ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಮತ್ತೆ ಎಂಟು ಮಂದಿಗೆ ಕೋವಿಡ್ ದೃಢ: ಭಟ್ಕಳದಲ್ಲಿ ಸೋಂಕಿತರ ಸಂಖ್ಯೆ 32

ಸಣ್ಣ ಮಕ್ಕಳು, ಹಿರಿಯರಿಗೆ ಖಚಿತವಾದ ಸೋಂಕು
Last Updated 9 ಮೇ 2020, 14:30 IST
ಅಕ್ಷರ ಗಾತ್ರ

ಕಾರವಾರ: ಭಟ್ಕಳದಲ್ಲಿ ಕೋವಿಡ್ 19ನ ಎಂಟು ಪ್ರಕರಣಗಳು ಶನಿವಾರ ದೃಢಪಟ್ಟಿವೆ. ಅವರಲ್ಲಿ 1.5 ವರ್ಷದ ಗಂಡುಮಗು ಹಾಗೂ ಎರಡೂವರೆವರ್ಷದ ಹೆಣ್ಣುಮಗುಇದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 21ಕ್ಕೇರಿದ್ದು, ಒಟ್ಟು ಸೋಂಕಿತರ ಸಂಖ್ಯೆ 32 ಆಗಿದೆ. ಹೊಸದಾಗಿ ದೃಢಪಟ್ಟಿರುವ ಪ್ರಕರಣಗಳಲ್ಲಿ 68 ಮತ್ತು 65 ವರ್ಷದ ಇಬ್ಬರು ವೃದ್ಧರೂ ಒಳಗೊಂಡಿದ್ದಾರೆ. ಎಂಟು ಮಂದಿಯ ಪೈಕಿ ಆರು ಮಂದಿ ರೋಗಿ ಸಂಖ್ಯೆ 659ರ ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ. 68 ವರ್ಷದಹಿರಿಯ ವ್ಯಕ್ತಿಯು740ನೇ ಸಂಖ್ಯೆಯ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಅಂತೆಯೇ 32 ವರ್ಷದ ಮಹಿಳೆಯು 791ನೇ ಸೋಂಕಿತೆಯಾಗಿದ್ದು, ಅವರು 750ನೇ ಸಂಖ್ಯೆಯ ರೋಗಿಯ ಸಂಪರ್ಕಕ್ಕೆ ಬಂದಿದ್ದರು.

ಭಟ್ಕಳದಲ್ಲಿ ಶುಕ್ರವಾರ ಒಂದೇ ದಿನ 12 ಮಂದಿಗೆ ಕೋವಿಡ್ 19 ದೃಢಪಟ್ಟಿತ್ತು. ಎಲ್ಲರನ್ನೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೊರೊನಾ ವಾರ್ಡ್‌ಗೆ ಕರೆದುಕೊಂಡು ಬರಲಾಗಿದ್ದು, ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಶನಿವಾರ ದೃಢಪಟ್ಟಿರುವ ಪ್ರಕರಣಗಳಲ್ಲಿ ಒಬ್ಬರು ಆರು ಮಂದಿ ಒಂದೇ ಕುಟುಂಬದವರು. ಮತ್ತೊಬ್ಬರು ಆ ಮನೆಯ ಯುವತಿಯ (ರೋಗಿ ಸಂಖ್ಯೆ 659) ಗೆಳತಿಯ ತಂದೆಯಾಗಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲೂ ಸೋಂಕಿತರ ಜತೆ ನೇರ ಸಂಪರ್ಕಕ್ಕೆ ಬಂದವರಿಗೇ ಕೋವಿಡ್ ದೃಢಪಟ್ಟಿದೆ. ಹಾಗಾಗಿ ಜನರಿಗೆ ಯಾವುದೇ ಆತಂಕ ಬೇಡ’ ಎಂದು ಹೇಳಿದರು.

‘ಈ ರೋಗಿಗಳ ಜೊತೆ ನೇರ ಸಂಪರ್ಕಕ್ಕೆ ಬಂದವರನ್ನು ಆದಷ್ಟು ಬೇಗ ಗುರುತಿಸಬೇಕಿದೆ.ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರ ಹೊರತಾಗಿ ಮತ್ಯಾರಿಗೂ ಕೋವಿಡ್ 19 ದೃಢಪಟ್ಟಿಲ್ಲ. ಹಾಗಾಗಿ ಸೋಂಕಿತರ ಸಂಖ್ಯೆ ಏರಿಕೆಯಾದ ಬಗ್ಗೆ ಜಿಲ್ಲೆಯ ಜನರು ಗಾಬರಿಯಾಗುವ ಅಗತ್ಯವಿಲ್ಲ’ ಎಂದು ತಿಳಿಸಿದರು.

‘ಈ ರೋಗಿಗಳ ಜತೆಗೆ ಸಂಪರ್ಕಕ್ಕೆ ಬಂದವರು ಮಾಹಿತಿ ಕೊಡಬೇಕು. ಒಂದುವೇಳೆ, ಹೇಳದೇ ಇದ್ದರೆ, ಆರೋಗ್ಯ ತಪಾಸಣೆಗೆ ಸಹಕರಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಭಟ್ಕಳ ಪಟ್ಟಣದಲ್ಲಿ ಜನರ ಓಡಾಟ ತಡೆಯಲು ಪ್ರತ್ಯೇಕ ವಲಯಗಳನ್ನು ರಚಿಸಲಾಗಿದೆ. ರಸ್ತೆಗಳನ್ನು ಬ್ಯಾರಿಕೇಡ್ ಅಳವಡಿಸಿ ಮುಚ್ಚಲಾಗಿದ್ದು,ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಪಟ್ಟಣದಲ್ಲಿ ಮೆಡಿಕಲ್‌ಗಳೂ ಸೇರಿದಂತೆ ಎಲ್ಲ ಚಟುವಟಿಕೆಗಳನ್ನೂ ಮುಚ್ಚಲಾಗಿದೆ. ಪಾಸ್‌ಗಳನ್ನು ರದ್ದು ಮಾಡಲಾಗಿದ್ದು, ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಕೊರೊನಾ ವಾರ್ಡ್ ಹತ್ತಿರ ಬರುವವರನ್ನು ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ವೈದ್ಯಕೀಯ ಸಿಬ್ಬಂದಿಯೇ ಪರಿಶೀಲಿಸಬೇಕು. ಅಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕಾಂಪೌಂಡ್‌ಗೆ ಶೀಟ್ ಅಳವಡಿಕೆ:‘ಸೋಂಕಿತರ ಜೊತೆ ನಿತ್ಯವೂ ಎರಡು ಸಲ ವಿಡಿಯೊ ಸಂವಾದ ನಡೆಸಲಾಗುತ್ತದೆ. ರಂಜಾನ್ ರೋಜಾವಿದೆ ಎಂದು ಔಷಧಿ ತೆಗೆದುಕೊಳ್ಳದಿರುವುದು ಸರಿಯಲ್ಲ. ಈ ಬಗ್ಗೆ ಸೋಂಕಿತರಿಗೆ ಮನವರಿಕೆ ಮಾಡಲಾಗಿದ್ದು, ಅವರೂ ಒಪ್ಪಿಕೊಂಡಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದರು.

‘ವಾರ್ಡ್‌ ಬಳಿ ಎರಡು ಸಿ.ಸಿ.ಟಿ.ವಿ ಕ್ಯಾಮೆರಾಗಳು, ಹೆಚ್ಚು ಬೆಳಕುಸೂಸುವಎರಡು ಲೈಟ್‌ಗಳನ್ನು ಅಳವಡಿಸಲಾಗುತ್ತದೆ. ಇಡೀ ಕಂಪೌಂಡ್‌ಗೆ ಶೀಟ್‌ಗಳನ್ನುಹೊದಿಸಿ ಮುಚ್ಚಲಾಗುತ್ತದೆ. ರಾತ್ರಿ ಯಾರೂ ಸಂಚರಿಸದಂತೆ ಪೊಲೀಸ್ ಭದ್ರತೆ ನೀಡಲಾಗುತ್ತದೆ’ ಎಂದು ಹೇಳಿದರು.

‘ಸೋಂಕಿತರ, ವೈದ್ಯಕೀಯ ಸಿಬ್ಬಂದಿಯ ಪಿ.ಪಿ.ಇ,ಕೈಗವಸು, ಮುಖಗವಸನ್ನು ವಾರ್ಡ್‌ನಿಂದ ಹೊರಗೆ ತಾರದೇ ಅಲ್ಲೇ ವಿಲೇವಾರಿ ಮಾಡಲು ವ್ಯವಸ್ಥೆ ರೂಪಿಸಲಾಗಿದೆ. ಕಿಟಕಿಗಳ ಕೆಳಭಾಗವನ್ನು ಮುಚ್ಚಲಾಗಿದ್ದು, ಎಕ್ಸಾಸ್ಟ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ’ ಎಂದೂ ಮಾಹಿತಿ ನೀಡಿದರು.

ಏಳು ಕೋವಿಡ್ ಸೋಂಕಿತರು

ರೋಗಿ ಸಂಖ್ಯೆ; ವಯಸ್ಸು ;ಲಿಂಗ ;ಸೋಂಕಿನ ಮೂಲ

780;2.6;ಹೆಣ್ಣು;659ನೇ ರೋಗಿಯ ದ್ವಿತೀಯ ಸಂಪರ್ಕ

781;65;ಗಂಡು;659ನೇ ರೋಗಿಯ ದ್ವಿತೀಯ ಸಂಪರ್ಕ

782;50;ಹೆಣ್ಣು;659ನೇ ರೋಗಿಯ ದ್ವಿತೀಯ ಸಂಪರ್ಕ

783;68;ಗಂಡು;740ನೇರೋಗಿಯ ಪ್ರಾಥಮಿಕ ಸಂಪರ್ಕ

784;1.5;ಗಂಡು;659ನೇ ರೋಗಿಯ ದ್ವಿತೀಯ ಸಂಪರ್ಕ

785;17;ಹೆಣ್ಣು;659ನೇ ರೋಗಿಯ ದ್ವಿತೀಯ ಸಂಪರ್ಕ

786;23;ಹೆಣ್ಣು;659ನೇ ರೋಗಿಯ ದ್ವಿತೀಯ ಸಂಪರ್ಕ

791;32;ಹೆಣ್ಣು;750ನೇ ರೋಗಿಯ ಪ್ರಾಥಮಿಕ ಸಂಪರ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT