ಭಾನುವಾರ, ಜೂನ್ 13, 2021
22 °C
ಹಬ್ಬದ ಸಂಭ್ರಮಕ್ಕೆ ಈ ಬಾರಿಯೂ ಕೊರೊನಾ ಅಡ್ಡಿ: ಮನೆಗಳಲ್ಲೇ ಆಚರಣೆ

ಮಾನವ ಪ್ರೇಮ ಸಾರುವ ‘ರಂಜಾನ್’

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಪರಸ್ಪರ ಪ್ರೇಮ, ಮಾನವ ಸಮಾನತೆಯನ್ನು ಸಾರುವ ಹಬ್ಬ ಈದ್ ಉಲ್ ಫಿತ್ರ್. ‘ರಂಜಾನ್’ ಹಬ್ಬ ಎಂದೇ ಕರೆಯಲಾಗುವ ವಿಶೇಷ ದಿನಕ್ಕೆ ಈ ಬಾರಿಯೂ ಕೊರೊನಾ ಅಡ್ಡಿಯಾಗಿದೆ. ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ಬದಲು ಮನೆಗಳಲ್ಲೇ ಹಬ್ಬದಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಏಪ್ರಿಲ್ 14ರಂದು ಆರಂಭವಾದ ರಂಜಾನ್ ಉಪವಾಸವು ಮೇ 13ರಂದು ಮುಕ್ತಾಯಗೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುರುವಾರವೇ ಹಬ್ಬವನ್ನು ಆಚರಿಸಲಾಗಿದೆ. ಉತ್ತರ ಕನ್ನಡವೂ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಮೇ 14ರಂದು ನಿಗದಿಯಾಗಿದೆ.

ಕೊರೊನಾ ಕಾರಣದಿಂದ ಲಾಕ್‌ಡೌನ್ ಜಾರಿಯಲ್ಲಿದ್ದು, ಯಾರಿಗೂ ಗುಂಪುಗೂಡಲು ಅವಕಾಶವಿಲ್ಲ. ಹಾಗಾಗಿ ಈ ಬಾರಿ ಕೂಡ ಕಳೆದ ವರ್ಷದಂತೆ ಮಸೀದಿಗಳಲ್ಲಿ ಐವರಿಂದ ಮಾತ್ರ ಪ್ರಾರ್ಥನೆಯಿರುತ್ತದೆ. ಒಂದು ತಿಂಗಳು ಪೂರ್ತಿ ಇದೇ ರೀತಿ ಪ್ರಾರ್ಥನೆ ಮಾಡಲಾಗಿದೆ. ಅದೇ ಸಮಯಕ್ಕೆ ಮುಸ್ಲಿಂ ಧರ್ಮೀಯರು ತಮ್ಮ ಮನೆಗಳಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಬಳಿಕ ಉಪವಾಸ ಅಂತ್ಯಗೊಳಿಸಿ ಮನೆ ಮಂದಿಯೊಂದಿಗೆ ಸೇರಿ ಫಲಾಹಾರ ಸೇವಿಸುತ್ತಾರೆ. 

ಪವಿತ್ರ ರಂಜಾನ್ ಮಾಸದ 29ನೇ ದಿನದಂದು ಚಂದ್ರ ಕಾಣಿಸಿಕೊಂಡರೆ ಮರುದಿನ ಉಪವಾಸ ಅಂತ್ಯವಾಗುತ್ತದೆ. ಒಂದುವೇಳೆ ಕಾಣದಿದ್ದರೆ 30ನೇ ದಿನಕ್ಕೆ ಈದ್ ಉಲ್ ಫಿತ್ರ್ ಆಚರಿಸಲಾಗುತ್ತದೆ ಎಂದು ಧರ್ಮಗುರು ಕಲೀಂ ಮೌಲಾನಾ ಹೇಳುತ್ತಾರೆ.

ಹಬ್ಬದ ಸಂದರ್ಭದಲ್ಲಿ ಪ್ರಾರ್ಥನೆಯ ಬಳಿಕ ಮಸೀದಿ ಆವರಣದಲ್ಲಿ ಸೇರಿದವರೆಲ್ಲ ಹೊಸ ಬಟ್ಟೆ ಧರಿಸಿ, ಸುಗಂಧ ದ್ರವ್ಯ ಸೂಸಿ ಪರಸ್ಪರ ಆಲಂಗಿಸಿ ಶುಭಾಶಯ ಹೇಳುತ್ತಾರೆ. ಆದರೆ, ಈ ಬಾರಿ ಕೊರೊನಾ ಇದಕ್ಕೆ ತಡೆಯೊಡ್ಡಿದ್ದು, ಹಬ್ಬದ ಸಂಭ್ರಮ ಮನೆಗಳಿಗೇ ಸೀಮಿತವಾಗಲಿದೆ.

‘ಕವಿದ ಕತ್ತಲೆ ದೂರವಾಗಲಿ’

‘ಹಬ್ಬದ ಮುಖ್ಯ ಭಾಗವಾಗಿರುವ ಬಡವರಿಗೆ ದಾನ ಮಾಡುವುದಕ್ಕೆ ಕೊರೊನಾ ಅಡ್ಡಿಯಾಗಿಲ್ಲ. ತಮ್ಮ ಮನೆಗಳ ಸುತ್ತ ಇರುವ ಬಡವರನ್ನೇ ಗುರುತಿಸಿ ಅವರಿಗೆ ಕೈಲಾದ ಸಹಾಯ ಮಾಡಿದ್ದಾರೆ. ಮಸೀದಿಗಳ ಬಳಿ ಅಲ್ಲದಿದ್ದರೂ ಅವರವರ ಮನೆಗಳ ಬಳಿ ಮುಂದುವರಿಸಲಾಗಿದೆ’ ಎನ್ನುತ್ತಾರೆ ಕಾರವಾರದ ಕಾಜುಬಾಗದ ಗಫೂರಿ ಜಾಮಿಯಾ ಮಸೀದಿಯ ಧರ್ಮಗುರು ಕಲೀಂ ಮೌಲಾನಾ.

‘ಪ್ರತಿ ವರ್ಷ ರಂಜಾನ್ ಹಬ್ಬ ಪ್ರಾರ್ಥನೆಯಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ. ಈ ಬಾರಿ ಕೊರೊನಾ ವೈರಸ್ ಬಹಳ ಕಾಡುತ್ತಿದೆ. ಆ ದುರಿತದಿಂದ ದೂರು ಮಾಡುವಂತೆ ಅಲ್ಲಾಹುವಿಗೆ ಪ್ರಾರ್ಥಿಸಲಿದ್ದೇವೆ’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು