ತಂದಿದೆ. ಹಬ್ಬದ ಸಂಭ್ರಮಕ್ಕೆ ಕೋವಿಡ್ ನಿರ್ಬಂಧ ಅಡ್ಡಿಪಡಿಸಿದೆ’ ಎಂದು ಹಾವೇರಿ ಜಿಲ್ಲೆಯ ಸವಣೂರಿನ ಮಲ್ಲೇಶಪ್ಪ ಶಿಗದೇರ್ ಬೇಸರಿಸಿದರು.

‘ಭಕ್ತರ ಭಾವನೆಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ. ಸಾವಿರಾರು ಭಕ್ತರು ಸೇರಿದರೆ ಅವರನ್ನು ನಿಯಂತ್ರಿಸುವವು ಸವಾಲಾಗುತ್ತಿತ್ತು. ಕೋವಿಡ್ ನಿಯಮ ಪಾಲನೆ ಸಾಧ್ಯವಾಗದು ಎಂಬ ಕಾರಣಕ್ಕೆ ನಿರ್ಬಂಧ ವಿಧಿಸುವ ನಿರ್ಣಯ ಅನಿವಾರ್ಯವಾಯಿತು’ ಎಂದು ಭೈರುಂಬೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT