ಶುಕ್ರವಾರ, ಆಗಸ್ಟ್ 23, 2019
21 °C
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಪುರುಷೋತ್ತಮ ಬಿಳಿಮಲೆ

ಕೇಂದ್ರ ಸರ್ಕಾರದಿಂದ ಭಾಷಾ ಸೌಲಭ್ಯಕ್ಕೆ ಕತ್ತರಿ

Published:
Updated:
Prajavani

ಉಡುಪಿ: ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನೂತನ ಶಿಕ್ಷಣ ನೀತಿಯನ್ನು ಕೇವಲ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ಜಾರಿಗೊಳಿಸಲು ಮುಂದಾಗಿದೆ ಎಂದು ‌ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ಆರೋಪಿಸಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಭಾನುವಾರ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್‌.ಆರ್‌.ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಮುಂದಿನ 50 ರಿಂದ 70 ವರ್ಷಗಳವರೆಗೆ ದೇಶದ ಶಿಕ್ಷಣ ಪದ್ಧತಿಯನ್ನು ನಿಯಂತ್ರಿಸಲಿರುವ ಶಿಕ್ಷಣ ನೀತಿಯಲ್ಲಿ ಏನಿದೆ ಎಂಬುದನ್ನು ಪ್ರತಿಯೊಬ್ಬರೂ ಮಾತೃಭಾಷೆಯಲ್ಲಿ ತಿಳಿದುಕೊಳ್ಳುವ ಅವಕಾಶವೇ ಇಲ್ಲ. ಮಾತೃಭಾಷೆಗಳಿಗಿರುವ ಗೌರವ ಏನು ಎಂದು ಅವರು ಪ್ರಶ್ನಿಸಿದರು.

ರಾಜ್ಯ ಭಾಷೆಗಳ ಜವಾಬ್ದಾರಿ ಆಯಾ ರಾಜ್ಯಗಳದ್ದು ಎಂದು ನೂತನ ಶಿಕ್ಷಣ ನೀತಿ ಹೇಳುತ್ತದೆ. ಹಾಗಾದರೆ, ಹಿಂದಿ ಭಾಷೆಯ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ಯಾಕೆ ತೆಗೆದುಕೊಂಡಿದೆ. ಉತ್ತರ ಭಾರತ ರಾಜ್ಯಕ್ಕೆ ಬಿಡಬಹುದಲ್ಲವೇ ಎಂದು ಬಿಳಿಮಲೆ ಪ್ರಶ್ನಿಸಿದರು.

ರಾಜ್ಯ ಸರ್ಕಾರಗಳಿಗೆ ತನ್ನ ರಾಜ್ಯದ ಭಾಷೆಗಳ ಮೇಲೆ ಹಿಡಿತವಿಲ್ಲ. ಒಡಿಯಾ, ತಮಿಳು, ತೆಲುಗು ಸೇರಿದಂತೆ ಪ್ರಾದೇಶಕ ಭಾಷೆಗಳನ್ನು ಮಾತನಾಡುವ ರಾಜ್ಯಗಳೆಲ್ಲ ಒಟ್ಟಾಗಿ ಸಣ್ಣ ಭಾಷೆಗಳ ರಾಷ್ಟ್ರೀಯ ವೇದಿಕೆಯನ್ನು ರಚನೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಇದಕ್ಕೆ ನೆರವು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದರೆ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತುಳು ಬಗ್ಗೆ ನಿರ್ಲಕ್ಷ್ಯ: 2011ರ ಜನಗಣತಿಯಲ್ಲಿ 19,543 ಭಾಷೆಗಳನ್ನು ಪಟ್ಟಿಮಾಡಿಕೊಡಲಾಗಿತ್ತು. ಈಗ 4,500 ಭಾಷೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಸಂವಿಧಾನ ಅಂಗೀಕರಿಸಿದ್ದು 22 ಭಾಷೆಗಳನ್ನು ಮಾತ್ರ ಎಂದರು.

2007ರಲ್ಲಿ ಸೀತಾಕಾಂತ ಮಹಾಪಾತ್ರ ಸಮಿತಿಯು 39 ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಪಟ್ಟಿ ಸಿದ್ಧಪಡಿಸಿದೆ. ಈಗ ಅದರ ಜತೆಗೆ 99 ಭಾಷೆಗಳು ಪಟ್ಟಿಯಲ್ಲಿ ಸೇರಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ತುಳು ಭಾಷೆ 8ನೇ ಶೆಡ್ಯೂಲ್‌ಗೆ ಸೇರುವ ಸಾಧ್ಯತೆಗಳು ತೀರಾ ಕಡಿಮೆ ಇದೆ ಎಂದರು.

ಇಂದಿನ ಯುವಜನಾಂಗ ಪಡೆದುಕೊಳ್ಳುತ್ತಿರುವ ಜ್ಞಾನದಲ್ಲಿ ಭಾಷೆ ಹಾಗೂ ತತ್ವಶಾಸ್ತ್ರ ಸಾಯುತ್ತಿದೆ. ಈ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿಲ್ಲ. ಯಾವ ದೇಶ ತತ್ವಶಾಸ್ತ್ರ ಹಾಗೂ ತರ್ಕಶಾಸ್ತ್ರವನ್ನು ನಾಶ ಮಾಡುತ್ತದೆಯೋ, ಆ ದೇಶ ಅತ್ಯುತ್ತಮ ಮನುಷ್ಯರನ್ನು ಸೃಷ್ಟಿಸಲಾರದು ಎಂದು ಪುರಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಪ್ರಶಸ್ತಿ ಸಮಿತಿಯ ಸದಸ್ಯೆ, ಜಾನಪದ ವಿದ್ವಾಂಸೆ ಡಾ. ಇಂದಿರಾ ಹೆಗ್ಡೆ ಮಾತನಾಡಿ, ಸರ್ಕಾರ ಬದಲಾದಂತೆ ಅಕಾಡೆಮಿಗಳ ಪದಾಧಿಕಾರಿಗಳ ಅಧಿಕಾರ ಮೊಟಕುಗೊಳಿಸುವುದು ಸರಿಯಲ್ಲ. ಇದಕ್ಕೆ ನೇರವಾಗಿ ಬರಹಗಾರರು ಬಲಿಯಾಗುತ್ತಿದ್ದಾರೆ. ಹಾಗಾಗಿ ಅಕಾಡೆಮಿಯ ಪದಾಧಿಕಾರಿಗಳನ್ನು ಒಂದು ನಿರ್ಧಿಷ್ಟ ಅವಧಿಗೆ ನೇಮಕ ಮಾಡಬೇಕು. ಅಂತಹ ನಿಯಮ ಜಾರಿಗೊಳಿಸುವ ಅಗತ್ಯವಿದೆ. ಅದಕ್ಕೆ ಬರಹಗಾರರು ಒತ್ತಡ ಹಾಕಬೇಕು ಎಂದರು.

ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶ್‌ನ ಆಡಳಿತಾಧಿಕಾರಿ ಡಾ. ಎಚ್‌.ಶಾಂತಾರಾಮ್‌ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಪ್ರೊ. ಯದುಪತಿ ಗೌಡ, ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿದರು. ಪೃಥ್ವಿರಾಜ್‌ ಕವತ್ತಾರ್‌ ವಂದಿಸಿದರು. ವಿದ್ಯಾಲತಾ ಕಾರ್ಯಕ್ರಮ ನಿರೂಪಿಸಿದರು.

Post Comments (+)