ಸೋಮವಾರ, ಆಗಸ್ಟ್ 2, 2021
21 °C
ಶಿಕ್ಷಕರ, ಅಧಿಕಾರಿಗಳ ಸಂಪರ್ಕಕ್ಕೆ ಬಾರದ ಸಾವಿರಾರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು

ಮಕ್ಕಳ ಮಾಹಿತಿ ಸಂಗ್ರಹವೇ ಸವಾಲು!

ಸ‌ದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದ್ದು, ವಿದ್ಯಾರ್ಥಿಗಳನ್ನು ಸಂಪರ್ಕಿಸುವುದು ಶಿಕ್ಷಕರಿಗೆ, ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಕೋವಿಡ್ ಕಾರಣದಿಂದ ಜಾರಿ ಮಾಡಲಾಗಿರುವ ಹೊಸ ಪರೀಕ್ಷಾ ಪದ್ಧತಿಯ ಅರಿವು ಮೂಡಿಸಲು ಪರದಾಡುವಂತಾಗಿದೆ.

ಉತ್ತರ ಕನ್ನಡದ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಂದ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಪಾಲಕರು ಕೂಲಿ ಕೆಲಸ, ಸ್ವ ಉದ್ಯೋಗ ಮಾಡುತ್ತಿರುವುದು ಕಲಿಕೆಗೆ ಪೂರಕವಾದ ಅವಕಾಶ ಕಲ್ಪಿಸಿದೆ. ಕಳೆದ ಬಾರಿಯ ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಊರುಗಳಿಗೆ ತೆರಳಿದ್ದ ವಿದ್ಯಾರ್ಥಿಗಳಲ್ಲಿ ಹಲವರು ಮರಳಿ ಬಂದಿಲ್ಲ.

ಉತ್ತರ ಕನ್ನಡದ ಶಾಲೆಗಳಲ್ಲಿ ಮುಂದಿನ ತರಗತಿಗಳಿಗೆ ದಾಖಲಾತಿ ಮಾಡಿಸಿಕೊಳ್ಳದ ವಿದ್ಯಾರ್ಥಿಗಳ ಮಾಹಿತಿಗಳನ್ನು ಅವರ ತವರು ಜಿಲ್ಲೆಗಳ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿತ್ತು. ಆದರೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 158 ಮಕ್ಕಳ ಮಾಹಿತಿ ಸಿಕ್ಕಿರಲಿಲ್ಲ. ಇದರ ಪರಿಶೀಲನೆಗೆ ಮುಂದಾದ ಅಧಿಕಾರಿಗಳು, ಶಿಕ್ಷಕರನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ನೀಡಿದ್ದ ವಿಳಾಸಕ್ಕೇ ಕಳುಹಿಸಿ ಸಮೀಕ್ಷೆ ಕೈಗೊಂಡಿದ್ದಾರೆ. ಸದ್ಯ 83 ಮಕ್ಕಳ ಮಾಹಿತಿ ಸಿಗಬೇಕಿದೆ. 

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ 20ರಷ್ಟು ಮಕ್ಕಳ ಬಗ್ಗೆ ತಿಳಿದು ಬರಬೇಕಿದ್ದು, ಹೆಚ್ಚಿನವರ ಸಮೀಪದ ಹಾವೇರಿ ಜಿಲ್ಲೆಯವರು. ಹಾನಗಲ್, ಹಿರೇಕೆರೂರು, ಹಾವೇರಿ ತಾಲ್ಲೂಕುಗಳಿಂದ ಗಡಿಭಾಗದ ಬನವಾಸಿ, ದಾಸನಕೊಪ್ಪ ಮುಂತಾದ ಶಾಲೆಗಳಿಗೆ  ವಿದ್ಯಾರ್ಥಿಗಳು ಬರುತ್ತಿದ್ದರು. ಪರೀಕ್ಷೆಗೆ ಅವರ ಹಾಜರಾತಿ ಖಚಿತ ಪಡಿಸಿಕೊಳ್ಳುವುದು ಹೇಗೆ ಎಂಬುದೇ ಶಿಕ್ಷಕರಿಗೆ ಪ್ರಶ್ನೆಯಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮುಂದಿನ ಜೀವನಕ್ಕೆ ಅತ್ಯಂತ ಮಹತ್ವದ ಹಂತವಾಗಿದೆ. ವಿವಿಧ ದಾಖಲೆಗಳಿಗೆ, ನೇಮಕಾತಿಗಳಿಗೆ ಈ ಅಂಕಪಟ್ಟಿಯನ್ನೇ ಶಿಫಾರಸು ಮಾಡಲಾಗುತ್ತದೆ. ಕೊರೊನಾ ಕಾರಣದಿಂದ ಬದಲಾದ ಪರೀಕ್ಷಾ ಪದ್ಧತಿಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನೂ ಗ್ರೇಡ್ ಮೂಲಕ ಉತ್ತೀರ್ಣಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಆದ್ದರಿಂದ, ಎಲ್ಲರೂ ಹಾಜರಾಗಬಹುದು ಎಂಬುದು ಅಧಿಕಾರಿಗಳ ವಿಶ್ವಾಸವಾಗಿದೆ.

ನೆಟ್‌ವರ್ಕ್ ಸಮಸ್ಯೆಯೂ ಕಾರಣ:

ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಉತ್ತರ ಕನ್ನಡದ ಹಲವು ಊರುಗಳಲ್ಲಿ ಒಂಟಿ ಮನೆಗಳಿವೆ. ಇಲ್ಲಿ ಮೊಬೈಲ್ ನೆಟ್‌ವರ್ಕ್ ತಲುಪುವುದಿಲ್ಲ. ಜೊಯಿಡಾ, ಹಳಿಯಾಳ, ಯಲ್ಲಾಪುರ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಈ ಸಮಸ್ಯೆಯಿದೆ. ಹಾಗಾಗಿ ಶಿಕ್ಷಕರು ಮನೆಗಳಿಗೆ ತೆರಳಿ ಸಮೀಕ್ಷೆ ಮಾಡುವಾಗ ವಿದ್ಯಾರ್ಥಿಗಳ ಮಾಹಿತಿ ಸಿಗುವ ಸಾಧ್ಯತೆಯಿದೆ.

‘ಮಕ್ಕಳ ಮಾಹಿತಿ ಸಿಗದಿರಲು ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಕೂಡ ಪ್ರಮುಖ ಕಾರಣವಾಗಿದೆ. ಮತ್ತೊಂದಷ್ಟು ಮಕ್ಕಳು ಪಾಲಕರ ಜೊತೆ ಬೇರೆ ಜಿಲ್ಲೆಗಳಿಗೆ ಹೋಗಿದ್ದಾರೆ. ಪ್ರಮಾಣಪತ್ರ ಪಡೆಯುವ ಸಲುವಾಗಿಯಾದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶೇ 100 ಹಾಜರಾತಿ ಇರುವ ನಿರೀಕ್ಷೆಯಿದೆ’ ಎನ್ನುತ್ತಾರೆ ಅಧಿಕಾರಿಗಳು.

–––––––

* ಬದಲಾದ ಪರೀಕ್ಷಾ ಪದ್ಧತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕಿದೆ. ಹಾಗಾಗಿ ಸಂಪರ್ಕಕ್ಕೆ ಬಾರದ ವಿದ್ಯಾರ್ಥಿಗಳ ಮನೆಗಳಿಗೇ ಶಿಕ್ಷಕರನ್ನು ಕಳುಹಿಸಿಕೊಡಲಾಗುತ್ತಿದೆ.

– ಹರೀಶ ಗಾಂವ್ಕರ್, ಉಪ ನಿರ್ದೇಶಕ, ಕಾರವಾರ ಶೈಕ್ಷಣಿಕ ಜಿಲ್ಲೆ.

* ಸುಮಾರು ಎರಡು ಸಾವಿರ ವಿದ್ಯಾರ್ಥಿಗಳ ಮಾಹಿತಿ ಲಭಿಸಬೇಕಿದೆ. ಅವರ ಗೆಳೆಯರು, ಸಮೀಪದ ಮನೆಯವರು, ಸಂಬಂಧಿಕರ ಮೂಲಕ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ.

– ದಿವಾಕರ ಶೆಟ್ಟಿ, ಉಪ ನಿರ್ದೇಶಕ, ಶಿರಸಿ ಶೈಕ್ಷಣಿಕ ಜಿಲ್ಲೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು