ಗೋಕರ್ಣ: ಆತ್ಮಲಿಂಗದ ದರ್ಶನ ಪಡೆದ ಭಕ್ತರು

ಭಾನುವಾರ, ಮಾರ್ಚ್ 24, 2019
28 °C
ಪ್ರತಿ ವರ್ಷಕ್ಕಿಂತ ಈ ಬಾರಿ ಕಡಿಮೆ ಜನದಟ್ಟಣೆ

ಗೋಕರ್ಣ: ಆತ್ಮಲಿಂಗದ ದರ್ಶನ ಪಡೆದ ಭಕ್ತರು

Published:
Updated:
Prajavani

ಗೋಕರ್ಣ: ಮಹಾಶಿವರಾತ್ರಿಯ ಅಂಗವಾಗಿ ಇಲ್ಲಿನ ಮಹಾಬಲೇಶ್ವರ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಸೋಮವಾರ ಭೇಟಿ ನೀಡಿದರು.  ಉತ್ಸಾಹದಿಂದ ಪೂಜೆಯಲ್ಲಿ ಭಾಗವಹಿಸಿ ಆತ್ಮಲಿಂಗದ ದರ್ಶನ ಪಡೆದರು.

ಸುತ್ತಮುತ್ತಲಿನ ಹಳ್ಳಿಯ ಜನರು ಮಧ್ಯರಾತ್ರಿಯಿಂದಲೇ ಮಹಾಗಣಪತಿ ಮತ್ತು ಮಹಾಬಲೇಶ್ವರನ ಪೂಜೆಗಾಗಿ ಸಾಲಿನಲ್ಲಿ ನಿಂತಿದ್ದರು. ಬೆಳಗಿನ ಜಾವ ಪೂಜೆ ಅರ್ಪಿಸಿದರು. ಭಕ್ತರು ರಾಮತೀರ್ಥ, ಕೋಟಿತೀರ್ಥ ಮತ್ತು ಸಮುದ್ರದಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದರು. ರಾಜ್ಯದಿಂದ, ಮಹಾರಾಷ್ಟ್ರ ಮತ್ತು ಗೋವಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ತುಂಬಾ ಕಡಿಮೆಯಿತ್ತು. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಕೋನರೆಡ್ಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.

ತಲೆತಲಾಂತರಗಳಿಂದ ಮಹಾಬಲೇಶ್ವರನ ಪೂಜೆಗೆ ಬರುವ ಹಿರಿಯರು ಮಾತ್ರ ಪ್ರತಿ ವರ್ಷ ಬರುತ್ತಿದ್ದಾರೆ. ಹೊಸ ತಲೆಮಾರಿನವರು ಸಾಲಿನಲ್ಲಿ ನಿಲ್ಲುವುದಾಗಲೀ ಉಳಿಯಲು ರೂಮಿಗೆ ಹೆಚ್ಚಿನ ಹಣ ಪಾವತಿ ಮಾಡಲು ಮುಂದಾಗುವುದಿಲ್ಲ. ಹಾಗಾಗಿ ಅವರು ಶಿವರಾತ್ರಿಗೆ ಬರಲು ಇಷ್ಟ ಪಡುವುದಿಲ್ಲ ಎಂದು ಗೋಕಾಕ್‌ನಿಂದ ಪ್ರತಿವರ್ಷ ಬರುವ ಭಕ್ತ ಬಸಪ್ಪ ಮಲ್ಲಪ್ಪ ಹಟ್ಟಿಗೌಡರ್ ಅಭಿಪ್ರಾಯಪಟ್ಟರು.

ಅನೇಕ ವಿದೇಶಿ ಭಕ್ತರು ಆತ್ಮಲಿಂಗದ ದರ್ಶನಕ್ಕೆ ಅವಕಾಶ ಸಿಗದೇ ನಿರಾಶರಾದರು. ಕೆಲವರು ಸಮುದ್ರದಲ್ಲಿ ಸ್ನಾನ ಮಾಡಿ ಮರಳಿನ ಲಿಂಗ ಮಾಡಿ ಪೂಜಿಸಿ ತಮ್ಮ ಭಕ್ತಿ ಪ್ರದರ್ಶಿಸಿದರು.

ಭಟ್ಕಳ ಡಿಎಸ್‌ಪಿ ವ್ಯಾಲಂಟಿನ್ ಡಿಸೋಜಾ, ಸಿಪಿಐ ಸಂತೋಷ ಶೆಟ್ಟಿ ಹಾಗೂ ಪಿಎಸ್‌ಐ ಸಂತೋಷಕುಮಾರ.ಎಂ ಭದ್ರತಾ ವ್ಯವಸ್ಥೆ ನೋಡಿಕೊಂಡಿದ್ದರು. ಸ್ಥಳೀಯ ಗ್ರಾಮಾಡಳಿತ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಕ್ರಮ ಕೈಗೊಂಡಿತು. ಸಮುದ್ರದಲ್ಲಿ ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚರಿಕೆಯಾಗಿ ಕರಾವಳಿ ಕಾವಲು ಪಡೆ ಬೆಳಿಗ್ಗೆನಿಂದಲೇ ಪಹರೆ ಏರ್ಪಡಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !