ಬುಧವಾರ, ಸೆಪ್ಟೆಂಬರ್ 22, 2021
24 °C
₹ 1,500 ಕೋಟಿಯ ಯೋಜನೆ ಸಿದ್ಧ: ‘ಖಾರ್ಲ್ಯಾಂಡ್’ ಸಮೀಕ್ಷೆಗೆ ಚಾಲನೆ

‘ಸಿಹಿ, ಉಪ್ಪು ನೀರು ಬೇರ್ಪಡಿಸಲು ಒತ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಕರಾವಳಿಯಲ್ಲಿ ಉಪ್ಪು ನೀರು ಮತ್ತು ಸಿಹಿ ನೀರು ಪ್ರತ್ಯೇಕಿಸುವುದು ಖಾರ್ಲ್ಯಾಂಡ್‌ ಯೋಜನೆಯ ಉದ್ದೇಶವಾಗಿದೆ. ಏಳೆಂಟು ಕಿಲೋಮೀಟರ್‌ ಉದ್ದದ ಬೃಹತ್ ಬದುಗಳಿಗೆ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಲಾಗುವುದು’ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ತಾಲ್ಲೂಕಿನ ಹೊಟೆಗಾಳಿಯಲ್ಲಿ ‘ಖಾರ್ಲ್ಯಾಂಡ್ ಯೋಜನೆ’ಯ ಡ್ರೋನ್ ಸಮೀಕ್ಷೆ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದ ಬಳಿಕ ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಖಾರ್ಲ್ಯಾಂಡ್‌ಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ₹ 1,500 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದೆ. ಅದರಲ್ಲಿ ಉತ್ತರ ಕನ್ನಡದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹ 100 ಕೋಟಿಯಂತೆ ಹಂಚಿಕೆ ಮಾಡಲಾಗಿದೆ. ಸಿಹಿ ನೀರನ್ನು ಒಂದೆಡೆ ಸಂಗ್ರಹಿಸಿದರೆ ಕೃಷಿ ಮತ್ತು ಕುಡಿಯುವ ಸಲುವಾಗಿ ಬಳಕೆ ಮಾಡಬಹುದು’ ಎಂದು ಹೇಳಿದರು.

ಒತ್ತಡವಿರುತ್ತದೆ:

‘ಯೋಜನೆಯ ಕೆಲಸಗಳನ್ನು ಶೇ 100ರಷ್ಟು ತಾಂತ್ರಿಕ ನೆಲೆಯಲ್ಲೇ ಮಾಡಲಾಗುವುದಿಲ್ಲ. ಸ್ಥಳೀಯ ಶಾಸಕರು ಸೂಚಿಸಿದಲ್ಲಿ ಜಾರಿ ಮಾಡಬೇಕಾಗುತ್ತದೆ. ಅವರಿಂದ ಒತ್ತಡಗಳು ಇರುತ್ತವಲ್ಲ? ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಸಣ್ಣ ನೀರಾವರಿ ಇಲಾಖೆಯ ವಿವಿಧ ಕಾಮಗಾರಿಗಳು ನಿರ್ವಹಣೆಯಿಲ್ಲದೇ ಸೊರಗಿವೆ ಎಂಬ ದೂರುಗಳಿವೆ’ ಎಂದು ಸುದ್ದಿಗಾರರು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘10 ವರ್ಷಗಳ ಹಿಂದೆ ಆಗಿರುವ ಕಾಮಗಾರಿಗಳಿಗೆ ನಾನು ಜವಾಬ್ದಾರನಲ್ಲ. ಎಲ್ಲ ಕಾಮಗಾರಿಗಳನ್ನೂ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಖಾರ್ಲ್ಯಾಂಡ್‌ ಯೋಜನೆಯಡಿ ನಿರ್ಮಾಣವಾಗುವ ಬದುಗಳಿಗೆ ವಿಶೇಷ ನಿರ್ವಹಣೆ ಅಗತ್ಯವಿರುವುದಿಲ್ಲ. ಸಾಧ್ಯವಾದರೆ ಅದರ ಮೇಲೆ ವಾಹನಗಳ ಸಂಚಾರಕ್ಕೂ ಅನುಕೂಲ ಮಾಡಿಕೊಡುವಂತೆ ಸಲಹೆ ನೀಡಿದ್ದೇನೆ’ ಎಂದು ಹೇಳಿದರು.

‘ರಕ್ಷಣೆ ನಮ್ಮ ಕರ್ತವ್ಯ’: ‘ಮಹಿಳೆಯರು ಒಂಟಿಯಾಗಿ ಹೆಚ್ಚು ಸಂಚರಿಸುವ, ಬಸ್‌ಗಳಿಗೆ ಕಾಯುವ ಸ್ಥಳಗಳನ್ನು ಪೊಲೀಸರು ತಮ್ಮ ಕಚೇರಿಯಿಂದಲೇ ಗಮನಿಸುವಂಥ ಡಿಜಿಟಲ್ ವ್ಯವಸ್ಥೆಯೊಂದನ್ನು ಆರೇಳು ತಿಂಗಳ ಹಿಂದೆ ಜಾರಿ ಮಾಡಲಾಗಿದೆ. ಬೆಂಗಳೂರು, ತುಮಕೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರೂ ಆಗಿರುವ ಮಾಧುಸ್ವಾಮಿ ಹೇಳಿದರು.

‘ಅದನ್ನು ಹೊರತಾದ ಪ್ರದೇಶಗಳಲ್ಲಿ ಏನಾಗುತ್ತದೆ ಎಂದು ಊಹಿಸುವುದು ಕಷ್ಟ. ಮೈಸೂರು ಘಟನೆಯ ಬಳಿಕ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ, ಪೊಲೀಸ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ. ಸರ್ಕಾರವು ಮಹಿಳೆಯರ ಸುರಕ್ಷತೆ ಬಗ್ಗೆ ತುಂಬ ಗಂಭೀರವಾಗಿದೆ. ಅವರಿಗೆ ರಕ್ಷಣೆ ಕೊಡಬೇಕಿರುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ್ ನಿಶ್ಚಲ್ ನರೋನಾ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.

-----

* ಪ್ರವಾಹದಿಂದ ಆಗಿರುವ ಹಾನಿಯ ದುರಸ್ತಿಗೆ ಅಧಿಕಾರಿಗಳು ಪ್ರಸ್ತಾವ ಕಳುಹಿಸಿದ್ದಾರೆ. ಅದನ್ನು ಪರಿಶೀಲನೆ ಮಾಡಿದ್ದು, ಅನುದಾನ ಮಂಜೂರಿಗೆ ಪ್ರಯತ್ನಿಸಲಾಗುವುದು.

- ಜೆ.ಸಿ. ಮಾಧುಸ್ವಾಮಿ, ಸಣ್ಣ ನೀರಾವರಿ ಇಲಾಖೆ ಸಚಿವ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.