ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟು ಆಧರಿಸಿ ಮೌಲ್ಯಮಾಪನ ಸಲ್ಲ

ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಕಿವಿಮಾತು
Last Updated 14 ಏಪ್ರಿಲ್ 2021, 15:07 IST
ಅಕ್ಷರ ಗಾತ್ರ

ಕಾರವಾರ: ‘ಯಾರನ್ನೂ ಕೂಡ ಅವರ ಹುಟ್ಟಿನ ಆಧಾರದಲ್ಲಿ ಮೌಲ್ಯಮಾಪನ ಮಾಡಬೇಡಿ. ಅರ್ಹವಾಗಿದ್ದಾಗ ಅವಕಾಶಗಳು ತಪ್ಪಿದರೆ ಸಂವಿಧಾನಾತ್ಮಕ ನೆಲೆಗಟ್ಟಿನಲ್ಲಿ ಪ್ರಶ್ನಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ. ಮುಂದಿನ ಏ.14ರ ವೇಳೆಗೆ ಈ ರೀತಿ ಮಾಡಿದ್ದೇವೆಯೇ ಎಂದು ಪರಾಮರ್ಶೆ ಮಾಡಿ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಲಾದ ಅಂಬೇಡ್ಕರ್ ಅವರ 130ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಮಾಜಿಕ ಸ್ಥಾನಮಾನ ಎಂಬುದು ವ್ಯಕ್ತಿಯ ಹುಟ್ಟಿನಿಂದ ಅಲ್ಲ. ಅವರ ಸಾಮರ್ಥ್ಯ, ಪ್ರತಿಭೆಯಿಂದ ಬರಬೇಕು. ಈ ನಿಟ್ಟಿನಲ್ಲಿ ಪೂರ್ವಗ್ರಹ ಭಾವನೆ ದೂರಮಾಡಿದರೆ ಮಾತ್ರ ಸಮಾಜದಲ್ಲಿ ಸಮಾನತೆ ನೆಲೆಸುತ್ತದೆ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಅಂಬೇಡ್ಕರ್‌ ಅವರನ್ನು ಹೋಲಿಕೆ ಮಾಡಬಹುದಾದ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಅವರ ಗುಣಮಟ್ಟಕ್ಕೆ ಸಮಾಜ ಬರಬೇಕು ಎಂಬ ಉದ್ದೇಶದಿಂದ ಜಯಂತ್ಯುತ್ಸವ ಆಚರಿಸಲಾಗುತ್ತದೆ’ ಎಂದು ಹೇಳಿದರು.

‘ಅಂಬೇಡ್ಕರ್ ಚಿಂತನೆ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತ’ ವಿಷಯವಾಗಿ ಉಪನ್ಯಾಸ ನೀಡಿದ ಸಾಗರದ ವಕೀಲ ರಾಘವೇಂದ್ರ ಮಾತನಾಡಿ, ‘ಯಾವುದೇ ವ್ಯಕ್ತಿಯ ಬಗ್ಗೆ ಆರಾಧನಾ ಮನೋಭಾವ ಬೆಳೆಸಿಕೊಂಡಾಗ ಪೂರ್ವಗ್ರಹ ಭಾವನೆ ಮೂಡುತ್ತದೆ. ಅಂಬೇಡ್ಕರ್ ತಮ್ಮ ಚಿಂತನೆಯನ್ನು ಅಧ್ಯಯನ ಮಾಡಿ ಎಂದರೇ ಹೊರತು ಆರಾಧಿಸಬೇಡಿ ಎಂದಿದ್ದರು. ಅವರೊಬ್ಬ ಕ್ರಾಂತಿಕಾರಿಯಾಗಿದ್ದರೂ, ದೊಡ್ಡ ಪ್ರಜಾಪ್ರಭುತ್ವ ವಾದಿಯಾಗಿದ್ದರು’ ಎಂದರು.

‘ಸಂಸ್ಥೆಗಳು ಮುಖ್ಯವೇ ಹೊರತು ವ್ಯಕ್ತಿಯಲ್ಲ. ವ್ಯಕ್ತಿ ಪೂಜೆ ಭಾರತಕ್ಕೆ ಅಪಾಯಕಾರಿ ಎಂದು ಹೇಳಿದ್ದರು. ರಾಜಕೀಯ ಕ್ಷೇತ್ರದಲ್ಲಿ ಭಕ್ತಿ ಬಂದರೆ ದೇಶವನ್ನು ಅಧೋಗತಿಗೆ ತಳ್ಳುತ್ತದೆ. ಇಂದಿನ ರಾಜಕೀಯವನ್ನು ನೋಡಿದರೆ ವ್ಯಕ್ತಿಗಳೇ ಕಾಣಿಸ್ತಿದಾರೆ. ರಾಷ್ಟ್ರದ ಒಟ್ಟೂ ಪರಿಕಲ್ಪನೆ ಸಾಕಾರಗೊಳ್ಳಲು ಜಾತಿ ವಿನಾಶ ಆಗಬೇಕು ಎಂದು ಅಂಬೇಡ್ಕರ್ ಆಶಿಸಿದ್ದರು. ಆದರೆ, ನಾವು ಆಧುನಿಕರಾದಷ್ಟೂ ಜಾತಿಯ ಕಬಂಧ ಬಾಹುಗಳು ವಿಸ್ತರಿಸುತ್ತಿವೆ. ಜಾತಿ ಬಹುತ್ವಕ್ಕೆ ಅಪಾಯಕಾರಿ’ ಎಂದು ಹೇಳಿದರು.

ಕಾರ್ಯಕ್ರಮ ನೇರಪ್ರಸಾರ:

ಕೊರೊನಾ ಕಾರಣದಿಂದಾಗಿ ಅಂಬೇಡ್ಕರ್ ಜಯಂತ್ಯುತ್ಸವದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿಲ್ಲ. ಆದರೆ, ಕಾರ್ಯಕ್ರಮ ಅರ್ಥಪೂರ್ಣವಾಗಲಿ ಎಂದ ಉದ್ದೇಶದಿಂದ ಇದೇ ಮೊದಲ ಬಾರಿಗೆ ಕಾರ್ಯಕ್ರಮದ ನೇರಪ್ರಸಾರವನ್ನು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ನಗರಸಭೆ ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಮುಖಂಡರಾದ ದೀಪಕ್ ಕುಡಾಲ್ಕರ್ ಮತ್ತು ಎಲಿಶಾ ಎಲಕಪಾಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT