ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಭೀತಿ: ಚಾವಣಿಯಲ್ಲಿ ಭತ್ತದ ಮಡಿ!

ಕಾರವಾರ ತಾಲ್ಲೂಕಿನ ಖಾರ್ಗಾ, ವೈಲವಾಡ ಸುತ್ತಮುತ್ತ ಟ್ರೇಗಳಲ್ಲಿ ಸಸಿ ಪಾಲನೆ
Last Updated 10 ಜುಲೈ 2022, 21:30 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕದ್ರಾ ಜಲಾಶಯದ ಕೆಳಭಾಗದಲ್ಲಿ ಮೂರು ವರ್ಷಗಳಿಂದ ಉಂಟಾಗುತ್ತಿರುವ ನೆರೆಯು, ಇಲ್ಲಿನ ಬೇಸಾಯದ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಹೊಲದಲ್ಲಿದ್ದ ಭತ್ತದ ಮಡಿಯು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಬಳಿಕ ನೆಡಲು ಸಸಿಗಳೇ ಇಲ್ಲದಂತಾಗುತ್ತದೆ. ಹಾಗಾಗಿ ಈ ಬಾರಿ ಕೆಲವು ರೈತರು ವಿಭಿನ್ನವಾಗಿ ಯೋಚಿಸಿ, ಕಾಂಕ್ರೀಟ್ ಮನೆಯ ಮೇಲೆ ಮಡಿ ಸಿದ್ಧಪಡಿಸಿದ್ದಾರೆ.

ಖಾರ್ಗಾ, ವೈಲವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿ ವರ್ಷ ಮುಂಗಾರಿನ ಹಂಗಾಮಿನಲ್ಲಿ ಮಾತ್ರ ಬೇಸಾಯ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಉಪ್ಪು ನೀರಿನ ಸಮಸ್ಯೆ ಹಾಗೂ ನೀರಿನ ಕೊರತೆಯ ಕಾರಣದಿಂದ ಭತ್ತದ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ.

ಮಳೆಗಾಲ ಕಷ್ಟಪಟ್ಟು ವ್ಯವಸಾಯಕ್ಕೆ ಸಿದ್ಧತೆ ಮಾಡಿಕೊಂಡರೂ ಮೂರು ವರ್ಷಗಳಿಂದ ಪ್ರವಾಹ ಕಾಣಿಸಿಕೊಳ್ಳುತ್ತಿದೆ. ಭತ್ತದ ಮಡಿಯು ನೀರು ಪಾಲಾಗುವ ಕಾರಣ, ನೆರೆ ಇಳಿದ ನಂತರವೂ ನಾಟಿ ಮಾಡಲು ಸಾಧ್ಯವಿಲ್ಲದಂತಾಗುತ್ತದೆ. ಜೊತೆಗೇ ಬಿತ್ತನೆ ಮಾಡಿ ಬೀಜವನ್ನು ತಿನ್ನಲು ಬರುವ ನವಿಲು, ಕಾಡು ಹಂದಿಗಳನ್ನೂ ನಿಯಂತ್ರಿಸಲು ಸಾಧ್ಯವಾಗಿದೆ.

ಈ ಹಿಂದಿನ ಇಂಥ ಕಹಿ ಅನುಭವಗಳಿಂದ ಕೆಲವರು, ಭತ್ತದ ಮಡಿ ಮಾಡುವ ಪದ್ಧತಿಯನ್ನು ಬದಲಿಸಿಕೊಂಡಿದ್ದಾರೆ. ಭತ್ತದ ಬೀಜಗಳನ್ನು ಟ್ರೇಯಲ್ಲಿ ಬಿತ್ತನೆ ಮಾಡಿ ಬೆಳೆಸುತ್ತಿದ್ದಾರೆ. ಪ್ರತಿ ಟ್ರೇಯನ್ನು ₹ 12.50ರಂತೆ ಖರೀದಿಸಿ ತಂದಿರುವ ರೈತರು, ಎಲ್ಲಿದ್ದರೆ ಸುರಕ್ಷಿತ ಎನಿಸುತ್ತದೋ ಅಲ್ಲಿ ಮಡಿ ಮಾಡಿಕೊಂಡಿದ್ದಾರೆ.

‘ಈ ಬಾರಿ ಭತ್ತದ ಕೃಷಿ ಮಾಡುವ ಮೊದಲು, ಹಿಂದಿನ ಮಳೆಗಾಲಗಳಲ್ಲಿ ಪ್ರವಾಹದಿಂದಾಗಿ ಆಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದೆವು. ಗದ್ದೆಯ ಸಮೀಪ ಎತ್ತರದಲ್ಲಿ ಮನೆಯ ಟೆರೇಸ್‌ನಲ್ಲಿ ಮಡಿ ಮಾಡಲು ನಿರ್ಧರಿಸಿದೆವು’ ಎಂದು ಖಾರ್ಗಾದ ಕೃಷಿಕ ರವಿಕಾಂತ ಸಾವಂತ ವಿವರಿಸುತ್ತಾರೆ.

ಸ್ಥಳೀಯ ನಿವಾಸಿಯಾಗಿರುವ ನಿವೃತ್ತ ಎ.ಎಸ್.ಐ ಪ್ರಭಾಕರ ಸಾವಂತ ಕೂಡ ಪೂರ್ಣ ಪ್ರಮಾಣದಲ್ಲಿ ಕೃಷಿ ಮಾಡುತ್ತಿದ್ದಾರೆ. ಅವರು ತಮ್ಮ ಮನೆಯಂಗಳದಲ್ಲೇ ಸಸಿಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.

‘ನಾನು ಸುಮಾರು ಎರಡೂವರೆ ಎಕರೆ ಗದ್ದೆಯಲ್ಲಿ ಬೇಸಾಯ ಮಾಡುತ್ತಿದ್ದೇನೆ. ಹಿಂದಿನ ವರ್ಷಗಳಲ್ಲಿ ಕಾಳಿ ನದಿಯ ನೀರು ಉಕ್ಕಿ ಹರಿದು ಸಮಸ್ಯೆಯಾಯಿತು. ಹಾಗಾಗಿ ಈಗ ಮನೆಯಂಗಳದಲ್ಲೇ ಮಡಿ ಸಿದ್ಧಪಡಿಸಿ ಯಂತ್ರದ ಮೂಲಕ ನಾಟಿ ಮಾಡುತ್ತಿದ್ದೇನೆ. ಇದರಿಂದ ಪ್ರತಿ ಎಕರೆಗೆ 20 ಚೀಲಗಳಷ್ಟು ಇಳುವರಿಯಿದೆ. ಅಲ್ಲದೇ ಗುಣಮಟ್ಟದ ಹುಲ್ಲು ಕೂಡ ಸಿಗುತ್ತಿದೆ’ ಎಂದು ಹೇಳುತ್ತಾರೆ.

‘ಯಂತ್ರಗಳಿಗೆ ಸಬ್ಸಿಡಿ’:

‘ರಾಜ್ಯ ಕೃಷಿ ಇಲಾಖೆಯಿಂದ ಯಂತ್ರಧಾರೆ ಯೋಜನೆಯ ಮೂಲಕ ರೈತರು ಯಂತ್ರೋಪಕರಣಗಳನ್ನು ಪಡೆಯಲು ಅವಕಾಶವಿದೆ. ಭತ್ತದ ಮಡಿ ಮಾಡಲು ಟ್ರೇಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪೂರೈಸಲಾಗಿದೆ. ಬೀಜಗಳು ಮೊಳಕೆಯೊಡೆದು 25 ದಿನಗಳ ಒಳಗೆ ಯಂತ್ರದ ಮೂಲಕ ನಾಟಿ ಮಾಡಲು ಸಾಧ್ಯವಿದೆ. ಸಸಿಗಳಲ್ಲಿ ಹೆಚ್ಚು ಕವಲುಗಳು ಒಡೆದು ಚೆನ್ನಾಗಿ ಬೆಳೆಯುತ್ತದೆ. ಬಳಿಕ ಕಳೆ ತೆಗೆಯಲು ವೀಡರ್ ಯಂತ್ರವನ್ನು ಇಲಾಖೆಯಿಂದ ಸಬ್ಸಿಡಿಯಲ್ಲಿ ನೀಡಲಾಗುತ್ತದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT